ಶೀಘ್ರ ಪತ್ತೆ ಹಚ್ಚದಿದ್ದರೆ ಕಾಟಿಪಳ್ಳದಿಂದ ಸುರತ್ಕಲ್ ಠಾಣೆವರೆಗೆ ಪಾದಯಾತ್ರೆ: ಮುನೀರ್ ಕಾಟಿಪಳ್ಳ

Update: 2017-10-17 16:43 GMT

ಮಂಗಳೂರು, ಅ. 17: ರೌಡಿ ತಂಡದಿಂದ ಅಪಹರಣಕ್ಕೊಳಗಾಗಿರುವ ಕಾಟಿಪಳ್ಳದ ಯುವಕ ಸಫ್ವಾನ್‌ರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ ಎಂದು ಆರೋಪಿಸಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ಸಫ್ವಾನ್‌ರನ್ನು ಶೀಘ್ರ ಪತ್ತೆ ಹಚ್ಚದಿದ್ದಲ್ಲಿ ಕಾಟಿಪಳ್ಳದಿಂದ ಸುರತ್ಕಲ್ ಪೊಲೀಸ್ ಠಾಣೆಯವರೆಗೆ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ತಂಡದಿಂದ ಅಪಹರಣಕ್ಕೊಳಗಾಗಿದ್ದಾನೆನ್ನಲಾದ ಕಾಟಿಪಳ್ಳದ ಯುವಕ ಸಫ್ವಾನ್‌ನನ್ನು ಪತ್ತೆ ಹಚ್ಚಬೇಕೆಂದು ಒತ್ತಾಯಿಸಿ ಡಿವೈಎಫ್‌ಐ ಸುರತ್ಕಲ್ ಘಟಕದ ವತಿಯಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಫ್ವಾನ್ ಅಪಹರಣಕ್ಕೊಳಗಾಗಿ 13 ದಿನಗಳು ಕಳೆದಿವೆ. ಹೆತ್ತವರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರಿಗೆ ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆತ ಹೇಗಿದ್ದಾನೆ, ಯಾವ ಸ್ಥಿತಿಯಲ್ಲಿದ್ದಾನೆಂದು ಗೊತ್ತಿಲ್ಲ. ಮಗನ ಚಿಂತೆಯಲ್ಲಿ ಹೆತ್ತವರು, ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸಫ್ವಾನ್ ಪತ್ತೆಯಾಗುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಅಪಹರಣವಾದರೆ 24 ಗಂಟೆಯೊಳಗೆ ಅಪಹರಣಕಾರರ ಜಾಡು ಹಿಡಿದು ಬಂಧಿಸಿದ ಉದಾಹರಣೆಗಳು ಇವೆ. ಅಂತಹ ದಕ್ಷ ಪೊಲೀಸರು ಇಲಾಖೆಯಲ್ಲಿದ್ದಾರೆ. ಜನಸಾಮಾನ್ಯರಲ್ಲಿರುವ ಇಂತಹ ನಂಬಿಕೆಯನ್ನು ಪೊಲೀಸರು ಉಳಿಸಿಕೊಳ್ಳಬೇಕು. ಅಪಹರಣಕ್ಕೀಡಾಗಿರುವ ಸಫ್ವಾನ್‌ರನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಬೇಕು. ಆರೋಪಿಗಳನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ಪೊಲೀಸರ್ ಇಲಾಖೆಯ ಬಗ್ಗೆ ಕ್ರಿಮಿನಲ್‌ಗಳಿಗೆ ಹೆದರಿಕೆ ಇಲ್ಲದಂತಾಗಿದೆ. ಆದ್ದರಿಂದಲೇ ಇಂತಹ ಅಪಹರಣದಂತಹ ಕೃತ್ಯಗಳು ಮುಂದುವರಿಯಲು ಕಾರಣವಾಗಿವೆ. ಏನು ಮಾಡಿದರೂ ನಡೆಯುತ್ತವೆ ಎಂಬ ಭ್ರಮೆ ಅವರಲ್ಲಿದ್ದಂತಿದೆ. ಇಂತಹ ಭ್ರಮೆಯನ್ನು ತೊಲಗಿಸಿ ಕಾನೂನಿನ ಬಗ್ಗೆ ಹೆದರಿಕೆ ಹುಟ್ಟಿಸುವಂತಾಗಬೇಕು. ಕ್ರಿಮಿನಲ್‌ಗಳ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರು ನಿಗಾ ಇಡಬೇಕು ಎಂದರು.

ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ತಂಡದಿಂದ ಅಪಹರಣಕ್ಕೀಡಾಗಿರುವ ಸಫ್ವಾನ್‌ರನ್ನು ಪೊಲೀಸರು ಕೂಡಲೇ ಪತ್ತೆ ಹಚ್ಚಿ ಹೆತ್ತವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಂಗಳೂರು ನಗರ ಉಪಾಧ್ಯಕ್ಷರಾದ ಶ್ರೀನಾಥ್ ಕಾಟಿಪಳ್ಳ, ಅಶ್ರಫ್ ಅಸ್ಸು, ನಗರ ಕೋಶಾಧಿಕಾರಿ ಎ.ಬಿ.ನೌಶಾದ್, ಸುರತ್ಕಲ್ ವಲಯಾಧ್ಯಕ್ಷ ಅಜ್ಮಲ್ ಅಹ್ಮದ್, ಕಾರ್ಯದರ್ಶಿ ಬಿ.ಕೆ. ಮಕ್ಸೂದ್, ಶ್ರೀನಿವಾಸ ಹೊಸಬೆಟ್ಟು, ಹಂಝ ಮೈಂದಗುರಿ, ಮುಸ್ಬಾ ಕೃಷ್ಣಾಪುರ, ಸಲೀಂ ಶಾಡೊ, ಸಿರಾಜ್ ಕಾಟಿಪಳ್ಳ, ನಾಸಿರ್ ಕಾನಾ ಹಾಗೂ ಸಫ್ವಾನ್ ಅವರ ತಂದೆ ಅಬ್ದುಲ್ ಹಮೀದ್, ಹಿರಿಯ ಸಹೋದರ ಸಲ್ಮಾನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News