ಪೋಸ್ಟ್‌ಮಾರ್ಟಂಗೆ ವಿಳಂಬ, ಜಿಲ್ಲಾಸ್ಪತ್ರೆ ವೈದ್ಯನಿಂದ ಬೆದರಿಕೆ; ಸಾರ್ವಜನಿಕರ ಆಕ್ರೋಶ

Update: 2017-10-26 17:17 GMT

ಉಡುಪಿ, ಅ.26: ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಪೋಸ್ಟ್ ಮಾರ್ಟಂ ಮಾಡಲು ವಿಳಂಬ ಮಾಡಿದ ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ಇದನ್ನು ಪ್ರಶ್ನಿಸಿದ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರನ್ನು ದಭಾಯಿಸಿ, ಬೆದರಿಕೆ ಒಡ್ಡಿದ ಘಟನೆ ಅಜ್ಜರಕಾಡು ಆಸ್ಪತ್ರೆಯಲ್ಲಿ ನಡೆದಿದೆ.

ಶಿರ್ವದ ಪಿಲಾರ್‌ಖಾನ್‌ನ ರವೀಂದ್ರ ಪೂಜಾರಿ (40) ಎಂಬವರು ನಿನ್ನೆ ಅಪರಾಹ್ನ ಮನೆಯಲ್ಲಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದಿದ್ದರು. ಕೂಡಲೇ ಅವರನ್ನು ಶಿರ್ವದ ಸಮುದಾಯ ಆಸ್ಪತ್ರೆಗೆ ತರುವಾಗಲೇ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಮೃತ ದೇಹವನ್ನು ಸಂಜೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತರಲಾಗಿತ್ತು. ವೈದ್ಯರಿಲ್ಲದ ಕಾರಣ ಇಂದು ಬೆಳಗ್ಗೆ 9ಗಂಟೆಗೆ ಪೋಸ್ಟ್‌ಮಾರ್ಟಂ ಮಾಡುವುದಾಗಿ ಆಸ್ಪತ್ರೆಯವರು ತಿಳಿಸಿದ್ದರು.

ಆದರೆ ಇಂದು ಬೆಳಗ್ಗೆ 9ರಿಂದ ಅಪರಾಹ್ನ ಮೂರು ಗಂಟೆಯವರೆಗೂ ಕೂಡಾ ವೈದ್ಯರು ಪೋಸ್ಟ್‌ಮಾರ್ಟಂ ಮಾಡಿರಲಿಲ್ಲ. ಶಿಥಲೀಕರಣ ಘಟಕದಿಂದ ಶವವನ್ನು ಇಂದು ಬೆಳಗ್ಗೆ 9 ಗಂಟೆಗೆ ತೆಗೆದಿರಿಸಿದ್ದು, ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಆರು ಗಂಟೆಗಳ ಕಾಲ ಶವಾಗಾರದ ಮುಂದೆ ಅಮಾನವೀಯವಾಗಿ ಕಾಯಿಸಲಾಗಿತ್ತು.

ಡಾ.ನಾಗೇಶ್ ಎಂಬ ಸರಕಾರಿ ವೈದ್ಯರ ಈ ವರ್ತನೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು, ಪೋಸ್ಟ್ ಮಾರ್ಟಂ ಮಾಡದಿದ್ದರೆ ಬರೆದುಕೊಡಿ ನಾವುಬೇರೆ ಆಸ್ಪತ್ರೆಯಲ್ಲಿ ಮಾಡಿಸುವುದಾಗಿ ಹೇಳಿದರು. ಇದರಿಂದ ಕುಪಿತಗೊಂಡ ವೈದ್ಯ ಇದೇ ರೀತಿ ಮಾತನಾಡಿದರೆ ನಾನು ಪೋಸ್ಟ್ ಮಾರ್ಟಂ ವರದಿಯನ್ನು ತಿರುಚಿ ನೀಡುವುದಾಗಿ ಬೆದರಿಕೆ ಹಾಕಿದ್ದ.

ವೈದ್ಯ ಹಾಗೂ ಕುಟುಂಬಸ್ಥರ ನಡುವೆ ಜೋರಾದ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಪೋಸ್ಟ್ ಮಾರ್ಟಂ ನಡೆಸಿ ಕೂಡಲೇ ಶವವನ್ನು ಸಂಬಂಧಿಕರಿಗೆ ಒಪ್ಪಿಸಲು ವೈದ್ಯರಿಗೆ ಸೂಚಿಸಿದರು. ಬೆಳಗ್ಗೆ 9 ಗಂಟೆಗೆ ಶೀಥಲೀಕರಣ ಘಟಕರಿಂದ ಶವವನ್ನು ಹೊರ ತೆಗೆದು ಆರು ಗಂಟೆಗಳ ಕಾಲ ಹೊರಗಿಟ್ಟ ಕಾರಣ, ಮೃತದೇಹ ದುರ್ವಾಸನೆ ಬೀರಲು ಆರಂಭಿಸಿತ್ತು.

ಇಂಥ ಸರಕಾರಿ ವೈದ್ಯ ನಮ್ಮ ಜಿಲ್ಲಾಸ್ಪತ್ರೆಗೆ ಬೇಡ, ಈತನನ್ನು ಕೂಡಲೇ ವರ್ಗಾವಣೆಗೊಳಿಸಿ ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News