ನೆನಪೊಂದು ಕಥೆ ಹಲವು’ ಕಥಾ ಸಂಕಲನ ಬಿಡುಗಡೆ
ಉಡುಪಿ, ಅ.22: ಅಡಪಾಡಿ ವಿಜೇಂದ್ರನಾಥ ಶೆಣೈ ಮತ್ತು ಮಕ್ಕಳು ಹಾಗೂ ಉಡುಪಿ ರೋಟರಿ ಜಂಟಿ ಆಶ್ರಯದಲ್ಲಿ ದಿ.ಮಾಯಾ ವಿ.ಶೆಣೈ ಅವರ ‘ನೆನಪೊಂದು ಕಥೆ ಹಲವು’ ಕಥಾ ಸಂಕಲನವನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತ ರಾಮ್ ರವಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಿದರು.
ಕೃತಿ ಪರಿಚಯ ಮಾಡಿದ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮಾತ ನಾಡಿ, ಒಬ್ಬ ಕಥೆಗಾರನಿಗೆ ಕಥೆಗಳನ್ನು ಬರೆಯಲು ಸೂಕ್ಷ್ಮಗ್ರಾಹಿ ಗುಣ ಇರ ಬೇಕು. ಜೀವನ ಅನುಭವವೇ ಕಥಾ ವಸ್ತು ಆಗಬೇಕು. ಮಾಯಾ ಅವರ ಕಥೆಗಳು ಚಲನಾಶೀಲವಾಗಿವೆ. ಅವರ ನೋಟದಲ್ಲಿ ಮೌಲ್ಯ ಇರುವುದರಿಂದ ಕತೆಗಳು ಕೂಡ ಮೌಲಿಕವಾಗಿವೆ ಎಂದರು.
ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ವಹಿಸಿದ್ದರು. ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಮಾಧುರಿ ಶೆಣೈ, ದೇವದಾಸ ಶೆಣೈ ಉಪಸ್ಥಿತರಿದ್ದರು. ವಿಜಯೇಂದ್ರ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುರೇಶ್ ಶೆಣೈ ಕಾರ್ಯ ಕ್ರಮ ನಿರೂಪಿಸಿದರು.