ಡಿ.16: ಅವಿಭಜಿತ ಪುತ್ತೂರು ತಾಲೂಕಿನ ಕೊನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಕಡಬ, ಡಿ.13. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಅವಿಭಜಿತ ಪುತ್ತೂರು ತಾಲೂಕಿನ 17 ನೇ ಹಾಗೂ ಕೊನೆಯ ಕನ್ನಡ ಸಾಹಿತ್ಯ ಸಮ್ಮೇಳದ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಡಿ. 16ರ ಬೆಳಗ್ಗಿನಿಂದ ಸಂಜೆಯ ತನಕ ನಡೆಯಲಿದೆ.
ಕಡಬದಲ್ಲಿ ಇದು ತಾಲೂಕು ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವಾಗಿದೆ. ಕಡಬ ಈಗಾಗಲೇ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ಬರುವ ಜನವರಿ ತಿಂಗಳಿನಿಂದ ಪೂರ್ಣ ಪ್ರಮಾಣದ ತಾಲೂಕಾಗಿ ಅನುಷ್ಟಾನವಾಗಲಿರುವುದರಿಂದ ಕಡಬದಲ್ಲಿ ಪುತ್ತೂರು ತಾಲೂಕಿನ ಸಾಹಿತ್ಯ ಸಮ್ಮೇಳನ ಕೊನೆಯದಾಗಲಿದ್ದು, ಬರುವ ವರ್ಷದದಿಂದ ಕಡಬ ತಾಲೂಕಿನಲ್ಲಿ ಸ್ವತಂತ್ರವಾಗಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬಿ.ಟಿ.ಆರಿಗ ಜೈನ್ ಸಭಾಂಗಣದಲ್ಲಿ ಕುಲ್ಕುಂದ ಶಿವರಾಮ ವೇದಿಕೆಯಲ್ಲಿ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲಾ ಸಿದ್ಧತೆಗಳನ್ನು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಎಲ್ಲಾ ಇತರ ಸಮಿತಿಗಳು ನಡೆಸುತ್ತಿವೆ. ಡಿ. 16ರ ಬೆಳಗ್ಗೆ 8 ಕ್ಕೆ ಕನ್ನಡ ಭುವನೇಶ್ವರಿಯ ದಿಬ್ಬಣ ಕಡಬ ಸೈಂಟ್ ಜೋಕಿಮ್ಸ್ ಶಾಲಾ ಆವರಣದಿಂದ ಹೊರಟು ಸಮ್ಮೇಳನ ನಡೆಯುವ ಬಿ.ಟಿ.ಆರಿಗ ಜೈನಿ ಸಭಾಂಗಣದಲ್ಲಿ ಸಮಾಪನಗೊಳ್ಳಲಿದೆ.
ಮೆರವಣಿಗೆಯನ್ನು ಕಡಬ ಗ್ರಾಮ ಪಂ. ಅಧ್ಯಕ್ಷ ಬಾಬು ಮುಗೇರ ಉದ್ಘಾಟಿಸಲಿದ್ದಾರೆ. ತಾಲೂಕು ಪಂ. ಸದಸ್ಯ ಫಝಲ್ ಕೋಡಿಂಬಾಳ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಏರು ಹಗಲು 9.15 ಕ್ಕೆ ಜಿಲ್ಲಾ ಪಂ. ಸದಸ್ಯ ಪಿ.ಪಿ.ವರ್ಗೀಸ್ ಅವರಿಂದ ರಾಷ್ಟ್ರ ಧ್ವಜಾರೋಹಣ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರಿಂದ ಪರಿಷತ್ತು ಧ್ವಜಾರೋಹಣ, ಪುತ್ತೂರು ತಾಲೂಕು ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರಿಂದ ಸಮ್ಮೇಳನ ಧ್ವಜಾರೋಹಣ ನಡೆದು ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಮೊಳಗಲಿದೆ. ಬೆಳಗ್ಗೆ 9.45 ರಿಂದ 11.30 ರ ತನಕ ಸಮ್ಮೇಳನಾಧ್ಯಕ್ಷ ನಾ,ಕಾರಂತ ಪೆರಾಜೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೆಶಕ ಡಾಮಹೇಶ್ ಜೋಷಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಳ್ಯ ಶಾಸಕ ಎಸ್.ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಜಿಲ್ಲಾ ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪುಸ್ತಕ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ವಸ್ತಪ್ರದರ್ಶನ ಉದ್ಘಾಟಿಸಲಿದ್ದಾರೆ. ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಕಲಾಪ್ರದರ್ಶನ ಉದ್ಘಾಟಿಸಲಿದ್ದಾರೆ.
