ಅನ್ಯಾಯ, ಅಸಮಾನತೆ ವಿರುದ್ಧ ಧ್ವನಿ ಎತ್ತಿದರೆ 'ದೇಶದ್ರೋಹ'ದ ಪಟ್ಟ: ತೀಸ್ತಾ ಸೆಟಲ್ವಾಡ್

Update: 2017-10-24 16:12 GMT

ಮಂಗಳೂರು, ಅ. 24: ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ಜನರ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಅನ್ಯಾಯ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರೆ ದೇಶದ್ರೋಹ ಎಂದು ಬಿಂಬಿಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದರು.

ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮಂಗಳವಾರ ನಡೆದ ದಶ ವಾರ್ಷಿಕ ಕಾಲೇಜು ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಧರ್ಮಾಧಾರಿತ ದೇಶ ಸ್ಥಾಪನೆಯನ್ನು ಭಾರತ 1947ರಲ್ಲೇ ತಿರಸ್ಕರಿಸಿತ್ತು. ಧರ್ಮ, ಜಾತಿ, ಭಾಷೆಗಳ ಆಧಾರದಲ್ಲಿ ಪೌರತ್ವ ನಿರ್ಧರಿಸು ವುದನ್ನೂ ತಿರಸ್ಕರಿಸಿತ್ತು. ದೇಶದ ಸಂವಿಧಾನದ ಮೌಲ್ಯಗಳನ್ನು ದಮನ ಮಾಡುವ ಕೆಲಸ ಇತ್ತೀಚೆಗೆ ಆರಂಭವಾಗಿದೆ. ಇದರಿಂದ ದೇಶ ಅಪಾಯದ ಕಡೆಗೆ ಸಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದವರು ಹಲವು ವರ್ಷಗಳ ಬಳಿಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಬಾಬರಿ ಮಸೀದಿಯನ್ನು ಕೆಡವಿ ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದವರು ಈಗ ತಾಜ್ ಮಹಲ್ ಮೇಲೆ ಕಣ್ಣಿಟ್ಟಿದ್ದಾರೆ. ಅನ್ಯಾಯ, ಅಸಮಾನತೆಗಳ ಬಗ್ಗೆ ಆಳು ವವರನ್ನು ಪ್ರಶ್ನಿಸುವವರ ಜೀವಕ್ಕೆ ಸಂಚಕಾರ ತರುವಂತಹ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿಯವರ ಬಳಿಕ ಇತ್ತೀಚೆಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಲಾಗಿದೆ. ಇದು ನಮ್ಮ ದೇಶದ ಪ್ರಾಚೀನ ಕಾಲದತ್ತ ಮುಖ ಮಾಡಿರುವುದಕ್ಕೆ ಸಾಕ್ಷಿ ಎಂದು ತೀಸ್ತಾ ಸೆಟಲ್ವಾಡ್ ಹೇಳಿದರು.

ಈಗ ದೇಶದಲ್ಲಿ 20 ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಶೇ.27ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ. ದಲಿತರ ತಲೆಯ ಮೇಲೆ ಮಲ ಹೊರುವ ಪದ್ಧತಿ ಇನ್ನೂ ನಿಂತಿಲ್ಲ. ಇದೆಲ್ಲವನ್ನೂ ಪ್ರಶ್ನಿಸಲು ಹೊರಡುವವರ ಬಾಯಿ ಮುಚ್ಚಿಸಲು ದೊಡ್ಡ ಪಡೆಯೇ ಇದೆ ಎಂದು ಅವರು ಹೇಳಿದರು.

ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ. ಡಯೋನಿಷಿಯಸ್ ವಾಝ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಫಾ.ಎರಿಕ್ ಮಥಾಯ್ಸೆ, ಪ್ರಾಂಶುಪಾಲೆ ಡಾ. ಫರಿಟಾ ವೇಗಸ್, ಸಿಬ್ಬಂದಿ ಸಂಯೋಜಕ ಸಂತೋಷ್ ಫುರ್ಟಾಡೊ ಹಾಗೂ ಇತರರು ಈ ಸಂದರ್ಭ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News