ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ಮೋದಿಸರಕಾರಕ್ಕೆ ಧೈರ್ಯವಿಲ್ಲವೇ: ಸುನಿಲ್ ಕುಮಾರ್ ಬಜಾಲ್‌

Update: 2017-10-19 17:51 GMT

ಮಂಗಳೂರು, ಅ. 19: ಕೇಂದ್ರದ ನರೇಂದ್ರ ಮೋದಿ ಸರಕಾರವು ಏಕಾಏಕಿ ನೋಟು ರದ್ಧತಿಯಿಂದ ಕಂಗೆಟ್ಟ ದೇಶದ ಜನತೆಯ ಮೇಲೆ ಜಿಎಸ್‌ಟಿ ಎಂಬ ಮತ್ತೊಂದು ಅಸ್ತ್ರವನ್ನು ಉಪಯೋಗಿಸಿ ಇನ್ನಷ್ಟು ಹೊಡೆತವನ್ನು ನೀಡಿದೆ. ‘ಒಂದೇ ದೇಶ ಒಂದೇ ತೆರಿಗೆ’ ಎಂಬ ಅಬ್ಬರದ ಪ್ರಚಾರ ನಡೆಸಿ ಪ್ರತಿಯೊಂದು ವಸ್ತುವಿನ ಮೇಲೆ ಈ ಹಿಂದಿನ ತೆರಿಗೆಗಿಂತಲೂ ದುಬಾರಿ ತೆರಿಗೆ ವಿಧಿಸಿ ಜನತೆಯನ್ನು ವಂಚಿಸಿದೆ. ಆದರೆ ದೇಶದಲ್ಲಿ ಅಂಬಾನಿ ನಿಯಂತ್ರಣದಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ಪ್ರಧಾನಿ ನರೇಂದ್ರ ಮೋದಿಗೆ ಯಾಕೆ ಸಾಧ್ಯವಾಗುತ್ತಿಲ್ಲ ? ಪೆಟ್ರೋಲ್, ಡೀಸೆಲ್‌ಗೆ ಜಿಎಸ್‌ಟಿ ವಿಧಿಸಿದಲ್ಲಿ ಅತ್ಯಂತ ಕಡಿಮೆ ದರಕ್ಕೆ ಲಭ್ಯವಾಗಲಿದ್ದು ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತಿತ್ತು. ಆದರೆ ಮೋದಿ ಸರಕಾರವು ಅದಕ್ಕೆ ಸಹಕಾರವನ್ನು ನೀಡದೆ ಆಳುವ ವರ್ಗಗಳ ತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದೆ ಎಂದು ಇದರಿಂದ ಸಾಬೀತಾಗಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದರು.

ಅವರು ಸಿಪಿಎಂ ಬೀದಿಬದಿ ವ್ಯಾಪಾರಸ್ಥರ ಶಾಖೆಗಳ ಸಮ್ಮೇಳನದ ಅಂಗವಾಗಿ ನಗರ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿ ಜರಗಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಿಪಿಎಂ ಯುವ ನಾಯಕ ಮುಹಮ್ಮದ್ ಮುಸ್ತಫಾ ಅವರು ದೇಶದ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಕಾರ್ಮಿಕ ವರ್ಗದ ಉತ್ತಮ ಬದುಕಿಗಾಗಿ ದುಡಿಯಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಮಾಲಕರ ಪರವಾಗಿ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ಸಿಪಿಎಂ ನಾಯಕರಾದ ಹರೀಶ್ ಪೂಜಾರಿ, ಶ್ರೀಧರ್, ಮುಹಮ್ಮದ್ ಆಸಿಫ್, ಅತಾವುಲ್ಲಾ, ಹಿತೇಶ್ ಪೂಜಾರಿ, ಮೇರಿ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News