ಪ್ರವಾಸೋದ್ಯಮ ಕೇಂದ್ರವಾಗಿ ಮಣ್ಣಪಳ್ಳ ಅಭಿವೃದ್ಧಿ: ಪ್ರಮೋದ್

Update: 2017-10-20 15:38 GMT

ಮಣಿಪಾಲ, ಅ.20: ಇಲ್ಲಿನ ಮಣ್ಣಪಳ್ಳವನ್ನು ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಕೆರೆಯ ಹೂಳೆತ್ತಿರುವುದರಿಂದ ಬೇಸಿಗೆಯ ಕೊನೆಯವರೆಗೆ ನೀರು ಇರುವ ಸಾಧ್ಯತೆ ಇದೆ ಎಂದು ರಾಜ್ಯ ಮೀನುಗಾರಿಕಾ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮಣ್ಣಪಳ್ಳಿದ ಬಳಿ ಸುಮಾರು ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಉಡುಪಿ ನಿರ್ಮಿತಿ ಕೇಂದ್ರದ ಆಡಳಿತ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

 ಇದೇ ಪ್ರದೇಶದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಎರಡು ಎಕರೆ ಜಾಗವನ್ನು ಕೇಳಲಾಗಿದ್ದು, ಅದರಲ್ಲಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು ಸ್ಥಾಪಿಸಲಾಗುವುದು. ಇದರಿಂದ ಮಣ್ಣಪಳ್ಳದಲ್ಲಿ ಸಾಹಸ ಕ್ರೀಡೆಯನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ಪ್ರಮೋದ್ ತಿಳಿಸಿದರು.

ರಾಜ್ಯಾದ್ಯಂತ ನಿರ್ಮಿತಿ ಕೇಂದ್ರದ ಮೇಲೆ ವಿಧಿಸಲಾಗಿರುವ ಗರಿಷ್ಠ ಎರಡು ಕೋಟಿ ರೂ.ಕಾಮಗಾರಿಯ ನಿರ್ಬಂಧದಿಂದ, ಉತ್ತಮವಾಗಿ ಕಾರ್ಯ ನಿರ್ವಹಿಸುವ ಉಡುಪಿಯಂಥ ಕೇಂದ್ರಗಳಿಗೆ ರಿಯಾಯಿತಿ ನೀಡುವ ಬಗ್ಗೆ ಸಂಬಂಧಿತ ಇಲಾಖೆಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

 ಶುಭಾಶಂಸನೆ ಮಾಡಿ ಮಾತನಾಡಿದ ಸಂಸ್ಕೃತ ವಿದ್ವಾಂಸ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರು, ಮನಸ್ಸು ಮಾಡಿದರೆ, ನಗರದಲ್ಲಿ ಉತ್ತಮ ವಾಸ್ತುವಿನಿಂದ ಕೂಡಿದ ಸುಂದರ ಕಟ್ಟಡಗಳನ್ನು ನಿರ್ಮಿಸಲು ಸಾದ್ಯವಿದೆ ಎಂಬುದಕ್ಕೆ ನಿರ್ಮಿತಿ ಕೇಂದ್ರದ ಈ ಕಟ್ಟಡವೇ ಸಾಕ್ಷಿ. ಮಧ್ವಾಚಾರ್ಯರು ಹುಟ್ಟಿದ ಪಾಜಕದಲ್ಲಿ 700 ಶತಮಾನ ಪೂರ್ವದ ಪರಿಸರ, ವಾತಾವರಣವನ್ನು ನೆನಪಿಸುವ ವಾಸ್ತುಗಳನ್ನೊಳಗೊಂಡ ಕಟ್ಟಡ ನಿರ್ಮಿಸಬೇಕೆಂಬ ಕನಸು ನನಗಿತ್ತು ಎಂದರು.

ಹಿಂದೆಲ್ಲಾ ಊರಿನ ಮನೆ, ದೇವಸ್ಥಾನ, ಟೌನ್‌ಶಿಪ್ ಹೇಗಿರಬೇಕೆಂಬ ಕಲ್ಪನೆ ನಮ್ಮ ಹಿರಿಯರಿಗಿತ್ತು. ಆದರೆ ಈಗ ನಮಗೆ ವಾಸ್ತುವಿನ ಬಗ್ಗೆ ಎಚ್ಚರ ಹೋಗಿದೆ. ಈಗ ಉಡುಪಿಯಲ್ಲಿ ಪ್ರಾಚೀನ ಎಂದು ಹೇಳಬಹುದಾದುದು ಶ್ರೀಕೃಷ್ಣ ಮಾತ್ರ. ಮಠಗಳೆಲ್ಲವೂ ನವೀಕರಣಗೊಂಡು ಆಧುನೀಕರಣಗೊಂಡಿದೆ ಎಂದವರು ನುಡಿದರು.

ನಾವೀಗ ಪ್ರಾಚೀನರ ವಾಸ್ತು ಹಾಗೂ ಪ್ರಾದೇಶಿಕತೆಯ ಪರಿಕಲ್ಪನೆಯನ್ನು ಕಳೆದುಕೊಂಡಿದ್ದೇವೆ. ವಾಸ್ತು ಹಾಗೂ ಸೌಂದರ್ಯ ಪ್ರಜ್ಞೆಯಿಂದ ನಗರದ ನಿರ್ಮಾಣಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

 ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದ ಅಧ್ಯಕ್ಷೆ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಿರ್ಮಿತಿ ಕೇಂದ್ರದ ಆರ್ಕಿಟೆಕ್ಟ್ ಹರೀಶ್ ಪೈ, ನಗರಸಭಾ ಸದಸ್ಯ ನರಸಿಂಹ ನಾಯಕ್ ಉಪಸ್ಥಿತರಿದ್ದರು.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‌ಕುಮಾರ್ ಅತಿಥಿ ಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News