ಕಾಪುವಿಗೆ ಪ್ರತ್ಯೇಕ ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಬೇಡಿಕೆ: ಸೊರಕೆ

Update: 2017-10-27 13:28 GMT

ಕಾಪು,ಅ.27: ಕಾಪುವಿನಲ್ಲಿ ಪ್ರತ್ಯೇಕ ಕೆಎಸ್‍ಆರ್‍ಟಿಸಿ ಡಿಪೋ ಸ್ಥಾಪನೆಗೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಕಾಪು ವೃತ್ತ ನಿರೀಕ್ಷರ ಕಚೇರಿ ಬಳಿಯಿಂದ ಶಿರ್ವ ಸಂಪರ್ಕಿಸುವ ಆರು ಕಿ.ಮೀ ದ್ವಿಪಥ ರಸ್ತೆ ವಿಸ್ತರಣೆ ಕಾಮಗಾರಿಗೆ ಕಾಪುವಿನಲ್ಲಿ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಪು ತಾಲ್ಲೂಕಾಗಿ ಈಗಾಗಲೇ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಅಗತ್ಯತೆ ಇದೆ. ಇದಕ್ಕಾಗಿ ಅಗತ್ಯವಿರುವ ಜಮೀನನ್ನು ಒದಗಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯಿಂದ ಕಾಪುವಿನಿಂದ ಶಿರ್ವಕ್ಕೆ ಸಂಪರ್ಕಕಲ್ಪಿಸುವ ರಸ್ತೆಯನ್ನು ಕೇಂದ್ರಿಯ ರಸ್ತೆ ನಿಧಿಯಡಿ ರು. 5 ಕೋಟಿ ವೆಚ್ಚದಲ್ಲಿ ದ್ವಿಪಥಗೊಳಿಸಲಾಗುತ್ತಿದೆ. ಈಗಾಗಲೇ ಕಟಪಾಡಿ-ಶಿರ್ವ, ಓಂತಿಬೆಟ್ಟು-ಶಿರ್ವ, ನಂದಿಕೂರು-ಶಿರ್ವ, ಆತ್ರಾಡಿ-ಶಿರ್ವ ಸಂಪರ್ಕ ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕಾಪು ಕ್ಷೇತ್ರದ ಎಲ್ಲಾ ಲೋಕೋಪಯೋಗಿ ರಸ್ತೆಗಳನ್ನು ದ್ವಿಪಥಗೊಳಿಸಲಾಗುವುದು. ಪಡುಕೆರೆಯಿಂದ ಉಳಿಯಾರಗೋಳಿವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಾಪು ಪುರಸಭಾ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಕೇಂದ್ರಿಯ ರಸ್ತೆ ನಿಧಿಯಿಂದ ರು. 50 ಕೋಟಿ, ಸಡಕ್ ಯೋಜನೆಯಡಿ ರು.49 ಕೋಟಿ, ನಗರೋತ್ಥಾನದಿಂದ ರು.10 ಕೋಟಿ, ಏಕಕಾಲದ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ರು. 30 ಕೋ., ಎಸ್‍ಎಫ್‍ಸಿಯಿಂದ ರು.30 ಕೋ ರಸ್ತೆಗಳ ಅಭಿವೃದ್ಧಿಗೆ ಹಣ ಮಂಜೂರಾಗಿದೆ. ಕಾಪು ಪುರಸಭಾ ವ್ಯಾಪ್ತಿಯಲ್ಲಿ ರು.8.5 ಕೋಟಿ ವೆಚ್ಚದಲ್ಲಿ  ಪ್ರಮುಖ ರಸ್ತೆಗಳ ಪಾದಾಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು. 

ಕೆಲಸಗಾರರ ಕೊರತೆ: ಕಾಪು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರುತ್ತಿದೆ. ಅದರೆ ಕೆಲಸಗಾರರ ಕೊರತೆಯಿಂದ ಅದಕ್ಕನುಗುಣವಾಗಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿಲ್ಲ. ಕೆಲವೆಡೆ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅ ಸ್ಥಳಗಳಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಸೊರಕೆ ನುಡಿದರು. 

ಪುರಸಭೆ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಜಿಪಂ ಸದಸ್ಯ ವಿಲ್ಸನ್ ರಾಡ್ರಿಗಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಹರೀಶ್ ನಾಯಕ್ ಕಾಪು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News