ವಿಟ್ಲದಲ್ಲಿ ಮತ್ತೆ ಮನೆ ಕಳ್ಳತನ: ಗ್ರಾಮಸ್ಥರಲ್ಲಿ ಮೂಡಿದ ಆತಂಕ
ಬಂಟ್ವಾಳ, ಡಿ. 18: ವಿಟ್ಲ ಪರಿಸರದ ಜನರೇ ಹುಷಾರು !. ನಿಮ್ಮ ಜಾಗ್ರತೆಯಲ್ಲಿ ನೀವಿರಿ. ಕಳ್ಳರು ಬರಬಹುದು ಎಂದು ಒಬ್ಬರಿಗೊಬ್ಬರು ಜಾಗ್ರತೆ ಎಂದು ಹೇಳುವ ಪರಿಸ್ಥಿತಿ ಇಂದು ಬಂದೊದಗಿದೆ. ಕಳ್ಳರು ವಿಟ್ಲದ ಆಸುಪಾಸು ಪರಿಸರಗಳಲ್ಲಿ ಕಳ್ಳತನ ಮಾಡಲು ಕಾದು ಕುಳಿತ್ತಿದ್ದಾರೆ.
ಬ್ಯಾಂಕ್, ಸಹಕಾರಿ ಸಂಘ, ಜವಳಿ ಅಂಗಡಿ, ಸೆಲೂನ್, ಮನೆ.. ಇವು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ಮೂರು ತಿಂಗಳಿಂದ ಕಳ್ಳರು ತಮ್ಮ ಕೃತ್ಯಕ್ಕಾಗಿ ನಿರ್ಭಯವಾಗಿ ವಿಸಿಟ್ ಮಾಡುವ ಜಾಗಗಳು.
ಕಳ್ಳರು ಅದು ಹೇಗೆ? ಡಾಂಬರು ರಸ್ತೆಯಲ್ಲೇ ಬಂದು ಕಳವು ಕೃತ್ಯ ಹಾಗೂ ವಿಫಲ ಯತ್ನವನ್ನು ನಡೆಸಿ ಮರಳುತ್ತಾರೆ. ಊರಿಡೀ ಕಳ್ಳತನದ ಬಗ್ಗೆ ಚರ್ಚೆಗಳು ನಡೆದರೂ ಯಾವುದೇ ಹೆದರಿಕೆಯಿಲ್ಲದೆ ವಿಟ್ಲ ಪರಿಸರದಲ್ಲಿ ನಿರ್ಭೀತಿಯಿಂದ ಕೃತ್ಯವೆಸಗುವ ಕಳ್ಳರ ಬಗ್ಗೆ ವಿಟ್ಲ ಪೊಲೀಸರಿಗೂ, ಜನರಿಗೂ ತಲೆನೋವು ಉಂಟಾಗಿದೆ.
ಇತ್ತೀಚೆನ ಮೂರು ನಾಲ್ಕು ಘಟನೆ ಹಸಿರಾಗಿರುವಂತೆಯೇ ಮತ್ತೊಂದು ಕಳವು ಕೃತ್ಯ ರವಿವಾರ ರಾತ್ರಿ ನಡೆದಿದೆ.
ಮನೆಯೊಂದರ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ವಿಟ್ಲದ ಕೇಪು ಗ್ರಾಮದ ಕುಕ್ಕೆಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಕೆ.ಪಿ ಸುಲೈಮಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಮನೆಯ ನಾಲ್ಕು ಕೋಣೆಯ ಕಪಾಟ್‌ಗಳಲ್ಲಿ ಕಳವಿಗಾಗಿ ಜಾಲಾಡಿದ್ದಾರೆ. ವಿದೇಶಿಯ ವಸ್ತುಗಳಾದ 10ಹಾಲಿನ ಹುಡಿ ಪ್ಯಾಕೇಟ್, 3 ಬ್ಲಾಂಕೇಟ್, 6 ವಿದೇಶಿ ಲೈಟ್, ಬಟ್ಟೆ ಬರೆ ಸೇರಿದಂತೆ ಬೆಲೆಬಾಳುವ ಸ್ವತ್ತುಗಳನ್ನು ಎಗರಿಸಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸುಮಾರು ಲಕ್ಷಕ್ಕಿಂತ ಅಧಿಕ ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸೆಗಿದ್ದಾರೆಂದು ತಿಳಿದು ಬಂದಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುರಿದಿದೆ.
