ಕರ್ನಾಟಕದಲ್ಲಿ ಶಿಕ್ಷಣ ಅಪಾಯದ ಹಾದಿಯಲ್ಲಿ: ಪ್ರೊ. ನಿರಂಜನಾರಾಧ್ಯ
ಮೂಡುಬಿದಿರೆ (ರತ್ನಾಕರ ವೇದಿಕೆ), ಎಂ. ಗೋಪಾಲಕೃಷ್ಣ ಅಡಿಗ ಸಭಾಂಗಣ, ಡಿ. 2: ಸಾಮಾಜಿಕ ಒಳಿತಾಗಿ ತೆರೆಯಬೇಕಾಗಿದ್ದ ಶಿಕ್ಷಣ ವ್ಯವಸ್ಥೆ ಕರ್ನಾಟಕದಲ್ಲಿ ಖಾಸಗೀಕರಣ, ವ್ಯಾಪಾರೀಕರಣದಿಂದಾಗಿ ಅಪಾಯದ ಹಾದಿಯಲ್ಲಿದೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ. ಎಚ್ಚರಿಸಿದರು.
ನುಡಿಸಿರಿಯಲ್ಲಿ ಇಂದು ಶಾಲಾ ಶಿಕ್ಷಣದ ಸ್ಥಿತಿಗತಿ- ಸಾಧ್ಯತೆಗಳು ಮತ್ತು ಸವಾಲುಗಳು ಎಂಬ ವಿಷಯದಲ್ಲಿ ಮಾತನಾಡಿದ ಅವರು, ಶಿಕ್ಷಣವು ವ್ಯಾಪಾರೀಕರಣಗೊಂಡಿರುವುದರಿಂದ ದಿನದಿಂದ ದಿನಕ್ಕೆ ಸಾಮಾಜಿಕ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಸಾರ್ವಜನಿಕ ಶಾಲೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ಥಾರೆ. ಪರಿಣಾಮವಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ವಿಷಾದಿಸಿದರು.
ಬಹುತ್ವದ ನೆಲೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಟ್ಟಿಕೊಳ್ಳುವಲ್ಲಿ ಶಿಕ್ಷಣ ಅತೀ ಅಗತ್ಯ. ಆದರೆ ಕರ್ನಾಟಕ ಮಾತ್ರವಲ್ಲ ದೇಶದಲ್ಲಿಯೂ ಶಿಕ್ಷಣದಲ್ಲಿ ಅಸಮಾನತೆಯಿಂದಾಗಿ ಶಿಕ್ಷಣ ಪದ್ಧತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಹುದೊಡ್ಡ ಬಾಧಕವಾಗಿದೆ. ಇದರಿಂದಾಗಿ ಬಹುತ್ವದ ಭಾಗವಾದ ಧಾರ್ಮಿಕತೆ, ಭಾಷೆ, ಸಾಂಸ್ಕೃತಿಕ ವೈವಿಧ್ಯತೆ, ಆಹಾರ ಇವೆಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದವರು ವಿಶ್ಲೇಷಿಸಿದರು.
ಸಾಮಾಜಿಕ ಒಳಿತು ಶಿಕ್ಷಣ ವ್ಯವಸ್ಥೆಯಾಗದ ಹೊರತು ಸಂವಿಧಾನದ ಆಶಯಗಳನ್ನು ಸಾಕಾರಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಾನತೆಗೆ ಪ್ರೋತ್ಸಾಹ ನೀಡಬೇಕಾದ ಪ್ರಭುತ್ವವೇ ಶಿಕ್ಷಣದ ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸರಕಾರಿ ಶಾಲೆಗಳ ವಿರುದ್ಧ ವ್ಯವಸ್ಥಿತ ಪಿತೂರಿಗೆ ಕಾರಣವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ, ಶಿಕ್ಷಕರ ಕೊರತೆಯು ಸಾರ್ವಜನಿಕರನ್ನು ಸರಕಾರಿ ಶಾಲೆಗಳಿಂದ ವಿಮುಖಗೊಳಿಸುತ್ತಿವೆ. ಎಲ್ಲಾ ಮಕ್ಕಳಿಗೆ ಶಿಕ್ಷಣ ಒದಗಿಸುವ ಆಶಯದಿಂದ ಆರ್‌ಟಿಇ ಕಾಯ್ದೆ ಜಾರಿಗೆ ಬಂದು ಏಳು ವರ್ಷಗಳಾದರೂ ಕನಾರ್ಟಕದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ ಮಾತ್ರ ಇನ್ನೂ ಕವಲುದಾರಿಯಲ್ಲಿದೆ. ಸರಕಾರಿ ಶಾಲೆಗಳನ್ನು ಉಳಿಸಲು ನೀತಿ ರೂಪಿಸುವವರು ಖಾಸಗಿ ಶಾಲೆಗಳ ಮಾಲಕರಾಗಿರುವುದರಿಂದ ನೀತಿಗಳನ್ನು ಜಾರಿಗೊಳಿಸಲಾದೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಕಲಿಕೆ ಮತ್ತು ಶಿಕ್ಷಣವು ಮಾಹಿತಿ ಹಂಚಿಕೆಗೆ ಸೀಮಿತಗೊಳ್ಳದೆ ಹೊಸ ಮೌಲ್ಯಗಳನ್ನು ಸೃಷ್ಟಿಸಬೇಕಾಗಿದೆ. ಸಮಾನತೆಯ ನೆಲೆಯಲ್ಲಿ ಹೊಸ ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯವಾಗಬೇಕು. ಶಿಕ್ಷಣದಲ್ಲಿ ಸಮಾನತೆಯ ಕೂಗನ್ನು ಹುಟ್ಟು ಹಾಕಬೇಕಾಗಿದೆ ಎಂದು ಪ್ರೊ. ನಿರಂಜನಾರಾಧ್ಯ ಆಶಯ ವ್ಯಕ್ತಪಡಿಸಿದರು.
ನುಡಿಸಿರಿ ಸಮ್ಮೇನಳನಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.
ಶ್ರೇಣೀಕೃತ ಶಿಕ್ಷಣದಿಂದ ಬಹುತ್ವಕ್ಕೆ ಧಕ್ಕೆಸಮಾಜದಲ್ಲಿ ಎಲ್ಲಾ ರೀತಿಯ ಜಾತಿ, ಧರ್ಮ, ಲಿಂಗ, ಸಾಮಾಜಿಕ ಸ್ಥಾನಮಾನ ಮರೆತು ಮಕ್ಕಳಿಗೆ ಸಮಾನತೆ ಪರಿಕಲ್ಪನೆ ಕಟ್ಟಿಕೊಡುವುದು ಶಿಕ್ಷಣ ವ್ಯವಸ್ಥೆ. ಇದರಿಂದ ಮಕ್ಕಳು ಮುಂದೆ ಬಹುತ್ವದ ನೆಲೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಆತಂಕ ಮತ್ತು ಆಘಾತಕಾರಿಯಾಗಿದೆ. ಶ್ರೇಣೀಕೃತ ಪದ್ಧತಿಯ ಶಿಕ್ಷಣ ವ್ಯವಸ್ಥೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದರಿಂದಾಗಿ ಸಮಾನತೆಯ ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.