​ಹಲ್ಲೆ ಆರೋಪ ಸಾಬೀತು: ಇಬ್ಬರಿಗೆ ಜೈಲು ಶಿಕ್ಷೆ

Update: 2017-10-25 16:07 GMT

ಮಂಗಳೂರು, ಅ. 25: ಉಳಾಯಿಬೆಟ್ಟುವಿನ ಕಾಂತರಬೆಟ್ಟು ನಿವಾಸಿ ಪುಷ್ಪಾ ಮತ್ತು ಆಕೆಯ ಪತಿಯ ಮೇಲೆ 2014 ರಲ್ಲಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಾದ ಸ್ಥಳೀಯರಾದ ಫಿರೋಝ್ (27) ಮತ್ತು ಆತನ ತಂದೆ ಸಂಶುದ್ದೀನ್ (58) ಅವರಿಗೆ ಮಂಗಳೂರಿನ ಜೆ.ಎಂ.ಎಫ್.ಸಿ. 3ನೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ಮತ್ತು ತಲಾ 3,000 ರೂ. ದಂಡ ವಿಧಿಸಿ ತೀರ್ಪಿತ್ತಿದೆ.

2014ರ ಜನವರಿ 26ರಂದು ಕಾಂತರಬೆಟ್ಟು ಪುಷ್ಪಾ ಮತ್ತು ಕೃಷ್ಣ ಕಾಂಚನ್ ಅವರಿಗೆ ಹಿತ್ತಿಲಲ್ಲಿದ್ದ  ಮರದ ವಿಷಯದಲ್ಲಿ ಫಿರೋಝ್ ಮತ್ತು ಸಂಶುದ್ದೀನ್ ಬೈದು, ಕೈ ಮತ್ತು ಮರದ ಸೋಂಟೆಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಎಸ್ಸೈ ಎಚ್.ಶಿವಪ್ರಕಾಶ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಮೂರುವರೆ ವರ್ಷಗಳ ಬಳಿಕ ಪ್ರಕರಣದ ಅಂತಿಮ ವಿಚಾರಣೆ ಇತ್ತೀಚೆಗೆ ಜೆ.ಎಂ.ಎ್.ಸಿ. 3ನೆ ನ್ಯಾಯಾಲಯದಲ್ಲಿ ನಡೆದಿದ್ದು, ನ್ಯಾಯಾಧೀಶ ಮಂಜುನಾಥ್ ಆರ್. ಆರೋಪ ಸಾಬೀತಾದ ಕಾರಣ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪಿತ್ತರು.

ಶಿಕ್ಷೆಯ ವಿವರ: ಐಪಿಸಿ ಸೆಕ್ಷನ್ 324 (ದೊಣ್ಣೆಯಿಂದ ಹಲ್ಲೆ) ಅನ್ವಯ 1 ವರ್ಷ ಜೈಲು ಶಿಕ್ಷೆ ಮತ್ತು ತಲಾ 1,000 ರೂ. ದಂಡ, ಐಪಿಸಿ ಸೆ.447 (ಅಕ್ರಮ ಪ್ರವೇಶ) ಅನ್ವಯ 20 ದಿನಗಳ ಶಿಕ್ಷೆ ಮತ್ತು 500 ರೂ. ದಂಡ, ಐಪಿಸಿ ಸೆ. 323 (ಕೈಯಿಂದ ಹಲ್ಲೆ)ಅನ್ವಯ 1 ತಿಂಗಳ ಸಜೆ ಮತ್ತು 500 ರೂ. ದಂಡ, ಐಪಿಸಿ ಸೆ. 509 (ಬೈಗುಳ) ಅನ್ವಯ 1 ತಿಂಗಳ ಶಿಕ್ಷೆ ಮತ್ತು 500 ರೂ. ದಂಡ ಹಾಗೂ ಐಪಿಸಿ ಸೆ. 506 (ಜೀವ ಬೆದರಿಗೆ) ಅನ್ವಯ 2 ತಿಂಗಳ ಸಜೆ ಮತ್ತು 500 ರೂ. ದಂಡ ವಿಧಿಸಲಾಗಿದೆ.

ಇಬ್ಬರೂ ಆರೋಪಿಗಳಿಗೆ ತಲಾ 3,000ರೂ.ನಂತೆ 6,000 ರೂ. ದಂಡ ಮೊತ್ತದಲ್ಲಿ 4,000 ರೂ.ಗಳನ್ನು ಗಾಯಾಳು ಪುಷ್ಪಾ ಅವರಿಗೆ ನಷ್ಟ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಬಿ. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News