​ಕಾಸರಗೋಡು : ಹಲವು ಪ್ರಕರಣಗಳ ಆರೋಪಿಯ ಸೆರೆ

Update: 2017-10-27 12:55 GMT

ಕಾಸರಗೋಡು,ಅ.27 : ಚಾಲಕನನ್ನು ಬೆದರಿಸಿ ಮರಳು ಸಾಗಾಟ ಲಾರಿಯನ್ನು ಅಪಹರಿಸಿ ಒತ್ತೆ ಹಣಕ್ಕಾಗಿ ಜೀವ ಬೆದರಿಕೆಯೊಡ್ಡಿದ ಸೇರಿದಂತೆ ಒಂಭತ್ತಕ್ಕೂ ಅಧಿಕ ಪ್ರಕರಣಗಳ ಆರೋಪಿಯನ್ನು ಬದಿಯಡ್ಕ ಠಾಣಾ ಪೊಲೀಸರು  ಬಂಧಿಸಿದ್ದಾರೆ. ಈತನ ವಿರುದ್ಧ ಕಾಪಾ (ಗೂಂಡಾ) ಕಾಯ್ದೆಯನ್ನು ಹೂಡಲಾಗಿದೆ.

ಬಂಧಿತನನ್ನು  ಬೇಳ ಚೌಕಾರಿನ  ಅಕ್ಷಯ್ (26)  ಎಂದು ಗುರುತಿಸಲಾಗಿದೆ.ಈತನ ವಿರುದ್ಧ  ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು, ಕುಂಬಳೆ ಪೊಲೀಸ್ ಠಾಣೆಯಲ್ಲಿ  ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ಕರ್ನಾಟಕದಿಂದ ಅಕ್ರಮವಾಗಿ ಮರಳು ಸಾಗಾಟ ಲಾರಿಯನ್ನು ಕಾರಿನಲ್ಲಿ ಬಂದ ಮೂವರು ಬದಿಯಡ್ಕ ಸಮೀಪದ ನೀರ್ಚಾಲು ಎಂಬಲ್ಲಿ ತಡೆದು ಚಾಲಕನನ್ನು ಬೆದರಿಸಿ ಬೇಳ ಸಮೀಪದ ಕಾರ್ಗಿಲ್ ಎಂಬ ನಿರ್ಜನ ಸ್ಥಳಕ್ಕೆ ಅಪಹರಿಸಿ ಕೊಂಡೊಯ್ದು ಹಣಕ್ಕಾಗಿ ಬೆದರಿಕೆಯೊಡ್ಡಲಾಗಿತ್ತು.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಳಿದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಕ್ಷಯ್ ವಿರುದ್ಧ  ಬದಿಯಡ್ಕ , ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಡೆದಾಟ,ಬೆದರಿಕೆ, ಇರಿತ, ವರ್ತಕನ ಮೇಲೆ ಹಲ್ಲೆ ಪ್ರಕರಣಗಳಿವೆ. 2013 ಬಳಿಕ ಹಲವು ಕೃತ್ಯಗಳಲ್ಲಿ  ಶಾಮೀಲಾಗಿದ್ದು , ಈತನ ವಿರುದ್ಧ  ಬದಿಯಡ್ಕ ಪೊಲೀಸರು  ಆರ್ . ಡಿ .ಒ  ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News