ಪ್ರಾಧಿಕಾರದ ಮಂಜೂರಾತಿ ಇಲ್ಲದೆ ಹೊಸ ಕಾಮಗಾರಿ ಅಸಾಧ್ಯ

Update: 2017-10-25 15:25 GMT

ಕಾಪು, ಅ.25: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಉದ್ಯಾವರದಿಂದ ಪಾಂಗಾಳದವರೆಗಿನ ಡಿಪಿಆರ್‌ನಲ್ಲಿ ಸೂಚಿಸಿದ ಎಲ್ಲಾ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಹೆಚ್ಚುವರಿ ಯಾವುದೇ ಕೆಲಸಗಳಿಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಪ್ರಾಧಿಕಾರ ದಿಂದ ಮಂಜೂರಾತಿ ಪಡೆದರೆ ಮಾತ್ರ ಕಾಮಗಾರಿ ನಡೆಸಲು ಸಾಧ್ಯ ಎಂದು ಗುತ್ತಿಗೆದಾರರಾದ ಹೈದರಾಬಾದ್ ಮೂಲದ ನವಯುಗ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮುಖ್ಯ ಪ್ರಬಂಧಕ ಶಂಕರ್ ರಾವ್ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯ ಕುರಿತು ಕಟಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ವಿಶೇಷ ಗ್ರಾಮ ಸೆಯಲ್ಲಿ ಅವರು ಮಾತನಾಡುತಿದ್ದರು.

 ಇನ್ನಂಜೆ ಮತ್ತು ಕಟಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಅರ್ಧ ಕಾಮಗಾರಿಯಿಂದ ಆಗುತ್ತಿರುವ ತೊಂದರೆ ಬಗ್ಗೆ ಗ್ರಾಮಸ್ಥರ ದೂರಿಗೆ ಉತ್ತರಿಸಿದ ಅವರು, ಹೊಸ ಕಾಮಗಾರಿ ಬಗ್ಗೆ ಸ್ಥಳಿಯಾಡಳಿತ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳ ಬೇಕು. ಪ್ರಾಧಿಕಾರದಿಂದ ಮಂಜೂರಾತಿ ಸಿಕ್ಕ ಬಳಿಕ ಆರ್ಥಿಕ ವಿಭಾಗದಿಂದ ಕ್ಲಿಯರೆನ್ಸ್ ದೊರೆತ ಬಳಿಕವಷ್ಟೇ ಕಾಮಗಾರಿ ನಡೆಸಬಹುದು ಎಂದರು.

ಸಭೆ ಅರ್ಧಕ್ಕೆ ಮೊಟಕು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದ ಸಮಸ್ಯೆಯನ್ನು ಆಲಿಸಿ ಪರಿಹಾರ ಒದಗಿಸಲು ಕರೆದ ವಿಶೇಷ ಗ್ರಾಮಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಗೈರುಹಾಜರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಸಭೆಯಲ್ಲಿ ಹಾಜರಿದ್ದ ನವಯುಗ ಸಂಸ್ಥೆಯ ಅಧಿಕಾರಿಗಳು ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡದಿರುವುದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಇದೇ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಸಭೆಯನ್ನು ರದ್ದುಗೊಳಸುವಂತೆ ಒತ್ತಾಯಿಸಿದರು. ಅದರಂತೆ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕಟಪಾಡಿ ಹಾಗೂ ಇನ್ನಂಜೆ ಗ್ರಾಪಂ ವ್ಯಾಪ್ತಿಯ ವಿವಿಧ ಬೇಡಿಕೆಗಳ ಪಟ್ಟಿ ತಯಾರಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಕಟಪಾಡಿ ಗ್ರಾಪಂ ಅಧ್ಯಕ್ಷೆ ಜೂಲಿಯಟ್ ವೀರಾ ಡಿಸೋಜ, ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್, ಪ್ರೇಮ್ ಕುಮಾರ್, ಇನ್ನಂಜೆ ಗ್ರಾಪಂ ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ ತಾಪಂ ಸದಸ್ಯ ರಾಜೇಶ್ ಶೆಟ್ಟಿ, ಕಟಪಾಡಿ ಪಿಡಿಒ ಇನಾಯತುಲ್ಲಾ ಬೇಗ್, ಇನ್ನಂಜೆ ಪಿಡಿಒ ರಾಜೇಶ್ ಶೆಣೈ, ಕಾಪು ಠಾಣಾಧಿಕಾರಿ ನಿತ್ಯಾನಂದ ಗೌಡ, ಯೋಜನಾ ಸಲಹಾ ಮುಖ್ಯಸ್ಥ ಶ್ರೀನಿವಾಸ ರೆಡ್ಡಿ ಆರ್.ವಿ., ಕನ್ಸಲ್‌ಟೆಂಟ್ ಮೆನೇಜರ್ ರವಿ, ಇಂಜಿನಿಯರ್ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

ಕಟಪಾಡಿಯಲ್ಲಿ ಅಂಡರ್‌ಪಾಸ್‌ಗೆ ಪ್ರಸ್ತಾವನೆ
 ಕಟಪಾಡಿ ಜಂಕ್ಷನ್‌ನಲ್ಲಿ ಜನ ಹಾಗೂವಾಹನಗಳ ಸಂಚಾರಕ್ಕೆ ಉಂಟಾಗಿರುವ ತೊಂದರೆಯ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ರಚಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

 

ಕಟಪಾಡಿ ಪೇಟೆಯಲ್ಲಿ ಸರ್ವಿಸ್ ರಸ್ತೆಯ ಇಕ್ಕೆಲಗಳಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದ್ದು, ಕೆಲವು ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಬಾಕಿ ಇರಿಸಲಾಗಿದೆ. ಕಟ್ಟಡಗಳನ್ನು ಕೆಡವಿ ಜಮೀನು ವಶಪಡಿಸಿಕೊಂಡ ಬಳಿಕ ಬಸ್ ನಿಲ್ದಾಣ ನಿರ್ಮಿಸಿ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News