ಗಿನ್ನಿಸ್ ವಿಶ್ವ ದಾಖಲೆಗಾಗಿ ಪ್ರಧೀಶ್ ಕೆ. ಪ್ರಯತ್ನ ಮುಕ್ತಾಯ
ಕೋಟ, ನ. 10: ವಿಶ್ವದಲ್ಲಿ ಅತೀ ಉದ್ದದ ಚಿತ್ರವೊಂದನ್ನು ರಚಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ನೊಂದಾಯಿಸುವ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಧೀಶ್ ಕೆ.(17) ನ.7ರಿಂದ ಇಲ್ಲಿ ನಡೆಸಿದ ಪ್ರಯತ್ನ ಇಂದು ಮುಕ್ತಾಯಗೊಂಡಿದೆ.
ಈ ಅವಧಿಯಲ್ಲಿ ಅವರು 1,174.28ಮೀ. ಉದ್ದದ ಚಿತ್ರವನ್ನು ರಚಿಸಿದ್ದಾರೆ.
1,174.28 ಮೀ. ಉದ್ದ ಹಾಗೂ 10 ಸೆ.ಮೀ. ಅಗಲದ ಡ್ರಾಯಿಂಗ್ ಪೇಪರ್ ನಲ್ಲಿ ಸ್ಪಚ್ಛ ಭಾರತ ಪರಿಕಲ್ಪನೆಯನ್ನಾಧರಿಸಿ ಅವರು ಕ್ರೆಯಾನ್, ಸ್ಕೆಚ್ ಪೆನ್ ಹಾಗೂ ಚಾರ್‌ಕೋಲ್‌ನಲ್ಲಿ ಈ ಚಿತ್ರವನ್ನು ರಚಿಸಿದ್ದಾರೆ. ಮೊದಲ ದಿನ ಆರಂಭಿಕ ಭಾರತ, ಎರಡನೇ ದಿನ ಮಾಲಿನ್ಯ ಭಾರತ, ಮೂರನೇ ದಿನ ಸ್ವಚ್ಛ ಭಾರತ ಹಾಗೂ ಇಂದು ಅಭಿವೃದ್ಧಿ ಭಾರತ ವಿಷಯದ ಮೇಲೆ ತಾನು ಚಿತ್ರ ರಚಿಸಿರುವುದಾಗಿ ಪ್ರಧೀಶ್ ಸುದ್ದಿಗಾರರಿಗೆ ತಿಳಿಸಿದರು.
ಗಿನ್ನಿಸ್ ಸಂಸ್ಥೆ ದಾಖಲೆಗಾಗಿ ನಿಗದಿ ಪಡಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸಿ ದಾಖಲೆಯನ್ನು ಗಿನ್ನಿಸ್ ಸಂಸ್ಥೆಗೆ ಕಳುಹಿಸಲಿದ್ದು, ಅವರು ಪರಿಶೀಲಿಸಿದ ಬಳಿಕ ಮುಂದಿನ ಫೆಬ್ರವರಿ ತಿಂಗಳಲ್ಲಿ ತನ್ನ ದಾಖಲೆಯ ಕುರಿತಂತೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಪ್ರಧೀಶ್ ತಿಳಿಸಿದರು.
ಅತೀ ಉದ್ದದ ಚಿತ್ರಕಲೆಯಲ್ಲಿ ಈಗಿನ ಗಿನ್ನಿಸ್ ದಾಖಲೆ ಇರುವುದು ತಮಿಳುನಾಡಿನ ಪರಿಮಳಕಾಂತ್ ಕುಮಾರ ವಿಜಯನ್ ಹೆಸರಿನಲ್ಲಿ. ಅವರು 2016ರ ಅಕ್ಟೋಬರ್ ತಿಂಗಳಲ್ಲಿ 660.222 ಮೀ. ಉದ್ದದ ಪೇಪರ್‌ನಲ್ಲಿ ‘ನೀರಿನ ಅಡಿ ಸಮುದ್ರ ಜೀವಿಗಳ ಜೀವನ’ ವಿಷಯದ ಕುರಿತು ಚಿತ್ರ ಬರೆದು ದಾಖಲೆಯನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ಅವರ ಹೆಸರಿನಲ್ಲಿ ಘೋಷಿಸಲಾಗಿತ್ತು ಎಂದರು. ಈ ವಿಶ್ವ ದಾಖಲೆಗಾಗಿ ತಾನು ಪ್ರತಿದಿನ 8ರಿಂದ 9ಗಂಟೆ ಕಾಲ ಸತತವಾಗಿ ಚಿತ್ರ ಬಿಡಿಸಿರುವುದಾಗಿ ಪ್ರಧೀಶ್ ತಿಳಿಸಿದ್ದರು. ತಲಾ 40ಮೀ. ಉದ್ದದ ಪೇಪರ್ ರೋಲ್‌ನಲ್ಲಿ ಚಿತ್ರ ಬಿಡಿಸುತಿದ್ದು, ಪ್ರತಿದಿನ ಇಂಥ 7-8 ರೋಲ್ ಗಳಲ್ಲಿ ಚಿತ್ರ ಬಿಡಿಸಿದ್ದಾಗಿ ಹೇಳಿದರು. ಒಟ್ಟಾರೆಯಾಗಿ ನಾಲ್ಕು ದಿನಗಳಲ್ಲಿ ಒಟ್ಟು ಇಪ್ಪತೈದುವರೆ ರೋಲ್‌ಗಳನ್ನು ಬಳಸಿ 1,174.28 ಮೀ. ಚಿತ್ರವನ್ನು ಒಟ್ಟು 33 ಗಂಟೆ 58ನಿಮಿಷಗಳಲ್ಲಿ ರಚಿಸಿದ್ದಾಗಿ ಅವರು ನುಡಿದರು.
