ಮಂಗಳೂರು ಮಿನಿ ವಿಧಾನ ಸೌಧದ ಅವ್ಯವಸ್ಥೆ ವಿರುದ್ಧ ಬಿಜೆಪಿ ಧರಣಿ

Update: 2017-10-26 13:51 GMT

ಮಂಗಳೂರು, ಅ.26: ಮಂಗಳೂರು ಮಿನಿ ವಿಧಾನ ಸೌಧದದ ಅವ್ಯವಸ್ಥೆಯ ವಿರುದ್ಧ ಬಿಜೆಪಿಯ ಮಂಗಳೂರು ನಗರ ದಕ್ಷಿಣ ಸಮಿತಿ ವತಿಯಿಂದ ಗುರುವಾರ ಧರಣಿ ನಡೆಯಿತು.

ಈ ಮಿನಿ ವಿಧಾನಸೌಧದಲ್ಲಿ ನೋಂದಣಿ ಕಚೇರಿ, ಮಂಗಳೂರು ಎಸಿ ಕಚೇರಿ, ಮಂಗಳೂರು ತಹಶೀಲ್ದಾರ್ ಕಚೇರಿ, ರೆಕಾರ್ಡ್ ರೂಮ್, ಕಂದಾಯ ನಿರೀಕ್ಷಕರ ಕಚೇರಿ ಹೀಗೆ ಹಲವು ಸರಕಾರಿ ಕಚೇರಿಗಳಿವೆ. ಆದರೆ, ಇಲ್ಲಿ ಸಕಾಲಕ್ಕೆ ಸಾರ್ವಜನಿಕರಿಗೆ ಸೇವೆ ಸಿಗುತ್ತಿಲ್ಲ. ಆರ್‌ಟಿಸಿ ಸಹಿತ ಎಲ್ಲ ದಾಖಲೆಪತ್ರಗಳನ್ನು ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಹಾಗೇ ನಿಂತರೂ ಪ್ರಯೋಜನವಿಲ್ಲ. ವಿದ್ಯುತ್ ಬಿಲ್ ಪಾವತಿಸದ ಕಾರಣ ಗುರುವಾರ ಮಧ್ಯಾಹ್ನ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿದು ಹಾಕಿದೆ. ಸಿಬ್ಬಂದಿಯ ಕೊರತೆಯೂ ಇದೆ. ಲಂಚ ಕೊಟ್ಟರೆ ಮಾತ್ರ ಸಿಬ್ಬಂದಿ ಕೆಲಸ ಮಾಡುತ್ತಾರೆ. ಇದು ಕಾಂಗ್ರೆಸ್‌ನ ದುರಾಡಳಿತಕ್ಕೆ ಕಾರಣ ಎಂದು ಧರಣಿ ನಿರತರು ಆಪಾದಿಸಿದರು.

ಧರಣಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಪಕ್ಷದ ಮುಖಂಡರಾದ ವೇದವ್ಯಾಸ ಕಾಮತ್, ಜಿತೇಂದ್ರ ಕೊಟ್ಟಾರಿ, ಸಂಜಯ ಪ್ರಭು, ಭಾಸ್ಕರ ಚಂದ್ರ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News