ಉಡುಪಿ ಬಹುಭಾಷೀಯ ಜಿಲ್ಲೆ: ಪ್ರಮೋದ್ ಮಧ್ವರಾಜ್

Update: 2017-12-29 17:25 GMT

ಪೆರ್ಡೂರು, ಡಿ.29: ಉಡುಪಿ ಜಿಲ್ಲೆಯಲ್ಲಿ ಬಹುಭಾಷೀಯ ಜನರು ಹೆಚ್ಚು ಸಂಖ್ಯೆಯಲ್ಲಿ ಇರುವ ಕಾರಣ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬ ಬಗ್ಗೆ ನೋವಿದೆ. ಆದುದರಿಂದ ನಾವೆಲ್ಲರೂ ಸೇರಿ ಕನ್ನಡವನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಪೆರ್ಡೂರು ಮಾಂಗಲ್ಯ ಸಭಾಭವನದಲ್ಲಿ ಶುಕ್ರವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಪೆರ್ಡೂರು ವಲಯ ವತಿಯಿಂದ ನಡೆದ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ದೀಪ ಬೆಳಗಿಸಿ ಮಾತನಾಡುತಿದ್ದರು.

ಪೆರ್ಡೂರು ಮಾಂಗಲ್ಯ ಸಾವನದಲ್ಲಿ ಶುಕ್ರವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಪೆರ್ಡೂರು ವಲಯ ವತಿಯಿಂದ ನಡೆದ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ದೀಪ ಬೆಳಗಿಸಿ ಮಾತನಾಡುತಿದ್ದರು. ಉಡುಪಿ ಜಿಲ್ಲೆ ಒಂದು ವಿಶೇಷ ಜಿಲ್ಲೆ. ಹಲವು ಮಂದಿಗೆ ನಾಯಕತ್ವ ನೀಡಿದ ಜಿಲ್ಲೆ. ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯು ವಿಶ್ವಕ್ಕೆ ಪ್ರಬಲ ಪೈಪೋಟಿ ನೀಡುತ್ತಿದೆ. ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡುವಾಗ ದೇಶದ 299 ಜಿಲ್ಲೆಗಳು ಒಟ್ಟು 10 ಬ್ಯಾಂಕ್ ನೀಡಿದರೆ, ಉಡುಪಿ ಜಿಲ್ಲೆಯೊಂದೇ 4 ಬ್ಯಾಂಕ್ ನೀಡಿದ ಖ್ಯಾತಿ ಈ ಜಿಲ್ಲೆಗಿದೆ ಎಂದ ಪ್ರಮೋದ್, ರಾಜ್ಯದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಹೊಂದಿದ ಗ್ರಾಪಂಗಳಿರುವುದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಂದರು.

ಅಂದು ಇಂಗ್ಲೀಷರ ಗುಲಾಮರು..ಇಂದು ಇಂಗ್ಲಿಷಿನ ಗುಲಾಮರು !

ಹಿಂದೆ ನಾವು ಇಂಗ್ಲೀಷರ ಗುಲಾಮರಾಗಿದ್ದೆವು. ಈಗ ಇಂಗ್ಲಿಷಿನ ಗುಲಾಮ ರಾಗಿದ್ದೇವೆ. ಕೇವಲ ರ ಮತ್ತು ನ ಅಕ್ಷರದ ವ್ಯತ್ಯಾಸ. ಹೀಗಾಗಿ ಈಗಲೂ ನಮ್ಮಲ್ಲಿ ಕನ್ನಡಕ್ಕೆ ಹೆಚ್ಚು ಬೆಂಬಲ ಸಿಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ದುಸ್ಥಿತಿಯಲ್ಲಿ ಕನ್ನಡ ಮಾಧ್ಯಮ ಶಾಲೆ: ಸಮ್ಮೇಳನಾಧ್ಯಕ್ಷರಾದ ಸಾಹಿತಿ, ಲೇಖಕ ಪ್ರೊ.ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮಾತನಾಡಿ, ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷಾ ಮಾಧ್ಯಮವು ಕಲಿಕೆಯ ದೃಷ್ಟಿಯಿಂದ ಉತ್ತಮ ಎಂಬ ಮನೋವಿಜ್ಞಾನಿಗಳ, ಶಿಕ್ಷಣ ತಜ್ಞರ, ಚಿಂತಕರ ಮಾತುಗಳನ್ನು ಅರಿತೂ, ಭವಿಷ್ಯದ ಭದ್ರತೆಯೆಂದು ಮಕ್ಕಳ ಸಾಮರ್ಥ್ಯವನ್ನೂ ಮನಗಾಣದೆ ಆಂಗ್ಲಮಾಧ್ಯಮ ಶಾಲೆಗೆ ನಾವು ನಮ್ಮ ಮಕ್ಕಳನ್ನು ಕಳುಹಿಸುತಿದ್ದೇವೆ ಎಂದರು.

