ಉದ್ಯೋಗ ಸೃಷ್ಠಿಸದ ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

Update: 2017-10-24 07:55 GMT

ಉಡುಪಿ, ಅ. 24: ದೇಶದ ಯುವಕರಿಗೆ ವರ್ಷಕ್ಕೆ ಶೇ.10ರಷ್ಟು ಉದ್ಯೋಗ ಸೃಷ್ಟಿ ಮಾಡದ ಕೇಂದ್ರ ಬಿಜೆಪಿ ಸರಕಾರದ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮಂಗಳವಾರ ಉಡುಪಿ ಪ್ರಧಾನ ಅಂಚೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿತು.

ಅಂಚೆ ಕಚೇರಿಯ ಆವರಣದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಉಮೇಶ್ ಬೋರೆ ಗೌಡ, ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿ ನೀಡಿದ ಒಂದೇ ಒಂದು ಭರವಸೆಯನ್ನು ಈವರೆಗೆ ಈಡೇರಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಶೇ.10ರಷ್ಟು ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ ಕೇವಲ ಭರವಸೆಗಳನ್ನು ನೀಡುತ್ತ ಮೂರು ವರ್ಷ ಕಳೆದಿದ್ದಾರೆ. ದೇಶಾದ್ಯಂತ ಯುವಕರ ಆಕ್ರೋಶ ಭುಗಿಲೇಳುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಹಿಂದಿನ ಯುಪಿಎ ಸರಕಾರ ಜಾರಿ ತಂದಿರುವ ಯೋಜನೆಗಳ ಹೆಸರು ಬದಲಾಯಿಸಿ ಜಾರಿಗೆ ತರಲಾಗುತ್ತಿದೆಯೇ ಹೊರತು ಈವರೆಗೆ ಯಾವುದೇ ಹೊಸ ಯೋಜನೆಯನ್ನು ಬಿಜೆಪಿ ಸರಕಾರ ತಂದಿಲ್ಲ. ದೇಶದ ಜಿಡಿಪಿ ಇಳಿಕೆಯಾಗಿ ಭಾರತ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಅವರು ಟೀಕಿಸಿದರು.

ಬಳಿಕ ಪ್ರತಿಭಟನಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅಂಚೆ ಕಚೇರಿಯ ಪ್ರಮುಖ ಬಾಗಿಲಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ಅದೇ ರೀತಿ ಅಂಚೆ ಕಚೇರಿಯ ಗೇಟಿಗೂ ಬೀಗ ಜಡಿಯಲಾಯಿತು.

ಈ ವೇಳೆ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ಮೆಲ್ವಿನ್ ಡಿಸೋಜ, ವಿಘ್ನೇಶ್ ಕಿಣಿ, ಸುಹೈಲ್ ಕಂದಕ್, ಯತೀಶ್ ಕರ್ಕೇರ, ಪ್ರಶಾಂತ್ ಪೂಜಾರಿ, ಸುಜಯ್ ಪೂಜಾರಿ, ಪ್ರಖ್ಯಾತ್ ಶೆಟ್ಟಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಅಲ್ಮೇಡಾ, ಹಬೀಬ್ ಅಲಿ, ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News