ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕಣ ದಾಖಲಿಸಲು ಒತ್ತಾಯ

Update: 2017-10-26 15:09 GMT

ಮಂಗಳೂರು, ಅ. 26: ಬೆಳ್ತಂಗಡಿಯ ಮಂಜಲಪಲ್ಕೆ ನಿವಾಸಿ ದಲಿತ ಯುವಕ ನಂದ ಕುಮಾರ್ ನಾಪತ್ತೆ ಪ್ರಕರಣದ ತನಿಖೆ ನಡೆಸಿ ಬೇಕಲರಿ ಮಾಲಕನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ನಂದ ಕುಮಾರ್ 8 ವರ್ಷಗಳಿಂದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಕ್ರೌನ್ ಬೇಕರಿಯಲ್ಲಿ ದುಡಿಯುತ್ತಿದ್ದ. ಸೆ.5ರಂದು ಬೇಕರಿ ಮಾಲಕ ನಂದಕುಮಾರ್‌ನ ಮೇಲೆ ಹಲ್ಲೆ ನಡೆಸಿ ಬೇಕರಿ ಗೋಡೌನ್‌ನಲ್ಲಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು,  ಬಳಿಕ ನಂದ ಕುಮಾರ್ ಅಲ್ಲಿನ ಶೌಚಾಲಯದ ಕಿಟಕಿಯ ಮೂಲಕ ಹಾರಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೇಕರಿಯ ಮಾಲಕ ಮನೆಗೂ ಮಾಹಿತಿ ನೀಡಿಲ್ಲ. ಬೇಕರಿಯಲ್ಲಿದ್ದ ಸಂಬಂಧಿ ಯುವಕ ಮರುದಿನ ಈ ವಿಚಾರವನ್ನು ತಿಳಿಸಿದ್ದು,  ಸೆ. 9ರಂದು ನಂದಕುಮಾರ್‌ನ ಮನೆಯವರು ಬೇಕರಿಗೆ ತೆರಳಿದ್ದಾಗ ಮಾಲಕ ಮತ್ತು ಸಿಬ್ಬಂದಿ ಗೊಂದಲಕಾರಿಯಾಗಿ ಹೇಳಿಕೆಗಳನ್ನು ನೀಡಿದ್ದು, ಕಂಕನಾಡಿ ನಗರ ಠಾಣಾ ಪೊಲೀಸರನ್ನು ಕೇಳಿದಾಗ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿರುವ ಬಗ್ಗೆ ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ತನಿಖೆಯಾಗಿಲ್ಲ. ಅಲ್ಲದೆ, ಬೇಕರಿ ಮಾಲಕನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಿಲ್ಲ. ಆದ್ದರಿಂದ ನಂದಕುಮಾರ್ ನಾಪತ್ತೆ ಪ್ರಕಣದ ಬಗ್ಗೆ ಸೂಕ್ತ ತನಿಖೆ ನಡೆಸಿಸಬೇಕೆಂದು ಸಮಿತಿ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ದಸಂಸ ಮಂಗಳೂರು ತಾಲೂಕು ಸಂಚಾಲಕ ಜಗದೀಶ್ ಪಾಂಡೇಶ್ವರ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ್ ಎಲ್., ಚಂದ್ರಪ್ಪ ಕಿನ್ನಿಗೋಳಿ, ದಸಂಸದ ಶಿವಾನಂದ ಕಾವೂರು, ಜಿಲ್ಲಾ ಮುಖಂಡ ಸದಾಶಿವ ಉರ್ವಾಸ್ಟೋರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News