ಪುತ್ತೂರು: ನಗರಸಭೆಯ ಇಂಜಿನಿಯರ್ ಅಮಾನತು

Update: 2017-10-26 18:35 GMT

ಪುತ್ತೂರು, ಅ. 26; ವರ್ಗಾವಣೆಗೊಂಡು ಕರ್ತವ್ಯದಿಂದ ಬಿಡುಗಡೆಗೊಂಡ ಬಳಿಕವೂ ತನ್ನಲ್ಲಿದ್ದ ಪ್ರಭಾರ ಜವಾಬ್ದಾರಿಯನ್ನು ಹಸ್ತಾಂತರಿಸದೆ ಮತ್ತು ನಿಯುಕ್ತಿಗೊಂಡ ಕಚೇರಿಯಲ್ಲಿ ಕರ್ತವ್ಯದ ಮೇಲೆ ವರದಿ ಮಾಡಿಕೊಳ್ಳದೆ ಮೇಲಾಧಿಕಾರಿಯವರ ಆದೇಶಕ್ಕೆ ಅಗೌರವ ತೋರಿಸಿದ ಆರೋಪದಡಿ ಪುತ್ತೂರು ನಗರಸಭೆಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ತುಳಸೀದಾಸ್ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ರಾಜ್ಯ ಪೌರಾಡಳಿತ ನಿರ್ದೇಶಕ ಡಾ.ವಿಶಾಲ್.ಆರ್. ಅವರು ಎಂಜಿನಿಯರ್ ತುಳಸೀದಾಸ್ ಅವರ ಮೇಲಿರುವ ಆರೋಪದ ವಿಚಾರಣೆಗೆ ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪುತ್ತೂರು ನಗರಸಭೆಯಲ್ಲಿ ಕಿರಿಯ ಅಭಿಯಂತರರಾಗಿದ್ದ ತುಳಸೀದಾಸ್ ಅವರನ್ನು ಉಳ್ಳಾಲ ನಗರಸಭೆಗೆ ವರ್ಗಾವಣೆಗೊಳಿಸಲಾಗಿತ್ತು. ಕರ್ತವ್ಯದಿಂದ ಬಿಡುಗಡೆಗೊಂಡು ಇಲ್ಲಿಂದ ತೆರಳಿದ್ದರೂ ಅವರು ಪುತ್ತೂರು ನಗರಸಭೆಯಲ್ಲಿ ನಿರ್ವಹಿಸುತ್ತಿದ್ದ ಪ್ರಭಾರ ಜವಾಬ್ದಾರಿಯನ್ನು ಹಸ್ತಾಂತರಿಸದೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆ ಉಂಟು ಮಾಡುತ್ತಿದ್ದು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಅವರ ವರದಿಯನ್ನು ಆಧರಿಸಿ ತುಳಸೀದಾಸ್ ಅವರಿಗೆ ಪೌರಾಡಳಿತ ನಿರ್ದೇಶನಾಲಯದಿಂದ ಶೋಕಾಸ್ ನೋಟೀಸು ಜಾರಿ ಮಾಡ ಲಾಗಿತ್ತು. ಆದರೂ ಅವರು ನೋಟೀಸಿಗೆ ಲಿಖಿತ ಸಮಜಾಯಿಷಿ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಅವರು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೌರಾಯುಕ್ತ ನಿರ್ದೇಶಕರು ಅಮಾನತು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News