ಲೋಕಾಯುಕ್ತ ಹುದ್ದೆ ಅತ್ಯಂತ ಹೆಚ್ಚು ತೃಪ್ತಿ ನೀಡಿದ ಹುದ್ದೆ: ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ
ಮೂಡುಬಿದಿರೆ (ರತ್ನಾಕರ ವರ್ಣಿ ವೇದಿಕೆ, ಗೋಪಾಲಕೃಷ್ಣ ಅಡಿಗ ವೇದಿಕೆ), ಡಿ. 3: ಲೋಕಾಯುಕ್ತ ಹುದ್ದೆ ಅತ್ಯಂತ ಹೆಚ್ಚು ತೃಪ್ತಿ ನೀಡಿದ ಹುದ್ದೆ ಎಂದು ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಅವರು ಇಂದು ಆಳ್ವಾಸ್ ನುಡಿ ಸಿರಿಯಲ್ಲಿ ನನ್ನ ಕತೆ ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು. ಲೋಕಾಯುಕ್ತನಾಗಿದ್ದಾಗ 5 ವರ್ಷಗಳಲ್ಲಿ 23 ಸಾವಿರ ದೂರುಗಳು ಆಡಳಿತ ನಡೆಸುವವರ ವಿರುದ್ಧ ಬಂದಿದೆ. ಈ ಪೈಕಿ ಸಚಿವರು, ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ವಿರುದ್ಧ ದೂರುಗಳಿತ್ತು. ಗಣಿಗಾರಿಕೆಯ ಅಕ್ರಮದಲ್ಲಿ ಮೂರು ಮುಖ್ಯ ಮಂತ್ರಿಗಳ ಹೆಸರೂ ಇತ್ತು. ಈ ಮೂವರಲ್ಲಿ ಒಬ್ಬರು ಕಾಂಗ್ರೆಸ್, ಇನ್ನೊಬ್ಬರು ಜೆಡಿಎಸ್ , ಮತ್ತೊಬ್ಬರು ಬಿಜೆಪಿ ಸೇರಿದವರು ಹಾಗೂ ಹಲವು ಸಚಿವರ, ಶಾಸಕರ ಹೆಸರುಗಳಿತ್ತು. ಲೋಕಾಯುಕ್ತ ನಾಗಿದ್ದಾಗ ಜನರಿಗೆ ಸಹಾಯ ಮಾಡುವ ಹೆಚ್ಚಿನ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಈ ಸಂದರ್ಭ ಆಡಳಿತದಲ್ಲಿರುವ ಭೃಷ್ಟಾಚಾರದ ಚಿತ್ರಣವು ನನಗೆ ಮನವರಿಕೆ ಆಗಲಾರಂಭಿಸಿತು. ಗುದದ್ವಾರವಿಲ್ಲದ ಮಗವನ್ನು ತಾಯಿಯೊಂದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕದೆ ಇದ್ದಾಗ ನನ್ನ ಬಳಿ ತಂದರು. ನನ್ನಿಂದಾಗುವ ಸಹಾಯ ಮಾಡಿದ್ದೇನೆ. ಅದೇ ಕೆಲಸವನ್ನು ಪುಣ್ಯದ ಕೆಲಸ ಎಂದು ತಿಳಿದು ವೈದ್ಯರು ಮಾಡದೆ ಮಾನವೀಯತೆ ಮರೆತ ಘಟನೆಯನ್ನು ಸಂತೋಷ್ ಹೆಗ್ಡೆ ವಿವರಿಸಿದರು.
ಯುವಜನರ ಮೇಲೆ ವಿಶ್ವಾಸವಿದೆ. ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ .ಆ ಕಾರಣಕ್ಕಾಗಿ 987 ಶಾಲಾ ಕಾಲೇಜುಗಳಿಗೆ ತೆರಳಿ ಭೃಷ್ಟಾಚಾರದ ವಿರುದ್ಧ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ಪಟ್ಟಿದ್ದೇನೆ. ಅದರಿಂದ ಏನಾಗುತ್ತದೆ ಎನ್ನುವ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. ಆಗ ನಾವು ಏನು ಮಾಡಿಲ್ಲ ಎನ್ನುವ ಕಾರಣಕ್ಕಾಗಿ ನಮ್ಮ ಆತ್ಮ ತೃಪ್ತಿಗಾಗಿ ಈ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳ ಬೇಕಾಗಿದೆ. ದೇಶದಲ್ಲಿ ಭೃಷ್ಟಾಚಾರದ ಮೂಲಕ ದೇಶದ ಸಂಪತ್ತು ಎಷ್ಟು ಲೂಟಿಯಾಗುತ್ತದೆ ಎನ್ನುವ ಬಗ್ಗೆ ಇಂದಿನ ಮಕ್ಕಳಲ್ಲೂ ಜಾಗೃತಿ ಮುಡಿಸಬೇಕಾಗಿದೆ. ಸಮಾಜದಲ್ಲೂ ಒಳ್ಳೆಯವರನ್ನು ಗೌರವಿಸುವ ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಇರಬೇಕು. ಹಿಂದೆ ರಾಜಕೀಯ ಸೇವಾ ಕ್ಷೇತ್ರವಾಗಿತ್ತು. ಈಗ ಸೇವಾ ಕ್ಷೇತ್ರವಾಗಿ ಉಳಿದಿಲ್ಲ ಎಂದು ಸಂತೋಷ್ ಹೆಗ್ಡೆ ತಿಳಿದಿರು.
ಹಿಂದೆ ಮಾಜಿ ಪ್ರಧಾನಿ ರಾಜೀವ ಗಾಂಧಿ ದೆಹಲಿಯಿಂದ ಕಳುಹಿಸುವ ಒಂದು ರೂ. ಫಲಾನುಭವಿಗೆ ತಲುಪುವಾಗ 15 ಪೈಸೆ ಮಾತ್ರ ತಲುಪುತ್ತದೆ ಎಂದ್ದಿರು. ಈ ಪರಿಸ್ಥಿತಿ ಈಗಲೂ ಬದಲಾಗಿಲ್ಲ. ಭೃಷ್ಟರನ್ನು ಸಮಾಜದಿಂದ ದೂರ ಇಡುತ್ತಿದ್ದ ಒಂದು ಕಾಲ ಇತ್ತು. ಈಗ ಅವರನ್ನೇ ಸನ್ಮಾನ ಮಾಡಿ ಗೌರವಿಸುವ ಸ್ಥಿತಿ ಇದೆ. ಪರಿಣಾಮವಾಗಿ ಸಮಾಜದಲ್ಲಿ ಮಾನವೀಯತೆಯ ಕೊರತೆ, ಭೃಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದು ಸಂತೋಷ್ ಹೆಗ್ಡೆ ತಿಳಿಸಿದರು.