ಪ್ರತಿವರ್ಷವೂ ಸುಮಾರು ಒಂದು ಲಕ್ಷದಷ್ಟು ವಿವಿಧ ಶಾಖೆಗಳ ಇಂಜಿನಿಯರುಗಳು ಪದವಿ ಪಡೆದು ಕಾಲೇಜಿನಿಂದ ಹೊರಬರುತ್ತಿದ್ದಾರೆ. ಅವರಿಗೆಲ್ಲಾ ಎಲ್ಲಿವೆ ಉದ್ಯೋಗಾವಕಾಶಗಳು? ಕ್ಯಾಂಪಸ್ ಆಯ್ಕೆ ಎಂಬುದು ತೀರಾ ಪ್ರತಿಭಾವಂತರಿಗೆ, ಕ್ರಿಯಾಶೀಲರಿಗೆ ಮಾತ್ರ. ಆದರೂ ನಾವು ಆಶಾವಾದಿಗಳು. ಮಕ್ಕಳ ಸುಖ-ಆಸಕ್ತಿ-ಅರ್ಹತೆಗಳನ್ನು ಬಲಿಕೊಟ್ಟಾದರೂ ಸರಿಯೆ ಕನ್ನಡ ಶಾಲೆಯಿಂದ ವಿಮುಖಗೊಳಿಸಿ ಆಂಗ್ಲಮಾಧ್ಯಮದ ಶಾಲೆಯ ಮೆಟ್ಟಿಲನ್ನೇರಿಸುತ್ತೇವೆ ಎಂದು ಪ್ರೊ. ಸೋಮಯಾಜಿ ನುಡಿದರು.

ಬೆರಳೆಣಿಕೆಯ ಶಾಲೆಗಳನ್ನು ಬಿಟ್ಟು ಮತ್ತೆಲ್ಲ ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿತಿ ತೀರಾ ನಿರಾಶಾದಾಯಕ. ಸರಕಾರಿ ಶಾಲೆಯೇಇರಲಿ, ಅನುದಾನಿತವೇ ಇರಲಿ. ಕನ್ನಡ ಶಾಲೆಗಳಲ್ಲಿ ಮಕ್ಕಳಿಲ್ಲ. ಇದ್ದ ಮಕ್ಕಳ ಅನುಪಾತಕ್ಕನುಗುಣವಾಗಿ ಶಿಕ್ಷಕರು. ಇದರಿಂದಾಗಿ ತರಗತಿಗೊಬ್ಬ ಶಿಕ್ಷಕನೂ ಇಲ್ಲ, ಸರಿಯಾದ ಕಟ್ಟಡ ಇಲ್ಲ, ಆವಶ್ಯಕ ಅನುಕೂಲತೆಗಳಿಲ್ಲ. ಇರುವ ಶಿಕ್ಷಕರಿಗೂ ಇಲಾಖೆಯ ಬೇರೆ ಬೇರೆ ಕೆಲಸ. ಹೀಗಾಗಿ ಅಂತಹ ಶಾಲೆಗೆ ನಮ್ಮ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ ಎಂಬ ಗೊಂದಲವಿದೆ ಎಂದರು.

ಸಮ್ಮೇಳನಾಧ್ಯಕ್ಷರು, ಗಣ್ಯರು ಸಹಿತ ಕನ್ನಡ ಭುವನೇಶ್ವರಿಯ ಮೆರವಣಿಗೆ ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ತನಕ ನಡೆಯಿತು. ಸಾಹಿತಿ ಜನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಸಮ್ಮೇಳನ ಉದ್ಘಾಟಿಸಿದರು. ಅದಾನಿ ಗ್ರೂಪ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಸಲ್ಲಿಸಿದರು. ಸಮ್ಮೇಳನದ ಪೂರ್ವಾಧ್ಯಕ್ಷೆ ಡಾ.ಮಾಧವಿ ಭಂಡಾರಿ ಅವರು ಮಾತನಾಡಿದರು.

ಪುಳಿಮಾರು ಮನೆ ಎಂ.ಕೃಷ್ಣ ಶೆಟ್ಟಿ ಸ್ಮಾರಕ ದತ್ತಿನಿಧಿಯ ಒಂದು ಲಕ್ಷ ರೂ. ವನ್ನು ಎಚ್.ಭೋಜ ಶೆಟ್ಟಿ, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರಿಗೆ ಹಸ್ತಾಂತರಿಸಿದರು. ಸಮ್ಮೇಳನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ ಅದಾನಿ ಗ್ರೂಪ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವರನ್ನು ಸ್ಮಾನಿಸಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಐತಾಳ್, ಕಾರ್ಯಧ್ಯಕ್ಷ ಕೆ.ಶಾಂತರಾಮ ಸೂಡ, ಕಾರ್ಯದರ್ಶಿ ಎಚ್.ಚಂದ್ರ ನಾಯ್ಕಾ, ಪ್ರಮೋದ್ ರೈ ಪಳಜೆ, ಶ್ರೀಪಾದ ರೈ ಪಳಜೆ, ಶಿವರಾಮ ಶೆಟ್ಟಿ, ಸಾಂಗ್ಲಿ ದಿವಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 ಪೆರ್ಡೂರು ಗ್ರಾಪಂ ಅಧ್ಯಕ್ಷೆ ಶಾಂಭವಿ ಕುಲಾಲ್ ರಾಷ್ಟ್ರಧ್ವಜಾರೋಹಣ ಮಾಡಿದರೆ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಪರಿಷತ್ ಧ್ವಜಾರೋಹಣ ಮಾಡಿದರು.ವಿವಿಧ ಮರಂಜನಾ ಕಾರ್ಯಕ್ರಮ ನಡೆಯಿತು.

 ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಂತಾರಾಮ ಸೂಡ ಸ್ವಾಗತಿಸಿದರೆ, ಶ್ರೀಧರ ಕೆ. ಶೆಟ್ಟಿ ಕುತ್ಯಾರ್‌ಬೀಡು ಮತ್ತು ಶಿವರಾಮ ಶೆಟ್ಟಿ ಬುಕ್ಕಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಪೆರ್ಡೂರು ಘಟಕದ ಅಧ್ಯಕ್ಷ ಎಚ್. ಚಂದ್ರ ನಾಯ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News