ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ: ವೈದೇಹಿ

Update: 2018-01-16 15:04 GMT

ಉಡುಪಿ, ಜ.16: ಮನಸ್ಸಿನ ವಿಕಾಸಕ್ಕೆ ಸಾಹಿತ್ಯ ಅಗತ್ಯ.ಆಧುನಿಕ ಭಾರತದ ಪರಿಕಲ್ಪನೆ ಹೊಂದಿರುವ ‘ಕೃತಿ ಜಗತ್ತು’ ಓದಿನ ಹಂಬಲವನ್ನು ಹೆಚ್ಚಿಸುವಂತಹ ಪುಸ್ತಕವಾಗಿದೆ ಎಂದು ಕನ್ನಡದ ಖ್ಯಾತ ಸಾಹಿತಿ ವೈದೇಹಿ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ, ವಿಮರ್ಶಕ ಪ್ರೊ.ಟಿ.ಪಿ.ಅಶೋಕ್ ಅವರ ‘ಕೃತಿ ಜಗತ್ತು’ ಪುಸ್ತಕವನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು. ಮಣಿಪಾಲ ಯುನಿವರ್ಸಲ್ ಪ್ರೆಸ್‌ನ 119ನೇ ಪುಸ್ತಕವಾಗಿ ಈ ಕೃತಿ ಪ್ರಕಟಗೊಂಡಿದೆ.

ಜಗತ್ತಿನ ಪ್ರಮುಖ ಕೃತಿಗಳನ್ನು ಅವಲೋಕಿಸಿ, ಲೋಕದ ಸಾಹಿತ್ಯವನ್ನು ಕನ್ನಡಕ್ಕೆ ಹೋಲಿಸಿದವರು ವಿಮರ್ಶಕರಾಗಿರುವ ಟಿ.ಪಿ ಆಶೋಕ್ ಎಂದ ವೈದೇಹಿ, ಸಮಾಜದ ಕಷ್ಟ, ಕಳಕಳಿ, ದೌರ್ಜನ್ಯದ ಚಿತ್ರಗಳನ್ನು ‘ಕೃತಿ ಜಗತ್ತು’ ಪುಸ್ತಕ ಓದುಗರ ಮುಂದಿಡುತ್ತದೆ ಎಂದರು.

ಜಗತ್ತಿನ ಪ್ರಮುಖ ಕೃತಿಗಳನ್ನು ಅವಲೋಕಿಸಿ, ಲೋಕದ ಸಾಹಿತ್ಯವನ್ನು ಕನ್ನಡಕ್ಕೆ ಹೋಲಿಸಿದವರು ವಿಮರ್ಶಕರಾಗಿರುವ ಟಿ.ಪಿ ಆಶೋಕ್ ಎಂದ ವೈದೇಹಿ, ಸಮಾಜದ ಕಷ್ಟ, ಕಳಕಳಿ, ದೌರ್ಜನ್ಯದ ಚಿತ್ರಗಳನ್ನು ‘ಕೃತಿ ಜಗತ್ತು’ ಪುಸ್ತಕ ಓದುಗರ ಮುಂದಿಡುತ್ತದೆ ಎಂದರು. ಮನುಷ್ಯ ಸಮಾಜಕ್ಕೆ ತೆರೆದುಕೊಳ್ಳಲು ಸಾಹಿತ್ಯ ಕಮ್ಮಟ, ಕಾರ್ಯಕ್ರಮಗಳು ಪ್ರೇರಕ. ಇವುಗಳಲ್ಲಿ ಭಾಗವಹಿಸುವುದರಿಂದ ಸಮಾಜದ ಜನಸಾಮಾನ್ಯರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಮಾಜ ಸುಧಾರಣೆಗೆ ಸಾಹಿತ್ಯ ಪ್ರಮುಖ ಅಂಗವೆಂದು ವಿದ್ಯಾರ್ಥಿಗಳು ತಿಳಿಯಬೇಕು ಎಂದು ವೈದೇಹಿ ನುಡಿದರು.

ಕೃತಿ ಪರಿಚಯಿಸಿ ಮಾತನಾಡಿದ ಖ್ಯಾತ ವಿಮರ್ಶಕ, ಚಿಂತಕ ಜಿ. ರಾಜಶೇಖರ್, ಅಶೋಕ್‌ಗೆ ಓದು ಜಗತ್ತನ್ನು ಗ್ರಹಿಸುವ ಆರನೇ ಇಂದ್ರಿಯ ಎಂದರು. ಅಶೋಕ್ ಮಟ್ಟಿಗೆ ಆಧುನಿಕ ಭಾರತ ವೈವಿಧ್ಯಮಯ, ಬಹು ಸಾಧ್ಯತೆಗಳ ಜನಸಮೂಹದ ನಾಗರಿಕತೆಯಾಗಿದೆ. ಆಧುನಿಕ ಭಾರತದ ಸ್ಥಿತಿ, ಸಾಧ್ಯತೆ ಹಾಗೂ ಸಮಸ್ಯೆಗಳನ್ನು ಈ ಕೃತಿ ಬಿಂಬಿಸುತ್ತದೆ ಎಂದರು.

ಮಾಹೆ ಡೀಮ್ಡ್ ವಿವಿಯ ಕುಲಪತಿ ಡಾ.ಎಚ್.ವಿನೋದ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ನಾಗರಾಜ ರಾವ್ ಅವರು ಗೆಳೆಯ ಟಿ.ಪಿ.ಅಶೋಕ್ ವ್ಯಕ್ತಿ, ಸಾಧನೆಯ ಕುರಿತು ಅಭಿನಂದನಾ ಮಾತುಗಳನಾಡಿದರು.

ಇದೇ ಸಂದರ್ಭದಲ್ಲಿ ತನ್ನ ‘ಕಥನ ಭಾರತಿ’ ಕೃತಿಗೆ 2017ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಪ್ರೊ.ಅಶೋಕ್ ಅವರನ್ನು ಮಣಿಪಾಲ ಯುನಿವರ್ಸಲ್ ಪ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿದ ಅಶೋಕ್ ಮಾತನಾಡಿ, ಇದು ತನ್ನ ಕಥನ ಭಾರತದ ಮುಂದುವರಿದ ಭಾಗವಾಗಿದೆ. ಸಾಹಿತ್ಯದ ಓದಿಗೆ ಭಾಷೆ ಎಂದೂ ತೊಡಕಾಗ ಬಾರದು. ಭಾರತದಲ್ಲಿ ಒಂದೇ ಭಾಷೆ ತಿಳಿದವರು ಯಾರೂ ಇರಲಿಕ್ಕಿಲ್ಲ. ಇಲ್ಲಿ ಪ್ರತಿಯೊಬ್ಬನಿಗೂ ಕನಿಷ್ಠ 2-3 ಭಾಷೆಗಳ ಅರಿವಿರುತ್ತದೆ. ಆದುದರಿಂದ ನಾವು ನಮ್ಮ ಮನಸ್ಸಿನ ಕಿಟಿಕಿ-ಬಾಗಿಲುಗಳನ್ನು ಸದಾ ತೆರೆದಿರಬೇಕು ಎಂದರು.
ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಡಾ.ನೀತಾ ಇನಾಂದಾರ್ ಸ್ವಾಗತಿಸಿದರೆ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News