ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಮಾಹಿತಿ ಕಾರ್ಯಾಗಾರ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಸೂಚನೆ

Update: 2017-10-19 16:36 GMT

ಉಡುಪಿ, ಅ.19: ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ, ಸರಕಾರದಿಂದ ಅವರಿಗೆ ದೊರಕುವ ಸೌಲಭ್ಯ ಹಾಗೂ ಹಕ್ಕುಗಳ ಬಗ್ಗೆ ಗ್ರಾಪಂ ಅಧಿಕಾರಿಗಳು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ನಡೆದ ವಿವಿಧ ಇಲಾಖೆಗಳ ಎಸ್‌ಸಿ,ಎಸ್‌ಪಿ ಮತ್ತು ಟಿಎಸ್‌ಪಿ 2017-18ನೇ ಸಾಲಿನ ರಾಜ್ಯವಲಯ ಮತ್ತು ಜಿಲ್ಲಾವಲಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅಧಿಕಾರಿಗಳು ಪ್ರತೀ ಪಂಚಾಯತ್‌ನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಶೇ.25ರಷ್ಟು ವೆಚ್ಚವಾದುದರ ಕುರಿತು ವರದಿ ಯನ್ನು ಒಪ್ಪಿಸಬೇಕು. ಅರ್ಹ ಫಲಾನುಭವಿಗಳು ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಕುರಿತು ಗಮನ ಹರಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಕಾನೂನು, ಆರೋಗ್ಯ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುವುದರ ಮೂಲಕ ಅವರ ಕಡ್ಡಾಯ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಡಿಸೆಂಬರ್ ತಿಂಗಳ ಒಳಗೆ ಇಲಾಖಾವಾರು ಗುರಿ ನಿಗದಿ ಪೂರ್ಣ ಗೊಂಡಿರಬೇಕು. ಕೊರಗ ಕಾಲನಿಗಳಲ್ಲಿರುವ ಕೊರಗ ಮಕ್ಕಳಿಗೆ ಹೆಚ್ಚುವರಿ ತರಗತಿಯನ್ನು ನಡೆಸಬೇಕು. ಅದಕ್ಕಾಗಿ ಶೀಘ್ರವೇ ಶಿಕ್ಷಕರನ್ನು ನೇಮಿಸಬೇಕು. ಅವರಿಗೆ ನೀಡಿದ ಮನೆ ನಿವೇಶನಗಳನ್ನು ಅವರೇ ಬಳಸಿಕೊಳ್ಳುವಂತೆ ನೋಡಿ ಕೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News