ನ್ಯಾಯದ ನಿರೀಕ್ಷೆಯಲ್ಲಿ ಮಂಗಳೂರಿನ ವಯೋವೃದ್ಧೆ ಗಿರಿಜಕ್ಕ

Update: 2017-10-25 15:50 GMT

ಉಡುಪಿ, ಅ. 25: ನಯ ವಂಚಕನೊಬ್ಬನಿಂದ ಮೋಸಕ್ಕೊಳಗಾಗಿ ಜೀವಮಾನವಿಡೀ ತಾನು ದುಡಿದು ಸಂಪಾದಿಸಿದ ಎರಡು ಲಕ್ಷ ರೂ.ಗಳೆಲ್ಲವನ್ನೂ ಕಳೆದು ಕೊಂಡಿರುವ ಮಂಗಳೂರಿನ 80 ವರ್ಷದ ವೃದ್ಧೆ ಗಿರಿಜಕ್ಕನತ್ತ ಇದೀಗ ನ್ಯಾಯ ದೇವತೆ ಕಣ್ಣು ತೆರೆದಿದ್ದು, ತನ್ನ ಹಣವನ್ನು ಮತ್ತೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಎರಡು ವಾರಗಳ ಹಿಂದೆ ಪತ್ರಿಕೆಗಳ ಮೂಲಕ ಬೆಳಕಿಗೆ ತಂದ ಪ್ರಕರಣವೊಂದರ ಹಿನ್ನೆಲೆಯಲ್ಲಿ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯವು ಅಪರಾಧಿ ರಾಮ ಪೂಜಾರಿ ಎಂಬಾತನನ್ನು ಚರಸೊತ್ತುಗಳ ಸಹಿತ ಬಂಧನಕ್ಕೊಳಪಡಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಅಧೀಕ್ಷಕರಿಗೆ ಆದೇಶ ನೀಡಿದೆ.

ಅದೇ ರೀತಿ ಆತನಿಂದ ವಶಪಡಿಸಿಕೊಂಡ ಚರ ಸೊತ್ತುಗಳನ್ನು ಮಾರಿ ಸಂತ್ರಸ್ಥೆಗೆ 2,25,000 ರೂ.ಗಳನ್ನು ಪಾವತಿಸುವಂತೆಯೂ ನ್ಯಾಯಾಧೀಶರು ಆಜ್ಞಾಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಈಗ 80ರ ಹರೆಯದಲ್ಲಿರುವ ಗಿರಿಜಕ್ಕ ಬಳೆಗಾರ ಜನಾಂಗದವಳು. ಆಕೆಗೆ ಮಕ್ಕಳಿಲ್ಲ. ಬಳೆ ಮಾರಲು ಆಕೆಗೆ ಅಂಗಡಿಯೂ ಇರಲಿಲ್ಲ. ಬೀದಿ-ಬೀದಿ ತಿರುಗಿ ಸಂತೆ-ಜಾತ್ರೆಗಳಿಗೆ ಹೋಗಿ ಬಳೆ ಮಾರಿ ಗಳಿಸಿದ ಎರಡು ಲಕ್ಷ ರೂ.ಗಳನ್ನು ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಲ್ಲಿಟ್ಟಿದ್ದರು. ತನ್ನ ಕೊನೆಗಾಲದಲ್ಲಿ ಉಪಯೋಗಕ್ಕೆ ಬಂದೀತು ಎಂಬ ಆಸೆಯಲ್ಲಿ ದಿನಗಳೆಯುತಿದ್ದಳು.

ಎಲ್ಲಿಂದಲೋ ಬಂದ ರಾಮಪೂಜಾರಿ ಈ ವೃದ್ದೆಯ ಸ್ನೇಹ ಗಳಿಸಿ ‘ಗಿರಿಜಕ್ಕ, ನೀವು ನನ್ನ ತಾಯಿ ಇದ್ದಂತೆ ಕೊನೆಗಾಲದಲ್ಲಿ ನಾನೇ ನೋಡಿಕೊಳ್ಳುತ್ತೇನೆ.’ ಎಂದು ಆಶ್ವಾಸನೆ ನೀಡಿ ಆಕೆಯ ಜೀವನವೆಲ್ಲಾ ದುಡಿದು ಉಳಿತಾಯ ಮಾಡಿದ ಹಣವನ್ನೇಲ್ಲಾ ಲಪಟಾಯಿಸಿದ. ಬಡ್ಡಿ ನೀಡುತ್ತೇನೆ, ಬೇಕಾದಾಗಲ್ಲೆಲ್ಲ ಅಸಲನ್ನೂ ನೀಡುತ್ತೇನೆ ಎಂದು ಮಾತು ನೀಡಿ ಕೊನೆಗೆ ಪುಡಿಗಾಸನ್ನೂ ಕೊಡಲಿಲ್ಲ!

