ಅಚ್ಚೇದಿನ್ ಸಾಮಾನ್ಯ ಜನರಿಗೆ ಮಾರಕ: ವಿಶ್ವಾಸ್ ಅಮೀನ್

Update: 2017-10-23 18:36 GMT

ಕಾಪು, ಅ, 23: ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇ ದಿನ್ ಘೋಷಣೆ ಕೇಂದ್ರ ಸರ್ಕಾರದ ನಡೆ ಸಾಮಾನ್ಯ ವರ್ಗದ ಜನರಿಗೆ ಮಾರಕವಾಗುತ್ತಿವೆ ಎಂದು  ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ವಿಶ್ವಾಸ್ ಅಮೀನ್ ಹೇಳಿದರು.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕಾಪು ಪೇಟೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಕಂಪೆನಿಯ ವಹಿವಾಟು ಏರಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜನರನ್ನು ಮರಳುಮಾಡಿ ಅಧಿಕಾರ ಪಡೆದುಕೊಂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಚ್ಚೇದಿನ್ ಕೇವಲ ಸಿರಿವಂತರಿಗೆ ಸೀಮಿತ ವಾಗಿಬಿಟ್ಟಿದೆ. ಮೋದಿಯವರ ಲೆಕ್ಕಾಚಾರದಂತೆ ಅದಾನಿ, ಅಂಬಾನಿ, ರಾಮದೇವ್, ಅಮಿತ್ ಶಾ ಸೇರಿದಂತೆ ಇತರ ಉದ್ಯಮಿಗಳು ಮಾತ್ರಾ ಅಚ್ಚೇ ದಿನ್ ಘೋಷಣೆಯ ಲಾಭ ಪಡೆಯುತ್ತಿದ್ದಾರೆ. ಬಿಜೆಪಿಯ ನೇತೃತ್ವ ವಹಿಸಿರುವ ಮೋದಿ ಮತ್ತು ಅಮಿತ್ ಶಾ ಅವರಿಗೆ ಅವರದ್ದೇ ಪಕ್ಷದ ಭ್ರಷ್ಟಾಚಾರಿಗಳು ಕಾಣಿಸುತ್ತಲೇ ಇಲ್ಲ. ಬಿಜೆಪಿಗೆ ಕಪ್ಪ ನೀಡಿರುವ ಬಗ್ಗೆ ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಅವರ ವಿರುದ್ಧ ತನಿಖೆಯಿಂದಲೂ ಧೃಡಪಟ್ಟಿದ್ದು, ನೈತಿಕತೆಯಿದ್ದರೆ ಇಬ್ಬರು ನಾಯಕರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ನೋಟ್ ಬ್ಯಾನ್, ಜಿಎಸ್‌ಟಿ ಹೇರಿಕೆ ಮತ್ತು ಕೈಗಾರಿಕೋದ್ಯಮಿಗಳಿಗೆ ನೆರವು ಸಹಿತವಾಗಿ ಉದ್ಯಮಿ ಗಳನ್ನು ಬೆಳೆಸುತ್ತಿರುವ ಕೇಂದ್ರ ಸರಕಾರ ಬಡವರ ಹೊಟ್ಟೆಯ ಅನ್ನಕ್ಕೆ ಕಲ್ಲು ಹಾಕುತ್ತಿದೆ. ಇಂತಹ ಸರಕಾರದ ವಿರುದ್ಧ ಹೋರಾಟಕ್ಕೆ ಯುವ ಕಾಂಗ್ರೆಸ್ ಪಡೆ ಸಿದ್ಧವಾಗಬೇಕಿದೆ ಎಂದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಉಡುಪಿ ಜಿಲ್ಲಾ ವೀಕ್ಷಕ ಉಮೇಶ್ ಬೋರೇಗೌಡ, ರಾಜ್ಯ ಮುಖಂಡ ಸುಹೈಲ್ ಕಂದಕ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ,ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ದೀಪಕ್ ಕುಮಾರ್ ಎರ್ಮಾಳ್, ಪುರಸಭಾ ಅಧ್ಯಕ್ಷೆ ಸೌಮ್ಯ ಎಸ್., ಉಪಾಧ್ಯಕ್ಷ ಎಚ್. ಉಸ್ಮಾನ್, ತಾ. ಪಂ. ಸದಸ್ಯರಾದ ಗೀತಾ ವಾಗ್ಲೆ, ಮೈಕಲ್ ಡಿೞಸೋಜ, ರಾಜೇಶ್ ಶೆಟ್ಟಿ, ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ಪಕ್ಷದ ಮುಖಂಡರಾದ ಎಚ್. ಅಬ್ದುಲ್ಲಾ, ಕಿರಣ್ ಕುಮಾರ್, ಅಮೀರ್ ಮಹಮ್ಮದ್, ಇಮ್ರಾನ್, ಸದಾನಂದ ಶೆಟ್ಟಿ, ಮಾಧವ ಪಾಲನ್, ಕೆ.ಆರ್. ಪಾಟ್ಕರ್, ಪ್ರಭಾಕರ ಆಚಾರ್ಯ, ಫರ್ಝಾನಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News