ನ. 18 ಬೆಳೆ ಸಮೀಕ್ಷೆ ಡೆಡ್‌ಲೈನ್: ಖಾಸಗಿ ಮೊಬೈಲ್ ಬಳಸಿ ದತ್ತಾಂಶ ಸಂಗ್ರಹ

Update: 2017-10-26 17:59 GMT

ಕಾರ್ಕಳ, ಅ. 26: ರಾಜ್ಯದ  176 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸುವ ಸಲುವಾಗಿ ಎಲ್ಲಾ ಗ್ರಾಮ ಕರಣಿಕರು ಕಡ್ಡಾಯವಾಗಿ ರೈತರ ಬಳಿಗೆ ತೆರಳಿ ನವೆಂಬರ್ 18ರೊಳಗೆ ಬೆಳೆ ಸಮೀಕ್ಷೆ ವರದಿ ಸಂಗ್ರಹಿಸುವಂತೆ ರಾಜ್ಯ ಸರಕಾರದ ಆದೇಶ ಹೊರಡಿಸಿದ್ದು, ಗ್ರಾಮಕರಣಿಕರು ಬೆಳೆ ಸಮೀಕ್ಷೆ ಮುಗಿಸುವವರೆಗೂ ಕಚೇರಿಗೆ ಚಕ್ಕರ್ ಹಾಕಿ ರೈತರ ಹೊಲ ಸುತ್ತುವುದು ಅನಿವಾರ್ಯವಾಗಿದೆ. ಆದರೆ ಬೆಳೆ ಸಮೀಕ್ಷೆಯ ವಿವರಗಳನ್ನು ಮೊಬೈಲ್ ಮೂಲಕ ಸಂಗ್ರಹಿಸಬೇಕಿದ್ದು ಸರಕಾರ ಈವರೆಗೂ ಮೊಬೈಲ್ ಖರೀದಿಸದ ಹಿನ್ನಲೆಯಲ್ಲಿ ಗ್ರಾಮಕರಣಿಕರು ತಮ್ಮದೇ ಖಾಸಗಿ ಮೊಬೈಲ್‌ನಲ್ಲೇ ತಂತ್ರಾಂಶ ಅಳವಡಿಸಿಕೊಂಡು ದತ್ತಾಂಶ ಸಂಗ್ರಹ ಹಾಗೂ ಜಿಪಿಎಸ್ ಮೂಲಕ ರೈತರ ಭೂಮಿಯ ಫೋಟೋ ತೆಗೆದು ಬೆಳೆಯ ವಿವರಗಳನ್ನು ದಾಖಲಿಸಿಕೊಳ್ಳುತ್ತಿದ್ದು ಸರಕಾರದ ಈ ನಿಲುವಿನಿಂದ ಗ್ರಾಮಕರಣಿಕರು ಹೈರಾಣಾಗಿದ್ದಾರೆ.

