‘ಸೌಕರ್ಯದ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಭೀತಿ’

Update: 2017-10-22 13:36 GMT

ಬ್ರಹ್ಮಾವರ, ಅ.22: ಮೂಲಭೂತ ಸೌಕರ್ಯದ ಕೊರತೆಯಿಂದ ರಾಜ್ಯದ ಅನೇಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಾಲಿಗ್ರಾಮ ಗುಂಡ್ಮಿಯ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಶನಿವಾರ ನಡೆದ ಹಂಗಾರಕಟ್ಟೆ- ಐರೋಡಿ ಯಕ್ಷಗಾನ ಕಲಾಕೇಂದ್ರದ ಸಂಸ್ಥಾಪಕ, ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿ.ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದಲ್ಲಿರುವ 48 ಸಾವಿರ ಶಿಕ್ಷಣ ಸಂಸ್ಥೆಗಳಿಗೆ ಸರಿಸುಮಾರು ಶೇ.13ರಷ್ಟು ಖರ್ಚು ಆಗುತ್ತಿದ್ದರೂ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ಅಲ್ಲಿಗೆ ಮೂಲ ಭೂತ ಸೌಕರ್ಯ ಮಾತ್ರ ನೀಡಿಲ್ಲ. ಆದುರಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಮಕ್ಕಳು ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಶಿಕ್ಷಣ ತಜ್ಞ ಕಂಬದಕೋಣೆ ಪ್ರಕಾಶ ರಾವ್ ಅವರಿಗೆ ಸದಾನಂದ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಜನಾರ್ದನ ಮರವಂತೆ ಅಭಿನಂದನಾ ಮಾತುಗಳನ್ನಾಡಿದರು. ಯಕ್ಷಗಾನ ವಿದ್ವಾಂಸ ಡಾ.ಪಿ.ಆನಂದ ರಾಮ ಉಪಾಧ್ಯ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ವೈಕುಂಠ ಹೆಬ್ಬಾರ್ ಉಪಸ್ಥಿತರಿದ್ದರು.

ಕಲಾಕೇಂದ್ರದ ಆನಂದ್ ಸಿ.ಕುಂದರ್ ಸ್ವಾಗತಿಸಿದರು. ರಾಮಚಂದ್ರ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಘ ಶ್ಯಾಮ ಹೆಬ್ಬಾರ್ ಸನ್ಮಾನಪತ್ರ ವಾಚಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ವಂದಿಸಿದರು. ಸುಧಾಕರ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ನಂತರ ಲಾವಣ್ಯ ಬೈಂದೂರ ಇವರಿಂದ ಮುದ್ದಣನ ಪ್ರಮೋಶನ್ ಪ್ರಸಂಗ ಎಂಬ ಹಾಸ್ಯ ನಾಟಕ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News