ಮಾಧ್ಯಮಗಳು ಸೂಕ್ಷ್ಮ ಸಂವೇದನೆ, ಪ್ರಜಾಪ್ರಭುತ್ವದ ಮೌಲ್ಯಗಳಿಂದ ದೂರ ಸರಿಯಬಾರದು: ಸಿದ್ಧಾರ್ಥ್ ವರದರಾಜನ್‌

Update: 2017-11-04 15:54 GMT

ಮಂಗಳೂರು, ನ.4 : ಮಾಧ್ಯಮಗಳು ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಳ್ಳಬಾರದು, ಪ್ರಜಾ ಪ್ರಭುತ್ವದ ಮೌಲ್ಯಗಳಿಂದ ದೂರ ಸರಿಯಬಾರದು ಎಂದು ಖ್ಯಾತ ಪತ್ರಕರ್ತ ‘ದಿ ವೈರ್’ ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ತಿಳಿಸಿದ್ದಾರೆ.

ಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಬಿ.ವಿ. ಕಕ್ಕಿಲ್ಲಾಯ ಸ್ಮರಣಾರ್ಥ ಉಪನ್ಯಾಸ ನೀಡಿದರು.

ರೋಹಿಂಗ್ಯಾ ಪ್ರಕರಣದಲ್ಲಿ ನಿರಾಶ್ರಿತರನ್ನು ನಡೆಸಿಕೊಳ್ಳುತ್ತಿರುವ ರೀತಿ, ಕಾಶ್ಮೀರದ ಯುವಕನೊಬ್ಬನನ್ನು ಮೂರು ಗಂಟೆಗಳ ಕಾಲ ವಾಹನಕ್ಕೆ ಕಟ್ಟಿ ಸುತ್ತು ಹಾಕಿದ ಘಟನೆ, ಮಹಿಳೆಯರು, ದಲಿತರು, ಆದಿವಾಸಿಗಳು ಸೇರಿದಂತೆ ದೇಶದ ದುರ್ಬಲ ವರ್ಗದ ಜನರ ಸಮಸ್ಯೆಗಳ ಬಗ್ಗೆ ಬಹುತೇಕ ಮಾಧ್ಯಮಗಳು ನಿರ್ಲಕ್ಷ್ಯ ವಹಿಸುತ್ತಾ ಬಂದಿವೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಯೋಚಿಸದೆ ಕೋಮುವಾದಿ ನೆಲೆಯಲ್ಲಿ, ಲಿಂಗತಾರತಮ್ಯದ ದೃಷ್ಟಿಕೋನದಿಂದ ನೋಡುತ್ತಿರುವುದು, ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡಂತೆ ಮಾಧ್ಯಮಗಳು ವರ್ತಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಸಿದ್ದಾರ್ಥ್ ವರದರಾಜನ್ ತಿಳಿಸಿದರು.

ಭಾರತದಲ್ಲಿ ಇತ್ತೀಚೆಗೆ ನ್ಯಾಯಾಂಗ ವ್ಯವಸ್ಥೆಯನ್ನು ಬಳಸಿಕೊಂಡು ದೊಡ್ಡ ಮೊತ್ತದ ಮಾನನಷ್ಟ ದಾವೆಗಳನ್ನು ಪತ್ರಿಕೆ, ಪರ್ತಕರ್ತರ ಮೇಲೆ ಹಾಕಲಾಗುತ್ತಿದೆ.  ಅಧಿಕಾರವನ್ನು ಬಳಸಿಕೊಂಡು ಸರಕಾರದ ವಿರುದ್ಧ ಧ್ವನಿ ಎತ್ತುವ ಮಾಧ್ಯಮಗಳಿಗೆ ಜಾಹಿರಾತು ನೀಡದೆ, ಪತ್ರಿಕೆಗಳನ್ನು ನಿಯಂತ್ರಿಸಲಾಗುತ್ತಿದೆ. ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ಕೆಲವು ನಿಯಮಾವಳಿಗಳನ್ನು ರೂಪಿಸಿ ನಿರ್ಬಂಧಿಸುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ನಮ್ಮ ಸಂಸ್ಥೆಯ ವಿರುದ್ಧವೂ ತಲಾ 100 ಕೋಟಿ ರೂ.ಗಳ ಎರಡು ಪ್ರಕರಣ, ತಲಾ 20 ಕೋಟಿಯ ಎರಡು ಪ್ರಕರಣಗಳನ್ನು ಇಂತಹ ಶಕ್ತಿಗಳು ದಾಖಲಿಸಿವೆ. ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾದ ಮಾಧ್ಯಮಗಳ ವೈಫಲ್ಯವು ಪ್ರಜಾಪ್ರಭುತ್ವ ವ್ಯವಸ್ಥೆ ಸೋತಂತೆ ಎಂದು  ವರದರಾಜನ್ ಹೇಳಿದರು.