ತಾಲೂಕು ಸಾಹಿತ್ಯ ಸಮ್ಮೇಳನದ ನಿಕಟಪೂರ್ವಾಧ್ಯಕ್ಷ ಪ್ರೊ.ಹರಿನಾರಯಣ ಮಾಡವು, ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖಾ ವಿದ್ಯಾಂಗ ಉಪನರ್ದೆಶಕ ವೈ.ಶಿವರಾಮಯ್ಯ, ಪುತ್ತೂರು ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್ ಕಡಬ ವಿಶೇಷ ತಹಶಿಲ್ದಾರ್ ಜಾನ್ ಪ್ರಕಾಶ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂಜಿಬಾಳ್ತಿಲ ಬೆಥನಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಪತ್ರ ಕರ್ತ ನಾಗರಾಜ್ ಎನ್.ಕೆ. ಕಡಬ ಪರಿಸರದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಎನ್ನುವ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಧರ್ನಪ್ಪ ಮೂಲ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕವಿಗೋಷ್ಠಿ ನಡೆಯಲಿದ್ದು ಹಿರಿಯ ಕವಿ ಟಿ.ಜಿ.ಮುಡೂರು ಗೋಷ್ಠಿಯ ಅಧ್ಯಕ್ಷತೆವಹಿಸಲಿದ್ದಾರೆ, ಕವಿತಾ ಅಡೂರು, ನಾರಾಯಣ ರೈ ಕುಕ್ಕುವಳ್ಳಿ, ಪಿ.ಎಸ್.ನಾರಾಯಣ ಕೊಲ ಸೇರಿದಂತೆ ಹನ್ನೆರಡು ಜನ ಕವಿಗಳು ಕವಿಗೋಷ್ಠಿ ನಡೆಸಿಕೊಡಲಿದ್ದಾರೆ. ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿಶೇಷ ಉಪನ್ಯಾಸ ಮತ್ತು ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಶತಮಾನದ ನೆನಪು: ವಾಣಿಯವರ ಬದುಕು ಮತ್ತು ಬರಹ ವಿಷಯದಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಡಾಶೋಭಿತಾ ಸತೀಶ್ ಉಪನ್ಯಾಸ ನೀಡಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾ.ಕಾರಂತ ಪೆರಾಜೆ ಅವರು ವಿವಿಧ ಸಾಹಿತಿಗಳ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಪ್ರಾಧ್ಯಾಪಕ ಡಾ.ಕೆ.ಎಂ.ಮ್ಯಾಥ್ಯೂ ಹಾಗೂ ಕಡಬದ ಹಿರಿಯ ವೈದ್ಯ ಡಾಸಿ.ಕೆ.ಶಾಸ್ತ್ರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಡಬ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಗೋಪಾಲ್ ರಾವ್ ಕಡಬ ಅವರ ಸಂಸ್ಮರಣೆ ನಡೆಯಲಿದೆ. ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಅವರು ಸನ್ಮಾನ ಕಾರ್ಯ ನಡೆಸಲಿದ್ದಾರೆ. ಕಡಬದ ಹಿರಿಯ ಉದ್ಯಮಿ ಸಿ.ಪಿಲಿಫ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಡಬ ಸೈಂಟ್ ಆನ್ಸ್ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 4:40 ರಿಂದ 6.10 ರ ತನಕ ಸಮಾರೋಪ ಸಮಾರಂಭ ನಡೆಯಲಿದ್ದು ಪ್ರದೀಪ್ ಕುಮಾರ್ ಕಲ್ಕೂರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ಮಾಪಕ ಡಾ ಸದಾನಂದ ಪೆರ್ಲ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರು ಮಾತನಾಡಲಿದ್ದಾರೆ. ಪುತ್ತೂರಿನ ಮುಳಿಯ ಶ್ಯಾಮ್ ಭಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಚಂದ್ರಹಾಸ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ನಡೆಯುವ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಕಡಬ ಪದವಿ ಪೂರ್ವ ಕಾಲೇಜು ಹಾಗೂ ನೃತ್ಯ ನಿನಾದ ಕಡಬ ಅವರಿಂದ ಕರ್ನಾಟಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಐತ್ತಪ್ಪ ನಾಯ್ಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಒ.ಒ.ಡಿ.
ಡಿ.16ರಂದು ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಲಿರುವ 17ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸುವಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮತಿ ನೀಡಿರುತ್ತಾರೆ.
ಮಾತ್ರವಲ್ಲ ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಲ್ಲಾ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಅವಕಾಶ ಒದಗಿಸಿ ಕೊಡಲಾಗಿದೆ. ಅಕ್ಕಪಕ್ಕದ ಇತರ ಗ್ರಾಮಗಳ ಮಕ್ಕಳು ಭಾಗವಹಿಸುವುದಿದ್ದಲ್ಲಿ ಶಿಕ್ಷಕರೊಬ್ಬರು ಸಮ್ಮೇಳನಕ್ಕೆ ಕರೆದುಕೊಂಡು ಹೋಗುಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮಕುಂಜೇಶ್ವರ ಪ್ರೌಢಶಾಲೆಯ ಗಣಿತ ಶಿಕ್ಷಕ ವೆಂಕಟೇಶ ದಾಮ್ಲೆ ರಾಜ್ಯಮಟ್ಟಕ್ಕೆ
ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಪ್ಠಾನ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ - ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ಜರುಗಿದ ದಕ್ಷಿಣಕನ್ನಡ ಜಿಲ್ಲಾಮಟ್ಟದ "ಸ್ಥಳದಲ್ಲೇ ಮಾದರಿ ತಯಾರಿ" ಸ್ಪರ್ಧೆಯಲ್ಲಿ ಹೈಸ್ಕೂಲು ವಿಭಾಗದಿಂದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ (ಕನ್ನಡ ಮಾಧ್ಯಮ) ಗಣಿತ ಶಿಕ್ಷಕರಾದ ಶ್ರೀ ವೆಂಕಟೇಶ ದಾಮ್ಲೆ ಇವರು ಪ್ರಥಮ ಸ್ಥಾನವನ್ನು ಪಡೆದು ಹಾಸನದಲ್ಲಿ ಜರುಗಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.