ಇತ್ತೀಚಿಗಿನ ಪ್ರಕರಣಗಳು
ವಿಟ್ಲ ಕಲ್ಲಡ್ಕ ರಸ್ತೆಯ ಮಂಗಲಪದವು ಎಂಬಲ್ಲಿ ನ.28ರಂದು ಗಾಯತ್ರಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ ನುಗ್ಗಿದ ಕಳ್ಳರು ದರೋಡೆಗೆ ವಿಫಲ ಯತ್ನ ನಡೆಸಿದ್ದರು.
ಡಿ.7ರಂದು ಉಕ್ಕುಡದ ಅಬ್ಬಾಸ್ ಹಾಜಿ ಎಂಬವರ ಮನೆಯ ಹಿಂಭಾಗದ ಗೋಡೆಯನ್ನು ಕೊರೆದು ಒಳನುಗ್ಗಿ ಸುಮಾರು 10.5 ಲಕ್ಷ ರೂ. ಮೌಲ್ಯದ ಬಂಗಾರ ಕಳ್ಳತನ ನಡೆದ್ದರು.
ಸಾಲೆತ್ತೂರಿನಲ್ಲೂ ಖಾಸಗೀ ಬಸ್‌ನಿಂದ ಬ್ಯಾಟರಿ ಕಳವು ನಡೆದಿದ್ದವು. ಸಾಲೆತ್ತೂರಿನ ಜಲೀಲ್ ಎಂಬವರ ಜವುಳಿ ಮಳಿಗೆ, ಸೆಲೂನ್ ಅಂಗಡಿ, ಪೆರ್ಲದಬೈಲಿನ ರಾಮಕೃಷ್ಣ ಶೆಟ್ಟಿ ಎಂಬವರ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸಾಲೆತ್ತೂರು ಶಾಖೆಯಲ್ಲಿ ಕಳವು ಯತ್ನಗಳು ನಡೆದಿದೆ.
ಡಿ. 13ರಂದು ಇಡ್ಕಿದು ಗ್ರಾಮದ ಉರಿಮಜಲು ವಿಜಯ ಬ್ಯಾಂಕ್ ಶಾಖೆಯ ಬಾಗಿಲು ಮರಿದು ಒಳಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಗ್ರಾಮಸ್ಥರಲ್ಲಿ ಆತಂಕ
ಈ ಎಲ್ಲ ಕಳವು ಪ್ರಕರಣಗಳು ವಿಟ್ಲ ಹೊರವಲಯದಲ್ಲಿರುವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೂ ಕಳ್ಳರು ನಿರ್ಭಯವಾಗಿ ನುಗ್ಗುತ್ತಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಕಳವು ಪ್ರಕರಣಗಳು
ಮಾಧ್ಯಮಗಳು ಎಚ್ಚರಿಸುತ್ತಲೇ ಬಂದಿದ್ದರೂ, ಇಲ್ಲಿನ ಪರಿಸರದಲ್ಲಿ ದಿನೇ ದಿನೇ ಕಳ್ಳರಕಾಟ ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ವಾತಾವರಣ ಉಂಟಾಗಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ, ಸೂಕ್ತ ಭದ್ರತೆಯನ್ನು ಒದಗಿಸುವ ಮೂಲಕ ನೆಮ್ಮದಿಯ ಪರಿಸರಕ್ಕೆ ಮುಂದಾಗಬೇಕಿದೆ.
ಮುಹಮ್ಮದ್ ಶಮೀರ್, ವಿಟ್ಲ ನಿವಾಸಿ