ಉಡುಪಿಗೂ ಬಂತು ಸಾಹಸೀ ಜಲಕ್ರೀಡೆ ‘ಸ್ಕೂಬಾ ಡೈವಿಂಗ್’
ಕಾಪು, ನ.12: ಈವರೆಗೆ ‘ನೇಶನಲ್ ಜಿಯೋಗ್ರಫಿ’ ಚಾನಲ್‌ನಲ್ಲಿ ನೋಡಿ ಸಮುದ್ರದೊಳಗಿನ ಜೀವವೈವಿಧ್ಯತೆಗೆ ಬೆರಗಾಗಿ, ಅವುಗಳ ಆಕರ್ಷಣೆಗೆ ಮರುಳಾದ ಸಾಹಸಪ್ರಿಯರು, ಪ್ರಕೃತಿ ಪ್ರೇಮಿಗಳಿಗೆ ಇದೀಗ ಅವುಗಳನ್ನು ನೇರವಾಗಿ, ಜೀವಂತವಾಗಿ ತಮ್ಮ ಕಣ್ಣೆದುರೇ ನೋಡುವ ಅವಕಾಶವು ಕೈಗೂಡಿದೆ.
ಆದರೆ ಇದಕ್ಕಾಗಿ ನಿಮ್ಮಲ್ಲಿ ಸಾಹಸೀ ಪ್ರವೃತ್ತಿ, ಸಮುದ್ರದಾಳಕ್ಕೆ ಇಳಿದು ಅವುಗಳನ್ನು ಸಮೀಪದಲ್ಲಿ ನೋಡುವ ಗಂಡೆದೆ ಬೇಕಾಗುತ್ತದೆ. ಹೌದು, ಈವರೆಗೆ ಕೇವಲ ಟಿವಿ ಪರದೆಯಲ್ಲಿ ನೋಡಿ, ಪುಸ್ತಕಗಳಲ್ಲಿ ಓದಿ ತಿಳಿದಿದ್ದ ‘ಸ್ಕೂಬಾ ಡೈವಿಂಗ್’ ಈಗ ಕಾಪುವಿಗೂ ಕಾಲಿರಿಸಿದೆ. ಈ ಸ್ಕೂಬಾ ಡೈವಿಂಗ್ ಕೇಂದ್ರಕ್ಕೆ ರವಿವಾರ ಕಾಪು ಬೀಚ್ ಬಳಿ ಚಾಲನೆ ನೀಡಲಾಯಿತು.
ಇದಕ್ಕಾಗಿ ಕಾಪು ದೀಪಸ್ತಂಭದ ಬಳಿಯಿಂದ ಹೊರಡುವ ಬೋಟಿನಲ್ಲಿ ಸುಮಾರು 20ರಿಂದ 30 ನಿಮಿಷಗಳ ಕಾಲ ಎಂಟು ಕಿ.ಮೀ.ನಷ್ಟು ಪ್ರಯಾಣಿಸಿ, ಬಂಡೆಗಳಿಂದ ಸುತ್ತುವರಿದಿರುವ ಪ್ರದೇಶಕ್ಕೆ ಪ್ರಯಾಣ ಬೆಳೆಸಬೇಕು. ಅಲೆಗಳ ಏರಿಳಿತದ ನಡುವೆ ಸಾಗುವ ಈ ಪ್ರಯಾಣವೇ ಒಂದು ಮಧುರ ಅನುಭವವಾಗಿದೆ.
