ರಂಗಭೂಮಿ ಶಿಸ್ತು ಕಲಿಸಿದರೆ, ಸಿನೆಮಾ ಅಹಂ ಬೆಳೆಸುತ್ತದೆ: ಬಿ.ಜಯಶ್ರೀ

Update: 2017-12-22 16:19 GMT

 ಉಡುಪಿ, ಡಿ.16: ರಂಗಭೂಮಿ ನಮ್ಮನ್ನು ನಾವಾಗಿ ಬೆಳೆಯಲು ಸಹಾಯ ಮಾಡುತ್ತದೆ ಮತ್ತು ಶಿಸ್ತು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಆದರೆ ಬೆಳ್ಳಿ ಪರದೆ ನಮ್ಮನ್ನು ದೊಡ್ಡದಾಗಿ ಬೆಳೆಸಿದರೂ ಅಹಂನ್ನು ತಂದುಕೊಡುತ್ತದೆ. ರಂಗಭೂಮಿ, ನೃತ್ಯ, ಸಂಗೀತ ಕಲೆಗಳು ಮಾತ್ರ ನಮ್ಮನ್ನು ನಾವು ಆಗಿ ಬೆಳೆಸುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ರಂಗ ಕಲಾವಿದೆ ಬಿ.ಜಯಶ್ರೀ ಹೇಳಿದ್ದಾರೆ.

ಉಡುಪಿ ಪರ್ಯಾಯ ಪೇಜಾವರ ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾದ ಕೊಡವೂರು ನೃತ್ಯ ನಿಕೇತನ ಸಂಸ್ಥೆಯ ರಜತ ವರ್ಷದ ರಜತಪಥ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಯಾವುದೇ ಪಾತ್ರವನ್ನು ತನ್ನದಾಗಿಸಿಕೊಂಡು ಪೇಕ್ಷಕರ ಮುಂದೆ ತಾನು ಯಾರು ಎಂಬುದು ಗೊತ್ತಾಗದಂತೆ ಆ ಪಾತ್ರ ಯಾವುದು ಎಂಬುದು ಹೇಳುವ ಶಕ್ತಿ ಇರುವುದು ನಾಟಕಕ್ಕೆ ಮಾತ್ರ. ಸಿನೆಮಾದಲ್ಲಿ ಪಾತ್ರದ ಹೆಸರು ಹೇಳಲ್ಲ. ಆದರೆ ಪಾತ್ರ ಮಾಡಿದವರ ಹೆಸರು ಹೇಳುತ್ತಾರೆ. ಆದರೆ ನಾಟಕದಲ್ಲಿ ಪಾತ್ರ ಮಾಡಿದವರ ಅಲ್ಲ ಪಾತ್ರದ ಹೆಸರು ಹೇಳುತ್ತೇವೆ. ಅಲ್ಲಿ ವ್ಯಕ್ತಿ ಪಾತ್ರದೊಳಗೆ ಜೀವಂತವಾಗಿರುತ್ತಾನೆ ಎಂಬುದಕ್ಕೆ ಇದು ದೊಡ್ಡ ಸಾಕ್ಷಿ ಎಂದರು.

ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಮಾತನಾಡಿ, ವರ್ಣ, ಜಾತಿ, ಮತ ಗಳ ಧ್ವೇಷದಿಂದಾಗಿ ವಿಶ್ವದ ಪರಿಕಲ್ಪನೆ ಇಂದು ನಾಶವಾಗಿ ನಾವು ಸಂಕುಚಿತ ರಾಗುತ್ತಿದ್ದೇವೆ. ಇಡೀ ವಿಶ್ವವನ್ನು ಒಂದಾಗಿಸುವ ಶಕ್ತಿ ಇರುವುದು ಕಲೆಗೆ ಮಾತ್ರ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಕರ್ನಾಟಕ ಕರಾ ವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷ ಕಮಲಾಕ್ಷ ಆಚಾರ್ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧೀರ್ ರಾವ್ ಕೊಡವೂರು ಸ್ವಾಗತಿಸಿ ದರು. ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ಕಲಾ ವಿದರಿಂದ ‘ಚಿತ್ರಾ’ ನೃತ್ಯ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News