ರಾಜೀವ ನಗರ ನಿವಾಸಿಗಳಿಗೆ ಹಕ್ಕುಪತ್ರ: ಶಾಸಕ ಜೆ.ಆರ್.ಲೋಬೊ ಭರವಸೆ

Update: 2017-10-26 14:05 GMT

ಮಂಗಳೂರು, ಅ.26: ಶಕ್ತಿನಗರದ ರಾಜೀವ ನಗರದ ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಲಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಶಾಸಕರ ಮಲ್ಲಿಕಟ್ಟೆಯಲ್ಲಿರುವ ಕಚೇರಿಯಲ್ಲಿ ಶಕ್ತಿನಗರ ರಾಜೀವ ನಗರ ನಿವಾಸಿಗಳ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ರಾಜೀವ ನಗರದ ನಿವಾಸಿಗಳು 25 ವರ್ಷಗಳಿಂದ ವಾಸಿಸುತ್ತಿದ್ದು ಹಕ್ಕುಪತ್ರ ನೀಡಿಲ್ಲ. ಕೆಲವರು ಮಾರಿಕೊಂಡಿದ್ದಾರೆ. ಇನ್ನೂ ಕೆಲವರು ಖಾಲಿ ಸ್ಥಳದಲ್ಲಿ ವಾಸವಾಗಿದ್ದಾರೆ ಎಂದು ಮಾಜಿ ಮೇಯರ್ ಅಬ್ದುಲ್ ಅಝೀಝ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಯಾರು ವಾಸವಾಗಿದ್ದಾರೆ ಎಂಬುದನ್ನು ಖಚಿತ ಪಡಿಸಲು ಅಧಿಕಾರಿಗಳು ಬರಲಿದ್ದಾರೆ. ಇಲ್ಲಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹಕ್ಕುಪತ್ರ ಕೊಡಲು 3, 4 ಲಕ್ಷ ರೂ. ನೀಡಲು ಒತ್ತಾಯಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ಯಾವುದೇ ಕಾರಣಕ್ಕೂ ಹಣ ಕೊಡಲು ಹೋಗಬಾರದು ಎಂದು ಸೂಚಿಸಿದರು.

ಸಭೆಯಲ್ಲಿ ರಚಿಸಲಾದ ಸ್ಥಳಿಯರ ಐದು ಮಂದಿಯ ಸಮಿತಿಯು ಅಧಿಕಾರಿಗಳಿಗೆ ನೆರವಾಗುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಈ ಸಂದರ್ಭ ಉಪಾಯುಕ್ತ ಗೋಕುಲ್‌ದಾಸ್ ನಾಯ್ಕ್, ಮಾಜಿ ಕಾರ್ಪೊರೇಟರ್ ಮರಿಯಮ್ಮ ಥಾಮಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News