ಸಮಾನ ವೇತನಕ್ಕೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಕೆ

Update: 2017-10-23 17:05 GMT

ಉಡುಪಿ, ಅ.23: ಕೇಂದ್ರ ಸರಕಾರಿ ನೌಕರರಿಗೆ ದೊರೆಯುವ ಸಮಾನ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರಕಾರಿ ನೌಕರರಿಗೂ ಮಂಜೂರು ಮಾಡುವಂತೆ ಆಗ್ರಹಿಸಿ ಅ.25ರ ಬುಧವಾರ ಅಪರಾಹ್ನ 1:30ಕ್ಕೆ ಜಿಲ್ಲಾಧಿಕಾರಿ ಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುದೆಂದು ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಇವರು ತಿಳಿಸಿದರು.

ಈ ಹಿಂದೆ ನೌಕರರ ವೇತನ ಹಾಗೂ ಭತ್ಯೆ ಹೆಚ್ಚಳ ಕುರಿತು ಮುಖ್ಯಮಂತ್ರಿ ಗಳೊಂದಿಗೆ ಅನೇಕ ಬಾರಿ ಚರ್ಚಿಸಿದ್ದು, ಅದರಂತೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ 6ನೇ ವೇತನ ಆಯೋಗ ರಚಿಸಿ 4 ತಿಂಗಳೊಳಗೆ ಅಂತಿಮ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ ಪ್ರಸ್ತುತ ವೇತನ ಆಯೋಗವು ಕೆಲವು ತಾಂತ್ರಿಕ ಕಾರಣ ನೀಡಿ ಕಾಲಾವಧಿ ಯನ್ನು ಪುನಃ ನಾಲ್ಕು ತಿಂಗಳು ವಿಸ್ತರಿಸಲು ಕೋರಿದೆ. ಅದರಂತೆ ಸರಕಾರ 2018ರ ಜನವರಿ 31ರವರೆಗೆ ಕಾಲಾವಕಾಶ ವಿಸ್ತರಿಸಿದೆ.

ಇದರಿಂದಾಗಿ ಸರಕಾರಿ ನೌಕರರು ಆತಂಕಕ್ಕೆ ಒಳಗಾಗುವಂತಾಗಿದೆ. ಅಲ್ಲದೇ ಈಗಾಗಲೇ ಕೇಂದ್ರ ಸರಕಾರದ 7ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ರಾಷ್ಟ್ರಾದ್ಯಂತ ಸುಮಾರು 26 ರಾಜ್ಯ ಸರಕಾರಗಳು ತನ್ನ ನೌಕರರಿಗೆ ಅನುಷ್ಠಾನ ಗೊಳಿಸಿದ್ದು, ಕರ್ನಾಟಕ ರಾಜ್ಯ ಸರಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಕನಿಷ್ಠ ಮೂಲ ವೇತನದ ಶೇ.51ರಷ್ಟು ಹಾಗೂ ಗರಿಷ್ಠ ಮೂಲ ವೇತನದ ಶೇ.135ರಷ್ಟು ವ್ಯತ್ಯಾಸ ಉಂಟಾಗಿದೆ. ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರು ಇಡೀ ರಾಷ್ಟ್ರದಲ್ಲಿ ಅತೀ ಕಡಿಮೆ ವೇತನ ಪಡೆಯುತ್ತಿರುವ ಸರಕಾರಿ ನೌಕರಾಗಿದ್ದಾರೆ. ಆದ್ದರಿಂದ ಆರನೇ ವೇತನ ಆಯೋಗ ತನ್ನ ಅಂತಿಮ ವರದಿ ಸಲ್ಲಿಸುವ ಪೂರ್ವದಲ್ಲಿ 2017ರ ಎ1ರಿಂದ ಪೂರ್ವಾನ್ವಯವಾಗಿ ರಾಜ್ಯ ಸರಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡುವುದರ ಜೊತೆಗೆ ಇದೇ ನವೆಂಬರ್ ತಿಂಗಳ ಕೊನೆಯೊಳಗೆ ಆಯೋಗದ ಅಂತಿಮ ವರದಿಯನ್ನು ಪಡೆದು ಎ.1ರಿಂದ ಪೂರ್ವಾನ್ವಯವಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯ ಸರಕಾರಿ ನೌಕರರಿಗೆ ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News