ಭಾರತದ ಹೆಚ್ಚಿನ ಮಾಧ್ಯಮಗಳು ಕೋಮುವಾದದ ಹಿನ್ನೆಲೆಯಲ್ಲಿ ಜನರನ್ನು ವಿಭಜಿಸಲು ಯತ್ನಿಸುತ್ತಿವೆ. ಈ ದೇಶದ ಸಾವಿರಾರು ವರುಷಗಳ ಹಿಂದಿನಿಂದ ಬಂದ ಬಹುತ್ವ ವನ್ನು ನಿರಾಕರಿಸುತ್ತಿವೆ. ಲವ್ ಜಿಹಾದ್, ತ್ರಿವಳಿ ತಲಾಖ್, ವಂದೇ ಮಾತರಂ, ಬೀಫ್ ಸಾಗಾಟದ ವಿಚಾರದಲ್ಲಿ ಗಂಟೆಗಟ್ಟಲೆ ಚರ್ಚೆಗೆ ಮೀಸಲಿಡುವ ಕೆಲವು ಟಿ.ವಿ ಮಾಧ್ಯಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿಮುಖವಾಗುತ್ತಿವೆ. ದೇಶದಲ್ಲಿ ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ , ಜಿಎಸ್.ಟಿ ಹೇರಿದಾಗ ಧ್ವನಿ ಎತ್ತಬೇಕಾಗಿದ್ದ ಮಾಧ್ಯಮಗಳು ಸರಕಾರದ ಮುಲಾಜಿಗೆ ಒಳಗಾಗಿ ಅದರಿಂದ ದೂರ ಸರಿದವು. ಬದಲಾಗಿ ಸರಕಾರ ಹೇಳಿದಂತೆ ನೋಟು ಅಮಾನ್ಯಗೊಳಿಸಿದ ಪರಿಣಾಮವಾಗಿ ಕಪ್ಪುಹಣ ಹೊರಬರುತ್ತವೆ, ಭ್ರಷ್ಟಾಚಾರ ಕಡಿಮೆಯಾಗುತ್ತದೆ, ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಪ್ರಚಾರ ನೀಡಿದವು. ವಾಸ್ತವದಲ್ಲಿ ಏನಾಗುತ್ತದೆ ಎನ್ನುವುದರ ಕಡೆಗೆ ಗಮನಹರಿಸಲಿಲ್ಲ. ಸಂವಿಧಾನದ ಮೂಲ ಆಶಯದ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿದ ದೇಶದ ವಿದೇಶಾಂಗ ಸಚಿವರು ದೀನ್ ದಯಾಳ್ ಹೆಸರಿನಲ್ಲಿ ಪುಸ್ತಕ ಪ್ರಕಟಿಸುತ್ತಾ ಹಿಂದುತ್ವದ ಬಗ್ಗೆ ಪ್ರಚಾರ ಮಾಡುತ್ತಾರೆ ಎಂದರು.

‘ಭಾರತೀಯರು ಅಂದರೆ ಹಿಂದುಗಳು ’ಎನ್ನುತ್ತಾರೆ. ಈ ರೀತಿಯ ಧೋರಣೆ ಸಂವಿಧಾನಕ್ಕೆ ವಿರುದ್ಧವಾದದು. ಆದರೆ ಇದನ್ನು ವಿರೋಧಿಸುವ ಮಾಧ್ಯಮಗಳು ವಿರಳವಾಗಿವೆ. ಇತ್ತೀಚಿನ ದಿನಗಳಲ್ಲಿ ದೇಶ ಪ್ರೇಮದ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪತ್ರಕರ್ತರು, ಬುದ್ಧಿಜೀವಿಗಳನ್ನು ಗುರಿಯಾಗಿಸಿ ಅವರ ಮೇಲೆ ಹಲ್ಲೆ, ಹತ್ಯೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಪತ್ರಕರ್ತೆ ಗೌರಿ ಹತ್ಯೆ ಇಂತಹ ಪ್ರಕರಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಾಧ್ಯಮಗಳನ್ನು ಆಳುವ ಪಕ್ಷಗಳು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ಡುವ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಇದರೊಂದಿಗೆ ಭಾರತದ ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕುಸಿಯುತ್ತಿದೆ. ಅಮೆರಿಕಾಕ್ಕೆ ಹೋಲಿಸಿದರೆ ಅಮೆರಿಕಾದ ಮಾಧ್ಯಮ ರಂಗದ ಸ್ವಾತಂತ್ರ್ಯ ಭಾರತಕ್ಕಿಂತ ಹೆಚ್ಚಿದೆ. ಭಾರತದಲ್ಲಿ ಸ್ವಾತಂತ್ರ್ಯ ಮಾಧ್ಯಮ ರಂಗವೂ ಹೆಚ್ಚು ವಾಣಿಜ್ಯೀಕರಣಗೊಳ್ಳುತ್ತಿರುವ ಹಂತದಲ್ಲಿ ಪ್ರಜ್ಞಾವಂತ ಓದುಗರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುವ ಚಿಂತನೆ ಮಾಡಬೇಕಾಗಿದೆ. ಮಾಧ್ಯಮಗಳು ಈ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಸಂತ ಅಲೊಶಿಯಸ್ ಕಾಲೇಜಿನ ಉಪ ಪ್ರಾಮಶುಪಾಲ ಡಾ.ಮೆಲ್ವಿನ್ ಪಿಂಟೋ, ಸಿದ್ಧನ ಗೌಡ ಪಾಟೀಲ್, ಪಾರ್ಥ ಸಾರಥಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News