ಪ್ರಕೃತಿ ಮೇಲಿನ ಹಿಂಸೆ ತಡೆಗಾಗಿ ಜಾಗೃತಿ ಅಗತ್ಯ

Update: 2017-10-25 18:50 GMT

ಪುತ್ತೂರು, ಅ.25: ಅರಣ್ಯ ನಾಶದಿಂದ ಆರಂಭಗೊಂಡು ಹಲವು ರೀತಿಯಲ್ಲಿ ಪ್ರಕೃತಿ ಮೇಲಿನ ಹಿಂಸೆ ನಿರಂತರವಾಗಿ ನಡೆಯುತ್ತಿದ್ದು, ಇದರಿಂದಾಗಿ ಜೀವವೈವಿದ್ಯಗಳ ನಾಶವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜೀವ ವೈವಿಧ್ಯ ಮಂಡಳಿ ತಾಲೂಕು ನಿರ್ವಹಣಾ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಅವರು ಹೇಳಿದರು.

ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರಿಗಾಗಿ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಿಂದಿನ ವರ್ಷವೇ ನಮ್ಮ ಪರಿಸರದಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ಸೇರಿದಂತೆ ಜೀವ ಪ್ರಬೇಧದ ಕುರಿತು ದಾಖಲಾತಿ ಸಂಗ್ರಹಿಸುವ ಕೆಲಸ ಆರಂಭಿಸಲಾಗಿದೆ. ಸಸ್ಯ ವೈವಿದ್ಯಗಳ ಬಗ್ಗೆ ನಾಟಿ ವೈದ್ಯರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟಕ್ಕೆ ಹೋಗಿ, ಪ್ರಾಯೋಗಿಕ ಕೆಲಸ ನಡೆಸಲಾಗುವುದು. ಗ್ರಾಮ ಮಟ್ಟದಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಜೊತೆಗೆ ಜೀವ ಪ್ರಬೇಧಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಅವರು ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವ ವೈವಿಧ್ಯವನ್ನು ಉಳಿಸುವುದರಿಂದ ಮಾನವ ಸಂಕುಲಕ್ಕೆ ಆಗಬಹುದಾದ ಪ್ರಯೋಜನವೇನು, ಪೂರಕ ಹೇಗೆ ಎಂಬ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಎಲ್ಲಾ ಸಂಘ ಸಂಸ್ಥೆಗಳು ಜಾಗೃತರಾಗಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದರು. ರಾಜ್ಯ ಜೀವ ವೈವಿಧ್ಯ ಮಂಡಳಿಯ ತಾಂತ್ರಿಕ ನಿರ್ವಾಹಕಿ ಐಶ್ವರ್ಯ ಅವರು ಮಾತನಾಡಿ, ಪ್ರಕೃತಿ ಹಾಳಾಗಲು ನಾವೇ ಕಾರಣ. ಮಿತಿಮೀರಿದ ಪ್ಲಾಸ್ಟಿಕ್ ಬಳಕೆ, ಅತಿಯಾದ ಮೊಬೈಲ್ ಬಳಕೆ ಜೀವ ವೈವಿಧ್ಯಗಳ ನಾಶಕ್ಕೆ ಕಾರಣವಾಗುತ್ತಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಾಕಷ್ಟು ಜೀವ ವೈವಿಧ್ಯಗಳಿವೆ. ಮಕ್ಕಳು ಪುಸ್ತಕದಲ್ಲಿದ್ದ ಮಾಹಿತಿಯನ್ನು ಮಾತ್ರ ಕಲಿಯುತ್ತಿದ್ದು, ಪ್ರಾಯೋಗಿಕ ಮಾಹಿತಿ ಗೊತ್ತಿಲ್ಲ. ಮಕ್ಕಳಿಗೆ ಜೀವ ವೈವಿಧ್ಯಗಳ ಕುರಿತು ಮಾಹಿತಿ ನೀಡಿ, ಅವರಿಂದಲೇ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.

ತಾಲೂಕು ಪಂಚಾಯತ್ ಸದಸ್ಯರಾದ ಲಲಿತಾ ಈಶ್ವರ್, ಕುಸುಮಾ, ಯೋಜನಾಧಿಕಾರಿ ಗಣಪತಿ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್‌ನ ವಿಷಯ ನಿರ್ವಾಹಖ ಶಿವಪ್ರಕಾಶ್ ಅಡ್ಪಂಗಾಯ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News