ಪಲಿಮಾರು ಶ್ರೀಗಳಿಂದ ಅದ್ದೂರಿ ಪುರಪ್ರವೇಶ: ಪರ್ಯಾಯ ಮಹೋತ್ಸವಕ್ಕೆ ಚಾಲನೆ

Update: 2018-01-03 16:42 GMT

ಉಡುಪಿ, ಜ.3: ಇದೇ ತಿಂಗಳ 18ರ ಮುಂಜಾನೆ ಎರಡನೇ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಅವರ ಪುರಪ್ರವೇಶ ಕಾರ್ಯಕ್ರಮವು ಬುಧವಾರ ಸಂಜೆ ಅದ್ದೂರಿಯಾಗಿ ಜರಗಿತು.

ಪರ್ಯಾಯ ಪೀಠಾರೋಹಣಕ್ಕೆ ಮುನ್ನ ದೇಶದ ವಿವಿಧ ತೀರ್ಥಕ್ಷೇತ್ರಗಳ ಸಂಚಾರ ಮುಗಿಸಿ ಉಡುಪಿಗೆ ಅಧಿಕೃತವಾಗಿ ಪುರಪ್ರವೇಶ ಮಾಡಿದ ಪಲಿಮಾರು ಶ್ರೀಪಾದರನ್ನು ಸಂಜೆ 4ಗಂಟೆಗೆ ಪ್ರಾರಂಭಗೊಂಡ ಅದ್ದೂರಿಯ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಅಲಂಕೃತವಾದ ವಿಶೇಷ ವಾಹನದಲ್ಲಿ ರಥಬೀದಿಗೆ ಕರೆತರಲಾಯಿತು.

ಜೋಡುಕಟ್ಟೆಯಲ್ಲಿ ಸ್ವಾಮೀಜಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ನಗರಸಭಾ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಇತರ ಗಣ್ಯರು ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.ಶ್ರೀಗಳು ಜೋಡುಕಟ್ಟೆಯಲ್ಲಿ ದೇವರಿಗೆ ಪೂಜೆಯನ್ನು ನೆರವೇರಿಸಿದ ಬಳಿಕ, ಪಲಿಮಾರು ಮಠದ ಪಟ್ಟದ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಿ, ಶ್ರೀಗಳನ್ನು ಹಿಂದೆ ಹೂವಿನಿಂದ ಅಲಂಕೃತ ವಾಹನದಲ್ಲಿ ಶ್ರೀಕೃಷ್ಣ ಮಠದತ್ತ ಕರೆದೊಯ್ಯಲಾಯಿತು.

ಅದಮಾರಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಅಪರಾಹ್ನ 4 ಗಂಟೆಯ ಸುಮಾರಿಗೆ ಜೋಡುಕಟ್ಟೆಗೆ ಆಗಮಿಸಿದ ಸ್ವಾಮೀಜಿಯವರೊಂದಿಗೆ ಬೈಕ್ ಹಾಗೂ ವಿವಿಧ ವಾಹನಗಳ ರ್ಯಾಲಿ ಬಂದಿತ್ತು. ಮಾರ್ಗದಲ್ಲಿ ಅಭಿಮಾನಿಗಳು, ನಾಗರಿಕರಿಂದ ಅವರಿಗೆ ಅಭಿನಂದನೆ ನಡೆಯಿತು. ಎರ್ಮಾಳು, ಉಚ್ಚಿಲ, ಪಾಂಗಾಳ, ಕಾಪು, ಕಟಪಾಡಿ, ಉದ್ಯಾವರ ಮೊದಲಾದ ಸ್ಥಳಗಳಲ್ಲಿ ಶ್ರೀಪಾದರನ್ನು ಸ್ವಾಗತಿಸಿ ಮಾಲಾರ್ಪಣೆ ಮಾಡಲಾಯಿತು.

70ಕ್ಕೂ ಅಧಿಕ ಜಾನಪದ ಕಲಾತಂಡಗಳು: ಜೋಡುಕಟ್ಟೆಯಿಂದ ಮೆರವಣಿಗೆ ಪ್ರಾರಂಭವಾಗಿ ಡಯಾನ ಸರ್ಕಲ್, ಕೆ.ಎಂ. ಮಾರ್ಗ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ದೇಶ-ವಿದೇಶಗಳ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಸುಮಾರು 3,000ಕ್ಕೂ ಅಧಿಕ ಕಲಾವಿದರ ಕಲಾ ಪ್ರೌಢಿಮೆ ವೆುರವಣಿಗೆಯಲ್ಲಿ ಪ್ರಸ್ತುತಗೊಂಡಿತು.