ವಕೀಲರೋರ್ವರ ಸಹಾಯದಿಂದ 2014ರಲ್ಲಿ ಮಂಗಳೂರಿನ ಸಿವಿಲ್ ನ್ಯಾಯಲಯದಲ್ಲಿ ಗಿರಿಜಕ್ಕ ಹೂಡಿದ ದಾವೆ 2016ರಲ್ಲಿ ಇತ್ಯರ್ಥವಾಯಿತು. ಬಡ್ಡಿಸಹಿತ 2,20,00ರೂ.ಗಳನ್ನು ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು. ತನ್ನ ಹಣ ಪಡೆಯಲು ಸುಮಾರು 10 ತಿಂಗಳ ಕಾಲ ಪರದಾಡಿದ ಗಿರಿಜಕ್ಕ ಕೊನೆಗೆ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದಳು.

ಮಧುಮೇಹ, ರಕ್ತದೊತ್ತಡದಿಂದ ಬಳಲುತಿದ್ದ ಗಿರಿಜಕ್ಕನಿಗೆ ಸಹಿ ಹಾಕಲೂ ಸಾಧ್ಯವಾಗುವುದಿಲ್ಲವೆಂಬುದನ್ನು ಅರಿತ ಸಂಘಟನೆ, ಕೊನೆಗೆ ತಾನೇ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿತು.

ಆರು ತಿಂಗಳ ಹಿಂದೆ ಮಂಗಳೂರಿನ ಉಪ ವಿಭಾಗಾಧಿಕಾರಿಗಳು ಆಕೆಯ ಹಣ ತೆಗೆಸಿಕೊಡುವಂತೆ ಕೊಣಾಜೆಯ ಪೋಲಿಸ್‌ರಿಗೆ ನ್ಯಾಯಾಲಯ ಆದೇಶ ನೀಡಿತ್ತು. ಆದರೂ ಆಕೆಗೆ ನ್ಯಾಯ ಸಿಕ್ಕಿರಲಿಲ್ಲ. ಮರಣ ಶಯ್ಯೆಯಲ್ಲಿರುವ ಗಿರಿಜಕ್ಕ ಆದೇಶ ಪಾಲನೆಯಾಗದಿರುವುದನ್ನು ಗಮನಿಸಿ, ನನ್ನ ಔಷಧಿಗಾದರೂ ಹಣಕೊಡಿಸಿ. ಒಂದು ವೇಳೆ ಹಣ ನನಗೆ ಸಿಗದಿದ್ದರೂ ಚಿಂತಿಲ್ಲ. ರಾಮ ತಿನ್ನಬಾರದು. ದಯವಿಟ್ಟು ಅ ಹಣವನ್ನು ಅನಾಥಶ್ರಮ ಕ್ಕಾದರೂ ಕೊಡಿಸಿ ಎಂದು ವಿನಂತಿಸಿದ್ದಳು.

ನ್ಯಾಯ ನಿಂದನಾ ಅರ್ಜಿ: ಪ್ರತಿಷ್ಠಾನದ ಮೂಲಕ ಈ ಪ್ರಕರಣ ಸುದ್ದಿಯಾಗುತಿದ್ದಂತೆ ಗಿರಿಜಕ್ಕನ ಪರ ಈ ಹಿಂದೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಮಂಗಳೂರಿನ ವಕೀಲ ಪ್ರಸಾದ ಭಂಡಾರಿ ಅವರು ಕಳೆದ ವಾರ ನ್ಯಾಯಾಲಯದಲ್ಲಿ ನ್ಯಾಯ ನಿಂದನಾ ಅರ್ಜಿ ಸಲ್ಲಿಸಿ ಅಪರಾಧಿ ರಾಮಪೂಜಾರಿ ಯ ಚರಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ಗಿರಿಜಮ್ಮನ ಹಣ ಕೊಡಿಸಬೇಕೆಂದು ವಿನಂತಿಸಿದ್ದರು.

ಇದೀಗ ನ್ಯಾಯಾಧೀಶರು ನೀಡಿದ ಆದೇಶದ ಮೇರೆಗೆ ಕೊಣಾಜೆ ಪೋಲೀಸರು ರಾಮಪೂಜಾರಿಯನ್ನು ಹಾಗೂ ಅತನ ಹೆಸರಿನಲ್ಲಿರುವ ಮಾಕ್ಸಿಕ್ಯಾಬ್‌ನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ನ್ಯಾಯಾಲಯದ ಮೂಲಕ ಆತನ ಚರಸೊತ್ತನ್ನು ಮಾರಿ ಗಿರಿಜಕ್ಕನ ಹಣಪಾವತಿಸುವ ಕಾರ್ಯ ನಡೆಯುತ್ತಿದೆ ಎಂದು ಈ ಪ್ರಕರಣದಲ್ಲಿ ವಯೋವೃದ್ಧೆ ಗಿರಿಜಕ್ಕನ ಪರವಾಗಿ ಹೋರಾಡಿದ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News