ಬ್ರಹ್ಮಾವರ ಸಮೀಪದ ಪೇತ್ರಿಯ ಕೆ.ಎಸ್.ಪ್ರಸಾದ್ ಹಾಗೂ ಪ್ರಸನ್ನ ಪಿ.ಭಟ್ ದಂಪತಿಯ ಪುತ್ರರಾದ ಪ್ರಧೀಶ್, ತನ್ನಣ್ಣ ಇಂಜಿನಿಯರ್ ಪ್ರಥ್ವೀಶ್ ಕೆ. ರುಬಿಕ್ ಕ್ಯೂಬ್‌ನಲ್ಲಿ 2016ರ ಅಕ್ಟೋಬರ್ ತಿಂಗಳಲ್ಲಿ ಮಾಡಿದ ಗಿನ್ನಿಸ್ ದಾಖಲೆ ಪ್ರಯತ್ನ ನನಗೆ ಸ್ಪೂರ್ತಿಯಾಯಿತು. ನಾನು ನನ್ನ ಆಸಕ್ತಿಯ ಚಿತ್ರಕಲೆಯನ್ನು ಇದಕ್ಕಾಗಿ ಆಯ್ಕೆ ಮಾಡಿಕೊಂಡು ಇದರಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನಿಸಿದ್ದೇನೆ. ಮುಂದಿನ ಫೆ. ತಿಂಗಳ ವೇಳೆಗೆ ಈ ದಾಖಲೆ ಸಿಗುವ ನಿರೀಕ್ಷೆ ಇದೆ ಎಂದರು.
ಇಂದು ಅಪರಾಹ್ನ 1 ಗಂಟೆಗೆ ತನ್ನ ದಾಖಲೆಯ ಪ್ರಯತ್ನವನ್ನು ಪ್ರಧೀಶ್ ಮುಕ್ತಾಯಗೊಳಿಸಿದ್ದರು. ಬಳಿಕ ಕಾಲೇಜಿನ ಮೈದಾನದಲ್ಲಿ ಹಾಸನ್ನು ಹಾಸಿ ಅದರ ಮೇಲೆ ಅವರು ಬಿಡಿಸಿದ 1 ಕಿಮೀ ಉದ್ದದ ಚಿತ್ರವನ್ನು ಜೋಡಿಸುವ ಕಾರ್ಯ ನಡೆಯಿತು. ಎಲ್ಲಾ ಪೇಪರ್‌ಗಳನ್ನು ಜೋಡಿಸಿದ ಮೇಲೆ ಅವುಗಳ ಸರಿಯಾದ ಉದ್ದವನ್ನು ಅಳೆದು ದಾಖಲಿಸಲಾಯಿತು.
ಈ ಎಲ್ಲಾ ಪ್ರಕ್ರಿಯೆಗಳಿಗೆ ಸಾಕ್ಷಿಗಳಾಗಿ ಚಿತ್ರಕಲಾವಿದ ರಮೇಶ್ ರಾವ್, ಉಡುಪಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಡಿ.ವಿ.ಹೆಗಡೆ, ಈಜಿನಲ್ಲಿ ಗಿನ್ನಿಸ್ ದಾಖಲೆ ಪಡೆದಿರುವ ಗೋಪಾಲ ಖಾರ್ವಿ ಹಾಗೂ ನೋಟರಿ ಕರ್ಜೆ ಬಾಲಕೃಷ್ಣ ಶೆಟ್ಟಿ ಕಾರ್ಯನಿರ್ವಹಿಸಿದ್ದರು.