ಉಡುಪಿ: ಯಕ್ಷಕಲಾವಿದ ಕಡಂದೇಲು ಶತಸ್ಮತಿ ಕಾರ್ಯಕ್ರಮ

Update: 2017-10-25 15:23 GMT

ಉಡುಪಿ, ಅ.25: ಹಿರಿಯ ಸ್ತ್ರೀ ವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ ಇವರ ಶತಸ್ಮತಿ ಕಾರ್ಯಕ್ರಮ ‘ಮರ್ಯಾದಾ ಪುರುಷೋತ್ತಮ’ ಉಡುಪಿ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಅ.29ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ದಿನವಿಡೀ ನಡೆಯಲಿದೆ.

ಬೆಳಗ್ಗೆ ಹತ್ತು ಗಂಟೆಗೆ ಪರ್ಯಾಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀವಿಶ್ವೇಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಹಿರಿಯ ಹಿಮ್ಮೇಳ ವಾದಕ ಹಿರಿಯಡ್ಕ ಗೋಪಾಲ್ ರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಉದ್ಘಾಟನಾ ಸಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ಯಕ್ಷಗಾನ ಕಲೆಗೆ ತಮ್ಮನ್ನು ಸಮರ್ಪಿಸಿಕೊಂಡ ಹಿರಿಯ ಕಲಾವಿದರುಗಳಾದ ಬಲಿಪ ನಾರಾಯಣ ಭಾಗವತ,ಹೊಸ್ತೋಟ ಮಂಜುನಾಥ ಭಾಗವತ, ಪಾತಾಳ ವೆಂಕಟರಮಣ ಭಟ್, ಮಾರ್ಗೋಳಿ ಗೋವಿಂದ ಶೇರಿಗಾರ್, ಕೆ.ಗೋವಿಂದ ಭಟ್, ಬೇತಕುಂಞ ಕುಲಾಲ್, ಪೆರುವೋಡಿ ನಾರಾಯಣ ಭಟ್, ಮುಳಿಯಾಲ ಭೀಮ ಭಟ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಶಿಮಂತೂರು ನಾರಾಯಣ ಶೆಟ್ಟಿ, ಅರುವ ಕೊರಗ ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯ, ರೆಂಜಾಳ ರಾಮಕೃಷ್ಣ ರಾವ್, ಎಂ.ಕೆ.ರಮೇಶ್ ಆಚಾರ್ಯ ಭಾಗವಹಿಸಲಿದ್ದಾರೆ.

ಸಂಜೆ ಐದು ಗಂಟೆಗೆ ಶ್ರೀವಿಶ್ವೇಶತೀರ್ಥ ಶ್ರೀ ಅಧ್ಯಕ್ಷತೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸ್ಮತಿ ಗೌರವ ಮತ್ತು ಸ್ಮತಿಕೃತಿ ಬಿಡುಗಡೆ ನಡೆಯಲಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ‘ಮರ್ಯಾದಾ ಪುರುಷೋತ್ತಮ’ ಕೃತಿ ಅನಾವರಣ ಮಾಡಲಿ ದ್ದಾರೆ. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಸಂಸ್ಮರಣ ಭಾಷಣ ಮಾಡುವರು. ಲಕ್ಷ್ಮೀನಾರಾಯಣ ಅಸ್ರಣ್ಣ, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಜಯರಾಮ ಬನಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ನಡುವೆ ಬೆಳಗ್ಗೆ 11ರಿಂದ 1:30ರವರೆಗೆ ‘ಪುರಾಣ ಮಂಥನ’, ಅಪರಾಹ್ನ 2:30ರಿಂದ 4:30ರವರೆಗೆ ‘ಜೀವನಯಾನ’ ಗೋಷ್ಠಿಗಳು ಸಂಪನ್ನ ಗೊಳ್ಳಲಿವೆ. ಸಂಜೆ 6:30ರಿಂದ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಸಹಯೋಗ ದಲ್ಲಿ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ಪ್ರದರ್ಶನ ಜರಗಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News