ಉಡುಪಿ ಕೃಷ್ಣನ ಗರ್ಭಗುಡಿಗೆ ಚಿನ್ನದ ಗೋಪುರ: ವಿದ್ಯಾಧೀಶ ತೀರ್ಥ ಸ್ವಾಮೀಜಿ

Update: 2017-12-28 15:48 GMT

ಮಂಗಳೂರು, ಡಿ.28: ಉಡುಪಿ ಶ್ರೀ ಕೃಷ್ಣನ ಪೂಜಾ ಪರ್ಯಾಯದ ಕಾಲದಲ್ಲಿ ಶ್ರೀ ಕೃಷ್ಣನ ಗರ್ಭಗುಡಿಗೆ ಸುಮಾರು 32 ಕೋ.ರೂ. ವೆಚ್ಚದಲ್ಲಿ ಚಿನ್ನದ ಗೋಪುರವನ್ನು ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಾವೀ ಪರ್ಯಾಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಮಂಗಳೂರು ಕದ್ರಿ ಮಲ್ಲಿಕಾ ಬಡಾವಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರ ನಿವಾಸದಲ್ಲಿ ತುಲಾಭಾರ ಸೇವೆಯನ್ನು ಸ್ವೀಕರಿಸಿದ ಬಳಿಕ ನಡೆದ ಪತ್ರಿಕಾೋಷ್ಠಿಯಲ್ಲಿ ಅವರು ಮಾತನಾಡಿದರು.

ಕರಾವಳಿ ಶೈಲಿಯಲ್ಲಿರುವ ಶ್ರೀ ಕೃಷ್ಣನ ಗರ್ಭಗುಡಿಗೆ ತಿರುಪತಿ ವೆಂಕಟೇಶನ ಗರ್ಭಗೋಪುರದ ಪ್ರತಿಬಿಂಬವನ್ನು ಮೂಡಿಸುವ ಇಚ್ಚೆಯಿದೆ. ಇದಕ್ಕಾಗಿ ಪ್ರತೀ ಚದರ ಅಡಿಗೆ 40 ಗ್ರಾಂ. ಚಿನ್ನದ ಅಗತ್ಯವಿದ್ದು, 2500 ಚ.ಅಡಿಗೆ ಸುಮಾರು 100 ಕೆಜಿ ಚಿನ್ನದ ಅಗತ್ಯವಿದೆ ಎಂದವರು ಹೇಳಿದರು.

ಹಸಿರಿನ ಬಗ್ಗೆ ಹಾಗೂ ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಶ್ರೀಕೃಷ್ಣನಿಗೆ ಪರ್ಯಾಯ ಕಾಲದಲ್ಲಿ ಪ್ರತಿನಿತ್ಯ ಲಕ್ಷ ತುಳಸಿ ಅರ್ಚನೆ ಮಾಡುವ ಯೋಜನೆ ಹೊಂದಿದ್ದು, ಇದಕ್ಕಾಗಿ ತುಳಸಿಯನ್ನು ಬೆಳೆಸಲು ಭಕ್ತರಿಗೆ ಮನವಿ ಸಲ್ಲಿಸಲಾಗಿದೆ. ಪೆರಂಪಳ್ಳಿಯಲ್ಲಿ 10 ಎಕ್ರೆ ಜಾಗದಲ್ಲಿ ತುಳಸಿ ಧಾಮ ನಿರ್ಮಿಸಲು ನಮಗೆ ಅವಕಾಶ ದೊರಕಿದೆ. ಈ ಮೂಲಕ ಪ್ರತೀ ದಿನ ಲಕ್ಷ ತುಳಸೀ ಅರ್ಚನೆಯನ್ನು ಮಾಡಲು ಉಡುಪಿ ಮಠದಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಏಕಾಗ್ರತೆಯ ಸಾಧನೆಗಾಗಿ ಸಾವಿರ ಕೋಟಿ ಶ್ರೀರಾಮ ನಾಮ ಲೇಖನ ಯಜ್ಞವನ್ನು ಆಯೋಜಿಸಲಾಗಿದೆ. ಇದರಲ್ಲಿ ಸಮಸ್ತ ಆಸ್ತಿಕ ಜನರೂ ಭಾಗವಹಿಸಬಹುದು. 1 ಪುಸ್ತಕದಲ್ಲಿ 10,000ದಷ್ಟು ಶ್ರೀ ರಾಮ ನಾಮ ಬರೆಯಲು ಅವಕಾಶವಿದೆ. ಸಾವಿರ ಕೋಟಿಯಾದ ಮೇಲೆ ಈ ಪುಸ್ತಕವನ್ನು ಹರಿದ್ವಾರದ ಗಂಗಾತೀರದ ಬಡೇಹನುಮಾನ್ ದೇವಸ್ಥಾನದಲ್ಲಿ ಪೂಜೆಗೆ ಇಡಲಾಗುವುದು ಎಂದು ಪಲಿಮಾರು ಶ್ರೀಗಳು ಹೇಳಿದರು.

ಎಸ್.ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತರ್ಜುಮೆಗೊಂಡ ಮಹಾಭಾರತ ಕೃತಿ ಪರ್ಯಾಯ ಅವಧಿಯಲ್ಲಿ ಲೋಕಾರ್ಪಣೆ

ತುಳುಲಿಪಿಯಲ್ಲಿ ಲಭ್ಯವಿರುವ ಮಹಾಭಾರತದ ಕೃತಿಯನ್ನು ಪ್ರಥಮ ಬಾರಿಗೆ ಶ್ಲೋಕಾರ್ಥವನ್ನು ಪ್ರತ್ಯೇಕವಾಗಿ ದೇವನಾಗರಿಲಿಪಿಗೆ ಪರಿವರ್ತಿಸಿ ಕನ್ನಡ ಭಾಷೆಗೆ ತರ್ಜುಮೆ ಮಾಡಿಸುವ ಯೋಜನೆಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಮಹಾಭಾರತದ 18 ಪರ್ವಗಳು 40 ಸಂಪುಟಗಳಲ್ಲಿ ಮುಂದಿನ ಪರ್ಯಾಯ ಅವಧಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಜತೆಗೆ ಮಠದ ಶಾಖೆಗಳಲ್ಲಿ ಅವಕಾಶಗಳಿರುವಲ್ಲಿ ಗೋಶಾಲೆಗಳನ್ನು ನಿರ್ಮಿಸಿ ದೇಶೀಯ ಗೋಸಂತತಿ ರಕ್ಷಣೆ ಹಾಗೂ ಪ್ರಗತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News