ರಾಜ್ಯದ ಎಲ್ಲಾ ರೈತರ ಬೆಳೆಗಳ ವಿವರಗಳನ್ನು ಪಹಣಿಯಲ್ಲಿ ನಮೂದಿಸಿ ಬಳಿಕ ಬೆಳೆ ಬದಲಾದಂತೆ ಕಾಲಕಾಲಕ್ಕೆ ಅಪ್‌ಡೇಟ್ ಮೂಡುವ ಸಲುವಾಗಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಗ್ರಾಮಕರಣಿಕರಿಗೆ ಬೇಕಾದ ಮೊಬೈಲ್ ಹಾಗೂ ಪವರ್‌ಬ್ಯಾಂಕ್‌ನಂತಹ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸದೇ ಏಕಾಎಕಿ ನವೆಂಬರ್ 18ರೊಳಗೆ ಬೆಳೆ ಸಮೀಕ್ಷೆ ವರದಿ ನೀಡುವಂತೆ ಸೂಚನೆ ನೀಡಿರುವುದು ಎಷ್ಟು ಸರಿ ಎನ್ನುವುದು ಪ್ರಶ್ನೆಯಾಗಿದೆ. ಸರಕಾರ ಮೊಬೈಲ್ ಒದಗಿಸುವವರೆಗೆ ಗ್ರಾಮಕರಣಿಕರೇ ತಮ್ಮ ಮೊಬೈಲ್‌ನಿಂದ ರೈತರ ಬೆಳೆ ಮಾಹಿತಿ ಸಂಗ್ರಹಿಸುತ್ತಿದ್ದು ಇದರಿಂದ ಮೊಬೈಲ್ ಬ್ಯಾಟರಿ ಚಾರ್ಜ್ ಖಾಲಿಯಾಗುತ್ತಿದ್ದು ಗ್ರಾಕರಣಿಕರಿಗೆ ತಮ್ಮ ನಿತ್ಯದ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲವೆನ್ನುವ ಕೂಗು ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಸರಕಾರ ತುರ್ತಾಗಿ ಬೆಳೆಸಮೀಕ್ಷೆಯ ದತ್ತಾಂಶ ಸಂಗ್ರಹಕ್ಕೆ ಮೊಬೈಲ್ ಹಾಗೂ ಪವ್ಬ್ಯಾಂಕ್ ಒದಗಿಸಬೇಕಿದೆ.

ಕಚೇರಿ ಕೆಲಸದಲ್ಲೂ ವ್ಯತ್ಯಯ: ನವೆಂಬರ್ 18ರೊಳಗಾಗಿ ಬೆಳೆಸಮೀಕ್ಷೆ ವರದಿಯನ್ನು ಕಡ್ಡಾಯವಾಗಿ ನೀಡುವಂತೆ ಸರಕಾರ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಗ್ರಾಮಕರಣಿಕರು ಕಚೇರಿಗೆ ಹಾಜರಾಗದೇ ನೇರವಾಗಿ ರೈತರ ಜಮೀನಿಗೆ ತೆರಳುತ್ತಿದ್ದು ಇದರಿಂದ ಜನರ ದೈನಂದಿನ ಕಚೇರಿ ಕೆಲಸಗಳಿಗೆ ತೊಡಕಾಗುತ್ತಿದೆ. ನಿತ್ಯ 50 ಜಮೀನಿನ ಬೆಳೆ ಸಮೀಕ್ಷೆ ಗುರಿ ನಿಗದಿಪಡಿಸಿರುವ ಹಿನ್ನಲೆಯಲ್ಲಿ ಗ್ರಾಮಕರಣಿಕರಿಗೆ ಕಚೇರಿ ಕೆಲಸದಿಂದ ಸಧ್ಯ ವಿನಾಯಿತಿ ನೀಡಲಾಗಿದೆ. ಆದರೆ ಇದರಿಂದ ಜನರು ತಮ್ಮ ಕಚೇರಿ ಕೆಲಸಕ್ಕೆ ಗ್ರಾಮಕರಣಿಕರನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರ ಜನರಿಗೆ ಆಗುವ ತೊಂದರೆಯನ್ನು ನಿವಾರಿಸುವ ಸಲುವಾಗಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.


ಯಾವ ಸವಲತ್ತುಗಾಗಿ ಸಮೀಕ್ಷೆ : ಸಹಾಯಧನ ನೀಡಿಕೆ, ಕನಿಷ್ಟ ಬೆಂಬಲ ಬೆಲೆ, ಬೆಳೆ ವಿಮೆ ಯೋಜನೆ ಮುಂತಾದ ಸಲವತ್ತುಗಳನ್ನು ಪಡೆದುಕೊಳ್ಳುವಲ್ಲಿ ನಿಗಧಿತ ಅವಯಲ್ಲಿ ಬೆಳೆ ಮಾಹಿತಿ ಲಭ್ಯವಿಲ್ಲದಿರುವುದರಿಂದ ಸರ್ಕಾರವು ಈ ಯೋಜನೆಯಡಿ ಸಂಬಂಧಿಸಿದ ಬೆಳೆ ಬೆಳೆದ ರೈತರನ್ನು ಗುರುತಿಸಲು ತೊಂದರೆಯಾಗಿದೆ. ಅದೇ ರೀತಿ ನಿರ್ದಿಷ್ಟವಾದ ಬೆಳೆಯ ಬಿತ್ತನೆ ವಿಸ್ತೀಣಕ್ಕಿಂತ ಹೆಚ್ಚಾಗಿ ನೋಂದಣಿ ಮಾಡಲಾಗುತ್ತಿದೆ.