ಅವಿಭಜಿತ ಜಿಲ್ಲೆಗೆ ಏಕೈಕ: ಕಾಪು ಕಡಲ ತೀರದಲ್ಲಿ ಇಂದು ಪ್ರಾರಂಭ ಗೊಂಡ ‘ಸ್ಕೂಬಾ ಡೈವಿಂಗ್’ ಅವಿಭಜಿತ ಕರಾವಳಿಯ ಏಕೈಕ ಸಾಹಸಿ ಜಲಕ್ರೀಡೆ ಕೇಂದ್ರವಾಗಿದೆ. ಇದು ಬಿಟ್ಟರೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಇನ್ನೊಂದು ಸ್ಕೂಬಾ ಡೈವಿಂಗ್ ಕೇಂದ್ರವಿದೆ. ಇದು ಈಗಾಗಲೇ ಸಾಕಷ್ಟು ಜನಪ್ರಿಯ ತೆಯೊಂದಿಗೆ ಭಾರೀ ಸಂಖ್ಯೆಯ ಸಾಹಸಿಗರನ್ನು ದೇಶ-ವಿದೇಶಗಳಿಂದ ಆಕರ್ಷಿಸುತ್ತಿದೆ. ನೇತ್ರಾಣಿ ದ್ವೀಪ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ತಾಣವೆನ್ನಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಈ ಸಾಹಸ ಜಲಕ್ರೀಡೆಗೆ ಸೂಕ್ತ ತಾಣಕ್ಕೆ ಹುಡುಕಾಟ ನಡೆಸಿ ಅಂತಿಮವಾಗಿ ಬೋಟ್ ಫೆಡರೇಷನ್ ನೀಡಿದ ಸಲಹೆಯಂತೆ ಕಾಪು ಬೀಚ್‌ನಿಂದ ಸಮುದ್ರದಲ್ಲಿ 8 ಕಿಮೀ ದೂರದ ಬಂಡೆಗಳ ಸಮೂಹದ ತಾಣ ‘ಮುಲ್ಕಿ ರಾಕ್’ ಪ್ರದೇಶ ಅತ್ಯಂತ ಪ್ರಶಸ್ತ ಎಂದು ಆಯ್ಕೆ ಮಾಡಲಾಯಿತು ಎಂದು ಇಲ್ಲಿ ಮೂರು ವರ್ಷಗಳಿಗೆ ‘ಸ್ಕೂಬಾ ಡೈವಿಂಗ್’ಗೆ ಗುತ್ತಿಗೆ ಪಡೆದಿರುವ ಮುಂಬೈ ಮೂಲದ ವೆಸ್ಟ್ ಕೋಸ್ಟ್ ಅಡ್ವೆಂಚರಸ್‌ನ ಸ್ಥಾಪಕ ಪವನ್ ಶೌರಿ ತಿಳಿಸಿದರು.
ತಮ್ಮ ಸಂಸ್ಥೆ ಮುಂಬೈ, ಗೋವಾ ಹಾಗೂ ನೇತ್ರಾಣಿಗಳಲ್ಲೂ ‘ಸ್ಕೂಬಾ ಡೈವಿಂಗ್’ನ್ನು ನಡೆಸುತಿದ್ದು, ಅನುಭವಿ ಸ್ಕೂಬಾ ಡೈವರ್‌ಗಳನ್ನು ಹೊಂದಿದೆ ಹಾಗೂ ವಿಶ್ವಾಸಾ ರ್ಹವೆನಿಸಿದೆ ಎಂದರು. ಇಲ್ಲಿನ ಸಮುದ್ರದಾಳದಲ್ಲಿ ನೇತ್ರಾಣಿ ದ್ವೀಪದಲ್ಲಿ ಇರುವಷ್ಟೇ ವೈವಿಧ್ಯದ ಸಮುದ್ರ ಜೀವಿ ಸಂಕುಲಗಳಿದ್ದು, ಹವಳದ ದಿಬ್ಬಗಳು, ಆಕರ್ಷಕ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ. ಅಲ್ಲದೇ ಇಲ್ಲಿ ನೀರಿನಾಳದ ದೃಶ್ಯಗಳು ಇತರೆಡೆಗಿಂತ ಅತ್ಯಂತ ಸ್ಪಷ್ಟವಾಗಿ ತೋರಲಿದೆ ಎಂದರು.
ಸ್ಕೂಬಾ ಡೈವಿಂಗ್‌ಗೆ ಅತೀ ಅಗತ್ಯವಾಗಿ ಬೇಕಿರುವುದು ಸ್ಪಚ್ಛ ಹಾಗೂ ಸ್ಪಷ್ಟವಾದ ನೀರು ಮತ್ತು ನೀರಿನೊಳಗಿನ ಗೋಚರತೆ (ವಿಸಿಬಿಲಿಟಿ). ಇದು ನೇತ್ರಾಣಿಯಲ್ಲಿ 8ರಿಂದ 10 ಮೀ.ಇದ್ದರೆ, ಇಲ್ಲಿ 6ರಿಂದ 8ಮೀ.ನಷ್ಟಿದೆ. ಅಂಡಮಾನ್, ಲಕ್ಷದ್ವೀಪಗಳಲ್ಲಿ ಇದು ಇನ್ನೂ ಹೆಚ್ಚಿರಬಹುದು ಎಂದವರು ಹೇಳಿದರು.
