ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮನೆ, ನಿವೇಶನಕ್ಕಾಗಿ ಧರಣಿ

Update: 2017-10-17 16:59 GMT

ಉಡುಪಿ, ಅ.17: ಉಡುಪಿ ನಗರಸಭೆ ವ್ಯಾಪ್ತಿಯ ಮನೆ ನಿವೇಶನ ರಹಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಪಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಉಡುಪಿ ನಗರಸಭೆ ಕಚೇರಿ ಎದುರು ಧರಣಿ ನಡೆಸಲಾಯಿತು.

ನಗರಸಭಾ ವ್ಯಾಪ್ತಿಯ 76 ಬಡಗುಬೆಟ್ಟು, ಶಿವಳ್ಳಿ, ಪುತ್ತೂರು ಹಾಗೂ ಹೆರ್ಗ ಗ್ರಾಮಗಳಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಈಗಾಗಲೇ ನಿಗದಿಪಡಿಸಿದ 600 ಮಂದಿಗೆ ಕೂಡಲೇ ಹಕ್ಕುಪತ್ರ ನೀಡಲು ಸೂಕ್ತ ಕ್ರಮ ವಹಿಸಬೇಕು. ಅಪಾರ್ಟ್‌ಮೆಂಟ್ ಮಾದರಿಯಲ್ಲಿ ನಗರ ಆಶ್ರಯ ಮನೆಗಳನ್ನು ನಿರ್ಮಿಸಿ ವಿತರಿಸಲು ಯೋಜನೆಯನ್ನು ನಗರಸಭೆ ರೂಪಿಸಿಲ್ಲ. ಒಂದು ವೇಳೆ ಫ್ಲಾಟ್ ಬದಲು ಭೂಮಿಯೇ ಬೇಕು ಎನ್ನುವವರಿಗೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಸಂಘದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಒತ್ತಾಯಿಸಿದರು.

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಿದಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಗ್ರಾಪಂ ಹಾಗೂ ನಗರಸಭೆ ವ್ಯಾಪ್ತಿಯ 911 ಅರ್ಹ ಫಲಾನುಭವಿಗಳಿಗೆ ಶೀಘ್ರ ನಿವೇಶನ ಹಂಚಿಕೆ ಮಾಡಬೇಕು. ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಂದ 500ರೂ. ಠೇವಣಿ ಪಡೆದು 10ವರ್ಷ ಕಳೆದರೂ ನಿವೇಶನ ಹಂಚಿಕೆ ಮಾಡದೆ ದ್ರೋಹ ಮಾಡ ಲಾಗಿದೆ ಎಂದು ಅವರು ಆರೋಪಿಸಿದರು.

ಉಡುಪಿ ಮತ್ತು ಕಾಪು ಹೋಬಳಿ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳವನ್ನು ಅನಧಿಕೃತವಾಗಿ ಅಕ್ರಮಿಸಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಿ ಬಡ ನಿವೇಶನ ರಹಿತರಿಗೆ ಭೂಮಿ ಹಕ್ಕುಪತ್ರ ಮಂಜೂರು ಮಾಡಬೇಕು. ಈ ಎಲ್ಲ ಬೇಡಿಕೆ ಈಡೇರಿಸುವುದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾ ಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಭೂಮಾಪನ ಅಧಿಕಾರಿಗಳ ಸಮ್ಮುಖದಲ್ಲಿ ಕೃಷಿ ಕೂಲಿಕಾರರ ಸಂಘದ ಪದಾ ಧಿಕಾರಿಗಳ ಜತೆ ಜಂಟಿ ಸಭೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಕುರಿತ ಮನವಿಯನ್ನು ನಗರಸಭೆ ಕಂದಾಯ ಅಧಿಕಾರಿ ಚಂದ್ರ ಪೂಜಾರಿ ಸ್ವೀಕರಿಸಿದರು. ಧರಣಿಯಲ್ಲಿ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಎಚ್.ವಿಠಲ, ಕಾರ್ಯದರ್ಶಿ ಕವಿರಾಜ್, ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ದಾಸ ಭಂಡಾರಿ, ರಾಜು ಪಡುಕೋಣೆ, ನಾಗರತ್ನ, ಪದ್ಮಾವತಿ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಬನ್ನಂಜೆಯಿಂದ ನಗರಸಭೆ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

ಡಿಸೆಂಬರೊಳಗೆ ನಿವೇಶನ ಹಂಚಿಕೆ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 595 ಮಂದಿ ನಿವೇಶನ ರಹಿತರ ಪಟ್ಟಿ ಯನ್ನು ಸಿದ್ಧಪಡಿಸಲಾಗಿದ್ದು, ಈಗಾಗಲೇ ಹೆರ್ಗಾ ಹಾಗೂ ಶಿವಳ್ಳಿ ಗ್ರಾಮದಲ್ಲಿ ಗುರುತಿಸಿರುವ 11 ಎಕರೆ ಜಾಗದಲ್ಲಿ ಡಿಸೆಂಬರ್ ಅಂತ್ಯದೊಳಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಲಾಗುವುದು ಎಂದು ನಗರಸಭೆ ಕಂದಾಯ ಅಧಿಕಾರಿ ಚಂದ್ರ ಪೂಜಾರಿ ತಿಳಿಸಿದರು.

ಸಮಾವೇಶಕ್ಕೆ ನಗರಸಭೆಯಿಂದ ಅಡ್ಡಗಾಲು: ಆರೋಪ
ಬನ್ನಂಜೆ ನಾರಾಯಣ ಗುರು ಹಾಲ್‌ನಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಉಡುಪಿ ನಗರಸಭೆ ವ್ಯಾಪ್ತಿಯ ನಿವೇಶನ ರಹಿತರ ಸಮಾವೇಶಕ್ಕೆ ಅವಕಾಶ ನೀಡದಂತೆ ಉಡುಪಿ ನಗರಸಭೆ ಹುನ್ನಾರ ನಡೆಸಿದೆ ಎಂದು ಸಂಘದ ತಾಲೂಕು ಕಾರ್ಯದರ್ಶಿ ಕವಿರಾಜ್ ಆರೋಪಿಸಿದ್ದಾರೆ.

ಎರಡು ವಾರದ ಹಿಂದೆ ಹಾಲ್‌ನಲ್ಲಿ ಅವಕಾಶ ನೀಡುವಂತೆ ಕೇಳಿಕೊಂಡಿ ದ್ದೆವು. ಆದರೆ ನಗರಸಭೆ ಇದಕ್ಕೆ ಅಡ್ಡಗಾಲು ಹಾಕಿ ಹಾಲ್‌ನಲ್ಲಿ ಸಮಾವೇಶಕ್ಕೆ ಅವಕಾಶ ಕಲ್ಪಿಸದಂತೆ ಮಾಡಿದೆ. ಹೀಗಾಗಿ ಇಂದಿನ ಸಮಾವೇಶವನ್ನು ರದ್ದು ಪಡಿಸಿ ಕೇವಲ ಧರಣಿಯನ್ನು ನಡೆಸಲಾಯಿತು. ಅದೇ ರೀತಿ ಧರಣಿಗೂ ಅನುಮತಿ ನೀಡಲು ಮೀನಮೇಷ ನಡೆಸಿದ ನಗರಸಭೆ ಇಂದು ಬೆಳಗ್ಗೆ ಅನು ಮತಿ ನೀಡಿದೆ. ಅಲ್ಲದೆ ನನ್ನ ವಿರುದ್ಧ ಉಡುಪಿ ನಗರಸಭೆ ಪೌರಾಯುಕ್ತರು ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ಕವಿರಾಜ್ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News