ಅಕಾರಿಗಳಿಗೆ ಸೂಚನೆ : ಬೆಳೆ ಮಾಹಿತಿ ಸಮೀಕ್ಷೆಯನ್ನು ಕೈಗೆತ್ತಿಕೊಂಡು ನ.5ರೊಳಗೆ ಮುಕ್ತಾಯಗೊಳಿಸತಕ್ಕದ್ದು. ಗ್ರಾಮ ಲೆಕ್ಕಿಗರಲ್ಲದೆ, ಕೃಷಿ ತೋಟಗಾರಿಕೆ ಅಕಾರಿಗಳು, ಗ್ರಾಮ ಸೇವಕರು, ತಾಂತ್ರಿಕ ಉತ್ತೇಜಕರು ಮತ್ತು ಸಾಮಾನ್ಯ ಸೇವಾ ಕೇಂದ್ರದ ಗ್ರಾಮೀಣ ಭಾಗದ ಉದ್ಯಮಿಗಳು ಈ ಬೆಳೆ ಸಮೀಕ್ಷೆ ನಡೆಸುವರು.

ಕಂದಾಯ ಇಲಾಖೆಯ ಓವರ್ ದ ಕೌಂಟರ್ ಡಿಜಿಟಲ್ ಸಹಿ ಮತ್ತು ಆಹಾರ ಇಲಾಖೆಯ 16.35 ಲಕ್ಷ ಅರ್ಜಿಗಳ ಪೈಕಿ, ಬಾಕಿ ಇರುವ 1.50 ಲಕ್ಷ ಪಡಿತರ ಚೀಟಿ ಅರ್ಜಿಗಳನ್ನು ಕಳೆದ ಅ.5 ರೊಳಗೆ ವಿಲೇವಾರಿ ಮಾಡತಕ್ಕದ್ದು. ಮತ್ತು ಓವರ್ ದ ಕೌಂಟರ್ ಅರ್ಜಿಗಳ ಅನುಮೋದನೆ ಬಾಕಿ ಇದ್ದಲ್ಲಿ ಅಂತಹ ಅರ್ಜಿಗಳ ಅನುಮೋದನೆಯನ್ನು ಬೆಳೆ ಸಮೀಕ್ಷೆ ಕಾರ್ಯದ ನಂತರ ಮಾಡಲಾಗುವುದು.

ಪೋಡಿ ಮುಕ್ತ ಆಂದೋಲನ ಮತ್ತು ಕಲಂ 3 ಮತ್ತು 9ರ ತಿದ್ದುಪಡಿಗಳನ್ನು ಬೆಳೆ ಸಮೀಕ್ಷೆ ಕಾರ್ಯ ಮುಕ್ತಾಯಗೊಂಡ ನಂತರ ಕೈಗೆತ್ತಿಕೊಳ್ಳಲಾಗುವುದು.

* ಪಿಂಚಣಿ ಯೋಜನೆ ಅಡಿ ಬಾಕಿಯಿರುವ ಕಾರ್ಯ ಕೈಗೆತ್ತಿಕೊಂಡು ಅ.5ರೊಳಗೆ ಮುಕ್ತಾಯಗೊಳಿಸುವುದು. ಬಾಕಿ ಕಾರ್ಯವನ್ನು ಬೆಳೆ ಸಮೀಕ್ಷೆ ಮುಕ್ತಾಯ ನಂತರ ಕೈಗೆತ್ತಿಕೊಳ್ಳಬಹುದು.

