ದೇಶದ ಮುಂದಿರುವ ವೈದ್ಯಕೀಯ ಸವಾಲುಗಳನ್ನು ಪರಿಹರಿಸಲು ಯುವ ವೈದ್ಯರು ಮುಂದಾಗಬೇಕು: ಡಾ.ಜಿ.ಕೆ.ರಥ್

Update: 2017-10-21 10:10 GMT

ಮಂಗಳೂರು, ಅ.21: ದೇಶದ ಮುಂದಿರುವ ವೈದ್ಯಕೀಯ ಸವಾಲುಗಳನ್ನು ಪರಿಹರಿಸಲು ಯುವ ವೈದ್ಯರು ಗಮನಹರಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ಸೆಂಟರ್‌ನ ಮುಖ್ಯಸ್ಥ ಹಾಗೂ ಹೊಸದಿಲ್ಲಿಯ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ರೇಡಿಯೇಶನ್ ಅಂಕೋಲಜಿ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಕೆ.ರಥ್ ಹೇಳಿದ್ದಾರೆ.

ದೇರಳಕಟ್ಟೆಯಲ್ಲಿರುವ ಯೆನೆಪೊಯ ವಿಶ್ವವಿದ್ಯಾನಿಲಯದ ಯೆಂಡುರೆನ್ಸ್ ಸಭಾಂಗಣದಲ್ಲಿ ಶನಿವಾರ ಜರಗಿದ ಯೆನೆಪೊಯ ವಿವಿಯ 7ನೆ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ದಿಕ್ಸೂಚಿ ಭಾಷಣ ಮಾಡಿದರು.

ಹಿಂದೆ ಯುವ ಪದವೀಧರರು ತಮ್ಮ ಭವಿಷ್ಯವನ್ನು ಕಂಡು ಕೊಳ್ಳಲು ವಿದೇಶಕ್ಕೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದ ವೈದ್ಯಕೀಯ ಕ್ಷೇತ್ರದ ಗುಣಮಟ್ಟ ವೃದ್ಧಿಯಾಗಿದೆ. ಕ್ಲಿನಿಕಲ್ ಸಂಶೋಧನಾ ವಿಭಾಗದಲ್ಲಿ ಯುವ ವೈದ್ಯರು ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದವರು ನುಡಿದರು.

ಯುವ ಪದವೀಧರರು ಕ್ಲಿನಿಕಲ್ ರೀಸರ್ಚ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಬೇಕಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಕ್ರಾಮಿಕ ರೋಗಗಳಾದ ಪ್ಲೇಗ್, ಮಲೇರಿಯಾ, ಕಾಲರಾದಿಂದ ಜನ ಸಾಯುತ್ತಿದ್ದರು. ಆಗ ಭಾರತದಲ್ಲಿ ಜನರ ಜೀವಿತಾವಧಿ ಸರಾಸರಿ 32 ವರ್ಷ ಆಗಿತ್ತು. ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದ ಈಗ ಇದು 68 ವರ್ಷಕ್ಕೆ ಏರಿಕೆಯಾಗಿದೆ. ಎಂದು ಡಾ.ರಥ್ ತಿಳಿಸಿದರು.

ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯಿಂದ ಮಾನವ ಜೈವಿಕ ಚಿತ್ರಣದ ನಕ್ಷೆಯನ್ನು ಕರಾರುವಕ್ಕಾಗಿ ಪಡೆದು ಚಿಕಿತ್ಸೆ ನೀಡುವ ಪ್ರಗತಿ ಸಾಧ್ಯವಾಗಿದೆ. ಇದರಿಂದ ಸಾಕಷ್ಟು ಚಿಕಿತ್ಸೆಗಳನ್ನು ಜನರಿಗೆ ತ್ವರಿತವಾಗಿ ಮತ್ತು ಸುಲಭವಾಗಿ ನೀಡಲು ಸಾಧ್ಯವಾಗುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯಿಂದ ಸಾಕಷ್ಟು ಮಾರಣಾಂತಿಕ ಕಾಯಿಲೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿದೆ. ಯುವ ವೈದ್ಯರು ಬೆಳೆಯುತ್ತಿರುವ ಈ ವಿಜ್ಞಾನ ಹಾಗೂ ತಂತ್ರಜ್ಞಾನದ ಅಗತ್ಯವನ್ನು ತಮ್ಮ ವೃತ್ತಿಯಲ್ಲಿ ಎಷ್ಟು ಅಗತ್ಯವಿದೆ ಎಂದು ಯೋಚಿಸಿ ಬಳಸಿಕೊಳ್ಳಬೇಕಾಗಿದೆ ಎಂದು ಡಾ.ರುಥ್ ಕಿವಿಮಾತು ಹೇಳಿದರು.

ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದುಬೈಯ ಕೆ.ಇ.ಎಫ್. ಹೋಲ್ಡಿಂಗ್ಸ್ ಅಧ್ಯಕ್ಷ ಫೈಝಲ್ ಇ. ಕೊಟ್ಟಿಕೊಲ್ಲನ್ ಮಾತನಾಡಿ, ತಂತ್ರಜ್ಞಾನ ಬೆಳೆಯುತ್ತಿರುವ ವೇಗದಲ್ಲೇ ವೈದ್ಯಕೀಯ ರಂಗದಲ್ಲೂ ಸಂಶೋಧನೆಗಳು ಆಗಬೇಕಿದೆ. ಆ ಮೂಲಕ ಜನರನ್ನು ಕಾಡುವ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಬೇಕು ಎಂದರು.

ಯೆನೆಪೊಯ ವಿವಿ ಕುಲಸಚಿವ ಡಾ.ಜಿ.ಶ್ರೀಕುಮಾರ್ ಮೆನನ್, ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್‌ನ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ, ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಟ್ರಸ್ಟಿಗಳಾದ ಡಾ.ಹಬೀಬ್ ರಹ್ಮಾನ್, ಖಾಲಿದ್ ಬಾವ, ಪರೀಕ್ಷಾಂಗ ನಿಯಂತ್ರಕ ಡಾ.ಬಿ.ಟಿ.ನಂದೀಶ್, ವಿವಿಯ ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಬಿ.ಎಚ್.ಶ್ರೀಪತಿ ರಾವ್, ಡಾ.ಗುಲಾಮ್ ಜೀಲಾನಿ ಖಾದ್ರಿ, ಡಾ.ಡೆವಿನಾ ಇ. ರೊಡ್ರಿಗಸ್, ಪ್ರೊ.ಪದ್ಮ ಕುಮಾರ್ ಎಸ್., ಆಡಳಿತ ಮಂಡಳಿಯ ಸದಸ್ಯರಾದ ಡಾ.ವೇದ ಪ್ರಕಾಶ್ ಮಿಶ್ರಾ, ಪ್ರೊ.ಬಿ.ಎ.ವಿವೇಕ ರೈ, ಡಾ.ಕಮಲಕಾಂತ್ ಶೆಣೈ, ಡಾ.ಸಂಪತ್ತಿಲ ಪದ್ಮನಾಭ, ಎರಿಕ್ ಸಿ. ಲೋಬೊ ಮೊದಲಾದವರು ಉಪಸ್ಥಿತರಿದ್ದರು.

ಯೆನೆಪೊಯ ವಿವಿ ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್ ಸ್ವಾಗತಿಸಿದರು. ಡಾ.ರೋಚಿಲ್ ಟೆಲ್ಲೀಸ್ ಮತ್ತು ಸುನೀತಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News