ಆಳ್ವಾಸ್ ನುಡಿಸಿರಿ ಪ್ರಯುಕ್ತ ರಾಜ್ಯ ಮಟ್ಟದ ಪುರುಷ- ಮಹಿಳೆಯರ ಕುಸ್ತಿ ಪಂದ್ಯಾಟ

Update: 2017-10-24 12:18 GMT

ಮಂಗಳೂರು, ಅ.24: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಿಸೆಂಬರ್ 1ರಿಂದ 3ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಅಂಗವಾಗಿ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟ ನಡೆಯಲಿದೆ.

ಕರ್ನಾಟಕ ಕುಸ್ತಿ ಸಂಘ ಹಾಗೂ ದ.ಕ. ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಆಶ್ರಯದಲ್ಲಿ ದ್ವಿತೀಯ ಬಾರಿಯ ರಾಜ್ಯ ಕುಸ್ತಿ ಪಂದ್ಯಾಟವು ಆಳ್ವಾಸ್ ಕಾಲೇಜಿನ ವಿದ್ಯಾಗಿರಿ ಮೈದಾನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಕುಸ್ತಿ ಸಂಘದ ರಾಜ್ಯಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟಿ್ಟ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ಸುಮಾರು 200 ಮಂದಿ ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ನ. 30ರಂದು ಸಂಜೆ 3ರಿಂದ 6 ಗಂಟೆಯವರೆಗೆ ಕುಸ್ತಿ ಪಟುಗಳ ದೇಹತೂಕ ತಪಾಸಣೆ ವಿದ್ಯಾಗಿರಿ ಕಾಲೇಜಿ ಆವರಣದಲ್ಲಿ ನಡೆಯಲಿದೆ.

ಪುರುಷರ ವಿಭಾಗದಲ್ಲಿ 57, 61, 65, 70, 74, 86 ಮತ್ತು 86+ ಕೆಜಿಯಲ್ಲಿ ಹಾಗೂ ಮಹಿಳಾ ವಿಭಾಗದಲ್ಲಿ 42, 48, 53, 58, 63 ಮತ್ತು 63+ ಕೆಜಿ ತೂಕದಲ್ಲಿ ಸ್ಪರ್ಧೆ ನಡೆಯಲಿದೆ. ಪುರುಷರ 65 ಕೆಜಿ ವಿಭಾಗದ ವಿಜೇತರಿಗೆ ‘ಆಳ್ವಾಸ್ ನುಡಿಸಿರಿ ಕುಮಾರ 2017’ ಹಾಗೂ 86 ಕೆಜಿ ವಿಭಾಗಕ್ಕೆ ‘ಆಳ್ವಾಸ್ ನುಡಿಸಿರಿ ಕೇಸರಿ 2017’ ಹಾಗೂ ಮಹಿಳಾ ವಿಭಾಗದ 42 ಕೆಜಿ ವಿಜೇತರಿಗೆ ‘ಆಳ್ವಾಸ್ ನುಡಿಸಿರಿ ಕುವರಿ 2017’ ಪ್ರಶಸ್ತಿಗಳನ್ನು ನೀಡಲಾಗುವುದು. ಇದಲ್ಲದೆ ಈ ಮೂರು ಪ್ರಶಸ್ತಿಗಳ ಜತೆಗೆ ಬೆಳ್ಳಿ ಗದೆಯನ್ನು ವಿಜೇತರಿಗೆ ನೀಡಲು ಆಳ್ವಾಸ್ ಸಂಸ್ಥೆಯ ರುವಾರಿ ಡಾ. ಎಂ. ಮೋಹನ್ ಆಳ್ವ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ದ.ಕ. ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಕರ್ಕೇರ, ಹಿರಿಯ ಸಲಹೆಗಾರ ವಿ.ಜಿ. ಪಾಲ್, ಉಪಾಧ್ಯಕ್ಷ ಸತೀಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News