* ಬೆಳೆ ಕಟಾವು ಪರೀಕ್ಷೆಗಳನ್ನು ಯೋಜಿತ ಅವಯಂತೆ ಕೈಗೆತ್ತಿಕೊಳ್ಳುವುದು. ಬೆಳೆ ಕಟಾವು ಪರೀಕ್ಷೆಗಳ ನಂತರ ಬೆಳೆ ಮಾಹಿತಿ ಸಂಗ್ರಹಣೆ ಮಾಡಲಾಗುವುದು.

* ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಮತ್ತು ಹೊಸ ಪಿಂಚಣಿ ಕೋರಿಕೆಗಳನ್ನು ತುರ್ತು ಸಂದರ್ಭದಲ್ಲಿ ಮಾತ್ರ ಆದ್ಯತೆಯ ಮೇಲೆ ತೆಗೆದುಕೊಳ್ಳಬಹುದಾಗಿದೆ. ಈ ಸಂಬಂಧ ತೀರ್ಮಾನವನ್ನು ಸಂಬಂಸಿದ ಜಿ್ಲಾಕಾರಿಗಳು ತೆಗೆದುಕೊಳ್ಳುವರು.

* ಗ್ರಾ.ಪಂ. ಬಿಲ್ ಕಲೆಕ್ಟರ್‌ಗಳು ರೈತರ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳ ಮಾಹಿತಿ ಸಂಗ್ರಹಾ ಕಾರ್ಯದಲ್ಲಿ ಕೈಜೋಡಿಸುವರು.

ಕಡಿಮೆ ಕಾಲವಕಾಶ

ಕೊಟ್ಟದ್ದು ಕಡಿಮೆ ಕಾಲವಕಾಶದಲ್ಲಿ ಗ್ರಾಮಕರಣಿಕರಿಗೆ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಒಂದೊಂದು ಗ್ರಾಮದಲ್ಲಿ ಕನಿಷ್ಟ ಹತ್ತರಿಂದ ಹನ್ನೆರಡು ಸಾವಿರ ಪಹಣಿದಾರರಿದ್ದಾರೆ. ದಿನಕ್ಕೊಂದು 30ರಿಂದ 40 ಮನೆಗಳನ್ನು ಸಮೀಕ್ಷೆ ನಡೆಸಬಹುವುದು. ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ, ಅದರಲ್ಲೂ ಕಾಡು ಪ್ರದೇಶದಲ್ಲಿ ಹತ್ತಾರು ಮೈಲಿ ದೂರ ಕ್ರಮಿಸುವುದು ಸಂಕಷ್ಟವನ್ನು ತಂದೊಡ್ಡಿದ.- ನೊಂದ ಗ್ರಾಮ ಕರಣಿಕರು, ಕಾರ್ಕಳ

ಕಂದಾಯ ಇಲಾಖೆಗೆ ಸಂಕಷ್ಟ
ಗ್ರಾಮ ಕರಣಿಕರು ಕಚೇರಿಯಲ್ಲಿರದ ಕಾರಣ ಅಗತ್ಯ ಯಾವುದೇ ದಾಖಲೆಗಳನ್ನು ಪಡೆದುಕೊಳ್ಳಲಾಗದೆ ಜನತೆ ಪರದಾಡುತ್ತಿದ್ದಾರೆ. ಬೆಳೆ ಸಮೀಕ್ಷೆಗೆ ಒಳ್ಳೆ ಯೋಜನೆ. ಆದರೆ ಗ್ರಾಮ ಕರಣಿಕರನ್ನು ನಿಯೋಜಿಸಿ ತೊಂದರೆ ನೀಡಲಾಗಿದೆ.
 ಹರೀಶ್ ನಾಯಕ್ -ಸದಸ್ಯರು, ತಾ.ಪಂ.ಕಾರ್ಕಳ

Writer - ಮೊಹಮ್ಮದ್ ಶರೀಫ್

contributor

Editor - ಮೊಹಮ್ಮದ್ ಶರೀಫ್

contributor

Similar News