ಸ್ಕೂಬಾ ಡೈವ್ ನಡೆಸಲು ಬಂಡೆಗಳಿಂದ ಆವೃತ್ತವಾಗಿ, ಅಡಿಯಲ್ಲೂ ಬಂಡೆಗಳ ಸ್ಲೋಪ್ ಇರುವ ಪ್ರದೇಶ ಸೂಕ್ತ. ಅಂಥ ಜಾಗಗಳಲ್ಲಿ ಮೀನುಗಾರರು ಮೀನು ಹಿಡಿಯಲು ಬಾರದ ಕಾರಣ, ಬಣ್ಣಬಣ್ಣದ ಆಕರ್ಷಣೀಯ ಮೀನುಗಳು, ಇತರ ಜೀವವೈವಿದ್ಯತೆಗಳಿಗೆ ಇದು ಆಶ್ರಯ ತಾಣವಾಗಿರುತ್ತದೆ. ಬೋಟುಗಳು ಹೆಚ್ಚು ಬಾರದ, ಜನರಿಂದ ದೂರವಿರುವ ತಾಣಗಳು ಇವಾಗಿರುವುದರಿಂದ ಇಲ್ಲಿ ಸಮುದ್ರ ಜೀವಿಗಳ ಸಮೂಹವೇ ಇರುತ್ತದೆ. ಇವುಗಳನ್ನು ನೀವು ಸಮೀಪದಿಂದ ವೀಕ್ಷಿಸಲು ಸ್ಕೂಬಾ ಡೈವ್ ಅವಕಾಶ ಮಾಡಿಕೊಡುತ್ತದೆ.
ಇಲ್ಲಿನ ಮುಲ್ಕಿ ರಾಕ್ ಪ್ರದೇಶದಲ್ಲಿ ಸಣ್ಣ ಶಾಕ್‌ರ್ಗಳು, ನೀರುನಾಯಿಯಂಥ ಅಪರೂಪದ ಸಮುದ್ರ ಜೀವಿಗಳನ್ನು ತಾವು ನೋಡಿದ್ದಾಗಿ, ವೆಸ್ಟ್‌ಕೋಸ್ಟ್‌ನ ಡೈವರ್ ಹಾಗೂ ತರಬೇತುದಾರರಾಗಿರುವ ಕಿತ್ ಫೆರ್ನಾಂಡೀಸ್ ಹಾಗೂ ಅರೆನ್ ಫೆರ್ನಾಂಡೀಸ್ ತಿಳಿಸಿದರು. ಇಲ್ಲಿ ಸ್ಕೂಬಾ ಡೈವಿಂಗ್ ನಡೆಸಲು ವೆಸ್ಟ್‌ಕೋಸ್ಟ್ ಅಡ್ವೆಂಚರಸ್ ಉಡುಪಿ ಜಿಲ್ಲಾಡಳಿತದೊಂದಿಗೆ 3 ವರ್ಷಗ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ.
ಯಾರು ಮಾಡಬಹುದು: ಸ್ಕೂಬಾ ಡೈವಿಂಗ್ ಮಾಡಲು ಈಜು ಬಲ್ಲವರಾಗಿರಬೇಕೆಂಬ ನಿಯಮವೇನಿಲ್ಲ. 10 ವರ್ಷ ಮೇಲ್ಪಟ್ಟ, ಹೃದಯ ತೊಂದರೆ ಇಲ್ಲದ ಎಲ್ಲರೂ ಭಾಗವಹಿಸಬಹುದು. ಗರಿಷ್ಠ ಮಿತಿ ಇದಕ್ಕಿಲ್ಲ. ನೇತ್ರಾಣಿಯಲ್ಲಿ ಇತ್ತೀಚೆಗೆ 71 ವರ್ಷದ ವೃದ್ದೆಯೊಬ್ಬರು ಅರ್ಧಗಂಟೆ ಸ್ಕೂಬಾ ಡೈವಿಂಗ್ ಮಾಡಿದ್ದಾರೆ ಎಂದು ಪವನ್ ಶೌರಿ ವಿವರಿಸಿ ಅಚ್ಚರಿ ಮೂಡಿಸಿದರು.
ಡೈವಿಂಗ್‌ಗೆ ತೆರಳುವ ಮೊದಲು ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಪರೀಕ್ಷೆಗಳಿದ್ದು, ಹೃದಯರೋಗ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂಬ ಕುರಿತು ಸ್ವಯಂಘೋಷಿತ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ಅರ್ಧಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮ, ಕ್ರಮಗಳ ಕುರಿತು ನುರಿತ ತರಬೇತುದಾರರ ತಿಳಿಸಿಕೊಡುತ್ತಾರೆ. ನೀವು ಡೈವ್ ಮಾಡುವಾಗ ಒಬ್ಬ ಪರಿಣಿತ ತರಬೇತಾದ ಡೈವರ್ ಇರುವುದು ಕಡ್ಡಾಯ. ಅವರ ಸಹಾಯದಿಂದ ಡೈವಿಂಗ್ ಮಾಡಬಹುದು ಎಂದರು.
