ಡಿ.14: ಹಿರಿಯಡ್ಕ ದೇವಳದ ಗರ್ಭಗೃಹದ ಶಿಲಾನ್ಯಾಸ
ಉಡುಪಿ, ಡಿ.10: ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಗರ್ಭಗೃಹದ ಶಿಲಾನ್ಯಾಸ ಕಾರ್ಯ ಕ್ರಮವು ಡಿ.14ರಂದು ಬೆಳಗ್ಗೆ 11.50ಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಎರಡನೆ ಹಂತದಲ್ಲಿ ಶ್ರೀಬ್ರಹ್ಮ ಲಿಂಗೇಶ್ವರ ದೇವರ ಗರ್ಭದಗೃಹದ ಮರು ನಿರ್ಮಾಣ ಹಾಗೂ ಶ್ರೀವೀರಭದ್ರ ದೇವರ ಗರ್ಭಗೃಹವನ್ನು ನವೀಕರಿಸಿ ದೀಪದಳಿಗೆ ರಜತ ಕವಚವನ್ನು ಹೊದಿಸಲು ಉದ್ದೇಶಿಸಲಾಗಿದೆ ಎಂದು ದೇವಸ್ಥಾನದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಗೋವರ್ದನ್ ದಾಸ್ ಹೆಗ್ಡೆ ತಿಳಿಸಿದರು.
ಅಲ್ಲದೆ ಪಡುಗೋಪುರ, ಯಾಗ ಶಾಲೆ, ನೂತನ ಧ್ವಜಸ್ತಂಭ, ಶಿಲಾಮಯ ಸುತ್ತು ಪೌಳಿ ಮತ್ತು ಅಂಬೆಲ, ಸ್ವಾಗತ ಮಂಟಪ, ಅರ್ಚಕರ ವಸತಿಗೃಹ ನಿರ್ಮಿಸಲಾಗುವುದು. ಇದಕ್ಕೆ ಒಟ್ಟು 12ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜಿತ ಕಾಮಗಾರಿಗಳನ್ನು ಮುಗಿಸಿ 2018ರ ಎ.16ರಿಂದ 26ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ನಡೆಸಲಾಗುವುದು ಎಂದರು.
ಪ್ರಥಮ ಹಂತದಲ್ಲಿ ಒಟ್ಟು 12.5ಕೋಟಿ ರೂ. ವೆಚ್ಚದಲ್ಲಿ ಶ್ರೀಕ್ಷೇತ್ರದ ಆದಿ ಬ್ರಹ್ಮಸ್ಥಾನ, ಆದಿ ನಾಗ ಸ್ಥಾನ, ರಾಜಗೋಪುರ, ನಗಾರಿ ಗೋಪುರ, ವಸಂತ ಮಂಟಪ, ಪರಿವಾರ ಗಣಶಾಲೆ, ವ್ಯಾಘ್ರ ಚಾಮುಂಡಿ ಗುಡಿ, ಕಲ್ಯಾಣ ಮಂಟಪ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಸೋಮನಾಥ್ ಶೆಟ್ಟಿ, ನಟರಾಜ್ ಹೆಗ್ಡೆ, ಸತ್ಯೇಂದ್ರ ಪೈ, ಲಕ್ಷ್ಮೀನಾರಾಯಣ ತಂತ್ರಿ, ಹರೀಶ್ ಶೆಟ್ಟಿ, ಶಂಕರ್ ಶೆಟ್ಟಿ, ವಾಸು ಪ್ರಭು, ರಾಜಾರಾಂ ಹೆಗ್ಡೆ, ಲಕ್ಷ್ಮೀನಾರಾಯಣ, ರಾಘವೇಂದ್ರ ಉಪಸ್ಥಿತರಿದ್ದರು.