70ಕ್ಕೂ ಅಧಿಕ ಕಲಾ ತಂಡಗಳಲ್ಲಿ ತುಳುನಾಡಿನ ಅನೇಕ ಕಲಾವಿದರು ಸೇರಿದಂತೆ ದೇಶದ ಮೂಲೆಮೂಲೆಯ ಕಲಾತಂಡಗಳ ಕಲಾವಿದರು ಹಾಗೂ ಮಣಿಪುರ, ಶ್ರೀಲಂಕಾದ ಕಲಾವಿದರೂ ಭಾಗವಹಿಸಿದ್ದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವ ಅವರ ಉಸ್ತುವಾರಿಯಲ್ಲಿ ಇಡೀ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಇಂದು ಅವರೇ ಖುದ್ಧು ಹಾಜರಿದ್ದು, ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಕಲಾಪ್ರಕಾರ: ಕಿಂಗ್‌ಕಾಂಗ್, ಪೂತನಿ, ಶ್ರೀಲಂಕಾದ ಮುಖವಾಡ, ನಂದಿಧ್ವಜ, ಮಠದ ಬಿರುದಾವಳಿ, ಚೆಂಡೆ ಕೊಂಬು ಶಂಖವಾದನ, ಭಜನೆ, ನಾದಸ್ವರ ತಂಡ, ಶೃಂಗಾರಿ ಮೇಳ, ತಟ್ಟಿರಾಯ, ದುಡಿ ಕುಣಿತ, ಗೊರವರ, ಸೋಮ, ವೀರಭದ್ರನ ಕುಣಿತ, ಶಿಲ್ಪಗೊಂಬೆ ಬಳಗ, ಚಿಲಿಪಿಲಿ ಗೊಂಬೆ, ಹುಲಿ ವೇಷ ಕುಣಿತ, ಮಹಿಳಾ ಚೆಂಡೆ, ಮರಗಾಲು ನೃತ್ಯ, ಅರ್ಧನಾರೀಶ್ವರ, ಬೆಂಡರ ಕುಣಿತ, ಪಂಚ ವಾದ್ಯ, ತೆಯ್ಯಮ್, ನಗಾರಿ, ಜಗ್ಗಳಿಕೆ ಮೇಳ, ಕೋಳಿಗಳು, ಗೂಳಿ, ಸ್ಕೇಟಿಂಗ್, ಕಥಕ್ಕಳಿ, ಸೃಷ್ಟಿ ಗೊಂಬೆ ಬಳಗ, ಹೊನ್ನಾವರ ಬ್ಯಾಂಡ್, ತುಳುನಾಡ ವಾದ್ಯ, ಪೂರ್ಣಕುಂಭ, ವೇದಘೋಷಗಳು ಮೊದಲಾದ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಮೇಳೈಸಿದವು.

ಕಿನ್ನಿಮೂಲ್ಕಿಯಿಂದ ಶ್ರೀಕೃಷ್ಣ ಮಠದವರೆಗೆ ಮೆರವಣಿಗೆ ಸಾಗಿದ ವೇಳೆ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿತ್ತು. ರಸ್ತೆಯ ಎರಡೂ ಅಂಚಲ್ಲಿ ಶಾಲಾ ಮಕ್ಕಳು, ಮಹಿಳೆಯರ ಸಹಿತ ಸರ್ವ ಜನರು ಸೇರಿದ್ದರು.

ಮಜ್ಜಿಗೆ ವಿತರಣೆ: ಕೋರ್ಟ್ ಆವರಣದ ಮುಂಭಾಗದಲ್ಲಿ ಮುಸ್ಲಿಂ ಬಾಂಧವರು ಹಾಗೂ ಅಲಂಕಾರ್ ಚಿತ್ರಮಂದಿರದ ಸಮೀಪ ಲಯನ್ಸ್ ಸಂಸ್ಥೆಯವರಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಮಜ್ಜಿಗೆ ನೀಡಲಾಯಿತು.

ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಜೋಡುಕಟ್ಟೆಯಲ್ಲಿ ಮಹಾರಾಷ್ಟ್ರ ಶೈಲಿಯ ಪೇಟಾವನ್ನು ತೊಡಿಸಲಾಯಿತು. ಬಟ್ಟೆಯನ್ನು ತಲೆಗೆ ಸುತ್ತು ಹಾಕಿ ಪೇಟಾದ ರೀತಿ ಮಾಡಿ ಕಟ್ಟುತ್ತಿರುವ ದೃಶ್ಯ ಕಂಡುಬಂತು. ಮಹಿಳೆಯರು ಸಹ ಪೇಟಾ ಧರಿಸಿ ಮಿಂಚಿದರು.

ಮೆರವಣಿಗೆಯೊಂದಿಗೆ ರಥಬೀದಿ ಪ್ರವೇಶಿಸಿದ ಸ್ವಾಮೀಜಿ, ಕನಕನ ಕಿಂಡಿ ಯಲ್ಲಿ ಶ್ರೀಕೃಷ್ಣ ದೇವರ ದರ್ಶನ ಮತ್ತು ಶ್ರೀಚಂದ್ರಮೌಳೀಶ್ವರ ಹಾಗೂ ಶ್ರೀ ಅನಂತೇಶ್ವರ ದೇವರ ದರ್ಶನ ಪಡೆದರು. ಬಳಿಕ ಶ್ರೀಕೃಷ್ಣ ಮಠ ಪ್ರವೇಶ ಮಾಡಿ ದರು. ಅಲ್ಲಿ ಅವರನ್ನು ಪರ್ಯಾಯ ಮಠಾಧೀಶರಾದ ಶ್ರೀವಿಶ್ವೇಶ್ವತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸ್ವಾಗತಿಸಿ ಮಠದೊಳಗೆ ಕರೆದೊಯ್ದು ಶ್ರೀಕೃಷ್ಣನ ದರ್ಶನ ಮಾಡಿಸಿದರು. ಬಳಿಕ ಶ್ರೀಗಳು ಪಲಿಮಾರು ಮಠವನ್ನು ಪ್ರವೇಶಿಸಿದರು.

ಇಂದಿನ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪೌರಾಯುಕ್ತ ಮಂಜುನಾಥಯ್ಯ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಗಣ್ಯರಾದ ಮನೋಹರ್ ಎಸ್. ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಡಾ.ಎಂ.ಬಿ. ಪುರಾಣಿಕ್, ಯಶಪಾಲ್ ಎ. ಸುವರ್ಣ, ಪಿ. ಕಿಶನ್ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಡಯಾನ ವಿಟ್ಠಲ ಪೈ, ಭುವನೇಂದ್ರ ಕಿದಿಯೂರು, ತಲ್ಲೂರು ಶಿವರಾಮ ಶೆಟ್ಟಿ, ವಿಲಾಸ್ ನಾಯಕ್, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಇಂದ್ರಾಳಿ ಜಯಕರ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News