ಕಾಪುನಲ್ಲಿ ಸದ್ಯಕ್ಕೆ ಒಮ್ಮೆ ಮಾತ್ರ ಡೈವಿಂಗ್ ತಾಣಕ್ಕೆ ಕರೆದೊಯ್ಯಲಾಗುವುದು. ಡೈವಿಂಗ್ ಮಾಡಲು ಅಗತ್ಯವಿರುವ ಎಲ್ಲಾ ರೀತಿಯ ಸಲಕರಣೆ, ಜೀವರಕ್ಷಕ ಉಪಕರಣ ಗಳನ್ನು ಹೊಂದಿದ್ದೇವೆ. ಪ್ರಾರಂಭಿಕ ಶುಲ್ಕವಾಗಿ ಪ್ರತಿಯೊಬ್ಬ ಡೈವರ್‌ಗೂ ತಲಾ 3,500 ರೂ.ಗಳನ್ನು ನಿಗದಿಪಡಿಸಲಾಗಿದೆ. ಅದೇ ನೇತ್ರಾಣಿ ಯಲ್ಲಿ ಪ್ರತಿಯೊಬ್ಬರಿಗೂ 6,000 ರೂ. ಶುಲ್ಕವಿದೆ ಎಂದು ಪವನ್ ಶೌರಿ ತಿಳಿಸಿದರು.
ಸ್ಕೂಬಾ ಡೈವಿಂಗ್‌ಗೆ ಮುಂಗಡ ಬುಕ್ಕಿಂಗ್ ಮಾಡಲು ಮೊ. ಸಂಖ್ಯೆ: 7057066669ನ್ನು ಸಂಪರ್ಕಿಸಬಹುದು. ಕಾಪು ಸಮುದ್ರ ಕಿನಾರೆ ಸಮೀಪ ತಮ್ಮ ಕಚೇರಿಯೂ ಇದೆ ಎಂದವರು ಹೇಳಿದರು.
ವರ್ಷದಲ್ಲಿ ಎಂಟು ತಿಂಗಳು
ವರ್ಷದಲ್ಲಿ ಎಂಟು ತಿಂಗಳು ಮಾತ್ರ ಸ್ಕೂಬಾ ಡೈವಿಂಗ್‌ಗೆ ಅವಕಾಶವಿದೆ. ಮಳೆಗಾಲದ ನಾಲ್ಕು ತಿಂಗಳು ಇದು ಸಾಧ್ಯವಿಲ್ಲ. ಪ್ರತಿಯೊಬ್ಬರು ಅರ್ಧಗಂಟೆ ಮಾತ್ರ ನೀರಿನಾಳದಲ್ಲಿರಬಹುದು. ಅನನುಭವಿಗಳಿಗೆ, ಮೊದಲ ಬಾರಿ ಭಾಗವಹಿಸುವವರಿಗೆ ಗರಿಷ್ಠ 12 ಮೀ. ಮಾತ್ರ ಆಳಕ್ಕೆ ಕರೆದೊಯ್ಯಲಾಗುವುದು. ಸ್ಕೂಬಾ ಡೈವಿಂಗ್‌ನಲ್ಲಿ ವಿವಿಧ ಹಂತದ ತರಬೇತಿ ಪಡೆದವರಿಗೆ 15, 18, 30 ಹಾಗೂ ಗರಿಷ್ಠ 40 ಮೀ. ಆಳಕ್ಕೆ ಇಳಿದು ಅಲ್ಲಿನ ಸಮುದ್ರ ಜೀವವೈವಿಧ್ಯವನ್ನು ವೀಕ್ಷಿಸಲು ಅವಕಾಶವಿದೆ ಎಂದು ಪವನ್ ಶೌರಿ ತಿಳಿಸಿದರು.ಮೂಲ್ಕಿ ರಾಕ್ ಪ್ರದೇಶ ಈವರೆಗೆ ಯಾರ ಗಮನಕ್ಕೂ ಬಾರದ ಕಾರಣ ಇಲ್ಲಿ ಮೀನುಗಳ ನರ್ಸರಿ ಇದ್ದು, ಅವುಗಳ ಬಣ್ಣ, ಗಾತ್ರ, ವಿನ್ಯಾಸಗಳ ವೈವಿದ್ಯತೆ ಮುಳುಗುಗಾರರಿಗೆ ರೋಚಕ ಅನುಭವ ನೀಡುತ್ತದೆ ಎಂದು ತರಬೇತುದಾರ ಕಿತ್ ಫೆರ್ನಾಂಡೀಸ್ ನುಡಿದರು.