ಇಂಗ್ಲೀಷ್ ಭಾಷೆಯಿಂದ ಕನ್ನಡಿಗರ ಅಸ್ಮಿತೆ ದಮನ: ಡಾ.ಎಚ್.ಶಾಂತರಾಂ

Update: 2018-01-12 16:46 GMT

ಕಂಬದಕೋಣೆ (ಕುಂದಾಪುರ), ಜ.12: ಇಂಗ್ಲೀಷ್ ಭಾಷೆ ಇಂದು ಕೃತಕ ಸಂಸ್ಕೃತಿಯನ್ನು ಪ್ರಸರಣಗೊಳಿಸುವ ಮೂಲಕ ಕನ್ನಡಿಗರ ಅಸ್ಮಿತೆಯನ್ನು ದಮನ ಗೊಳಿಸುತ್ತಿದೆ. ಅರಿತೋ, ಅರಿಯದೆಯೋ ಕನ್ನಡಿಗರಾದ ನಾವು ತಪ್ಪು ಹೆಜ್ಜೆ ಇಡುತಿದ್ದೇವೆ ಎಂದು ಜಿಲ್ಲೆಯ ಹಿರಿಯ ಶಿಕ್ಷಣ ತಜ್ಞ ಡಾ.ಎಚ್.ಶಾಂತರಾಂ ಎಚ್ಚರಿಸಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಂಬದಕೋಣೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪುಂಡಲೀಕ ಹಾಲಂಬಿ ಸಭಾಂಗಣದ ಮೊಗೇರಿ ಗೋಪಾಲಕೃಷ್ಮ ಅಡಿಗ ವೇದಿಕೆಯಲ್ಲಿ ಇಂದು ಸಂಜೆ ಪ್ರಾರಂಭ ಗೊಂಡ 12ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ವರ್ಧಮಾನ-2018’ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಭವಿಷ್ಯದ ಕುರಿತಂತೆ ನಾವು ತಪ್ಪಾಗಿ ಆಲೋಚಿಸುತಿದ್ದೇವೆ ಎಂದು ಎಚ್ಚರಿಸಿದ ಅವರು, ಜಾಗತಿಕ ಭಾಷೆಯಾಗಿ ಮೆರೆದಾಡುತ್ತಿರುವ ಇಂಗ್ಲೀಷಿನ ವ್ಯಾಮೋಹದಲ್ಲಿ ‘ಕನ್ನಡ ತಿಳಿಯದೇ ಇದ್ದರೂ ಪರ್ವಾಗಿಲ್ಲ, ಇಂಗ್ಲೀಷ್ ಗೊತ್ತಿದ್ದರೆ ಸಾಕು’ ಎಂಬ ಭ್ರಮೆಯಲ್ಲಿದ್ದೇವೆ. ಇಂತಹ ಭ್ರಮೆ ಅತ್ತ ಕನ್ನಡವೂ ತಿಳಿಯದ ಇತ್ತ ಇಂಗ್ಲೀಷನ್ನೂ ಅರಿಯಲಾರದ ಯುವಜನರ ದಂಡನ್ನೇ ಸೃಷ್ಟಿಸುತ್ತಿದೆ ಎಂದರು.

ಭಾಷೆ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಭಾಷೆ ಕೇವಲ ಸಂವಹನ ಸಾಧನ ಅಲ್ಲ. ಅದು ನಮ್ಮ ಆಲೋಚನೆ, ವಿಚಾರ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮ, ಅದು ನಮ್ಮ ಆಚಾರ-ವಿಚಾರ, ರೀತಿ-ನೀತಿ ಬದುಕನ್ನು ಒಳಗೊಂಡಿರುತ್ತದೆ. ಭಾಷೆ ಎಂದರೆ ನಮ್ಮ ಸಂಸ್ಕೃತಿ, ಅಸ್ಮಿತೆ ಸಹ ಆಗಿದೆ ಎಂದವರು ವಿವರಿಸಿದರು.

ಮಾತೃಭಾಷೆಯಲ್ಲಿನ ಪಕ್ವತೆ ಉಳಿದ ಭಾಷೆಗಳನ್ನು ಅರಗಿಸಿಕೊಳ್ಳಲು ಇರುವ ಬಹುಮುಖ್ಯ ಸಾಧನ ಎಂಬುದನ್ನು ನಮ್ಮ ಯುವಜನತೆ ಅರ್ಥಮಾಡಿಕೊಳ್ಳ ಬೇಕು.ಪ್ರಾಥಮಿಕ ಹಂತದಲ್ಲಿ ತಾಯ್ನುಡಿ ಕನ್ನಡ ಕಲಿಕೆ ಕಡ್ಡಾಯವಾಗಿರಬೇಕು ಅನ್ನುವ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಈ ವಿಚಾರದಲ್ಲಿ ರಾಜ್ಯ ಸರಕಾರ, ಇತರ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಕನ್ನಡ ನುಡಿಯನ್ನು ಕರ್ನಾಟಕದ ಆಡಳಿತ ಭಾಷೆಯಾಗಿ ಸಂಪೂರ್ಣ ಜಾರಿ ಗೊಳಿಸಬೇಕು. ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ಕಚೇರಿಗಳಲ್ಲೂ ಕನ್ನಡ ಜಾರಿಗೊಳ್ಳಲೇಬೇಕು. ಅದೇ ರೀತಿ ಅಧ್ಯಯನಕ್ಕೆ ಅಪಾರ ಸಾಧ್ಯತೆಗಳಿರುವ ಕುಂದಾಪ್ರಕನ್ನಡದ ಕುರಿತು ಮಹತ್ವದ ಸಂಶೋಧನೆಗಳು ನಡೆಯಬೇಕು ಎಂದವರು ನುಡಿದರು.

ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬ್ರಹ್ಮಾವರದ ಹಿರಿಯ ಸುಗಮ ಸಂಗೀತ ಕಲಾವಿದ ಎಚ್.ಚಂದ್ರಶೇಖರ ಕೆದ್ಲಾಯ ಇವರಿಗೆ ಪ್ರೊ.ಮೊಗೇರಿ ಗೋಪಾಲಕೃಷ್ಣ ಅಡಿಗ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಟಿ.ಬಾಬು ಶೆಟ್ಟಿ, ಡಿಡಿಪಿಯು ವಿಜಯಲಕ್ಷ್ಮಿ ನಾಯಕ್, ಕಸಾಪ ದ.ಕ.ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕಾಸರಗೋಡು ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ.ಪೂ.ಕಾಲೇಜು ಪ್ರಾಂಶುಪಾಲರಾದ ಜಯಲಕ್ಷ್ಮಿ ಕಾರಂತ, ಜಿಪಂ ಸದಸ್ಯೆ ಗೌರಿ ದೇವಾಡಿಗ, ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು, ಕಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

ಕಸಾಪದ ಸುಬ್ರಹ್ಮಣ್ಯ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಸಾಹಿತ್ಯ ಸಮ್ಮೇಳದ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನು ಆಡಿದರು. ಸೂರಾಲು ನಾರಾಯಣ ಮಡಿ ವಂದಿಸಿ, ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೆ ಮುನ್ನ ನಾಯ್ಕನಕಟ್ಟೆ ಶ್ರೀಲಕ್ಷ್ಮಿನಾರಾಯಣ ದೇವಸ್ಥಾನದಿಂದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯಿತು. ಮೆರವಣಿಯನ್ನು ನಿವೃತ್ತ ಶಿಕ್ಷಕ ಎನ್.ರಮಾನಂದ ಭಟ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News