‘ಕ್ಲೀನ್ ಪಾಲಿಟಿಕ್ಸ್’ಗಾಗಿ ಸೈಕಲ್ ಜಾಥಾ

Update: 2018-01-17 06:04 GMT

ಮುಖ್ಯಾಂಶಗಳು

► 40 ದಿನಗಳಲ್ಲಿ 3,000 ಕಿ.ಮೀ. ಸಂಚಾರ.

► ಪ್ರತೀ ದಿನ 80 ಕಿ.ಮೀ. ಕ್ರಮಿಸುವ ಮೈಸೂರು ಯುವ ಸಂಘಟನೆಯ ಅಧ್ಯಕ್ಷ.

►ಬೆಂಬಲ ವ್ಯಕ್ತಪಡಿಸಲು ಮಿಸ್‌ಕಾಲ್‌ಗೆ ಮನವಿ.

ಉಡುಪಿ, ಜ.16: ಜಾತಿ, ಧರ್ಮ ಆಧಾರಿತ ರಾಜಕೀಯ ಹಾಗೂ ಭ್ರಷ್ಟಾಚಾರದಿಂದ ಬೇಸತ್ತಿರುವ ಮೈಸೂರು ಯುವ ಸಂಘಟನೆಯ ಸ್ಥಾಪಕ ಅಖಿಲ್ ಕೆ. (25) ಏಕಾಂಗಿಯಾಗಿ ರಾಜ್ಯಾದ್ಯಂತ 3,000 ಕಿ.ಮೀ. ಸೈಕಲ್ ತುಳಿಯುತ್ತ ರಾಜಕೀಯ ಜಾಗೃತಿ ಮೂಡಿಸಲು ಹೊರಟಿದ್ದಾರೆ. ‘ಸ್ವಚ್ಛ ರಾಜಕೀಯಕ್ಕೆ ಮತ ಹಾಕಿ’ ಎಂಬ ಅಭಿಯಾನವನ್ನು ಸೈಕಲ್ ಜಾಥದ ಮೂಲಕ ಮೈಸೂರಿನಿಂದ ಆರಂಭಿಸಿರುವ ಸುಳ್ಯ ತಾಲೂಕಿನ ಜಲ್ಸೂರಿನ ಕೃಷ್ಣಪ್ಪ ಗೌಡ ಎಂಬವರ ಮಗ ಅಖಿಲ್, ಇಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದು ಈ ವೇಳೆ ಅವರು ತನ್ನ ಅಭಿಯಾನದ ಉದ್ದೇಶದ ಕುರಿತ ಮಾಹಿತಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು. ಅಖಿಲ್ ಬೆಳಗ್ಗೆ 8ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿದಿನ 80 ಕಿ.ಮೀ. ದೂರ ಸೈಕಲ್ ತುಳಿಯುತ್ತಿದ್ದಾರೆ.

ಈ ಅಭಿಯಾನವನ್ನು 35ರಿಂದ 40 ದಿನಗಳಲ್ಲಿ ಪೂರ್ಣಗೊಳಿಸಲು ಅವರು ಉದ್ದೇಶಿಸಿದ್ದಾರೆ. ಜ.12ರಂದು ಮೈಸೂರಿನಿಂದ ಹೊರಟಿರುವ ಅಖಿಲ್ ಅವರ ಸೈಕಲ್ ಜಾಥಾ ಹುಣಸೂರು- ಮಡಿಕೇರಿ- ಪುತ್ತೂರು- ಮಂಗಳೂರು ಮಾರ್ಗವಾಗಿ ಉಡುಪಿಗೆ ಆಗಮಿಸಿದೆ. ಈವರೆಗೆ ಅವರು ಸುಮಾರು 300 ಕಿ.ಮೀ. ದೂರ ಕ್ರಮಿಸಿದ್ದಾರೆ ಮುಂದೆ ಕುಂದಾಪುರ- ಕಾರವಾರ- ಹುಬ್ಬಳ್ಳಿ- ಬಿಜಾಪುರ- ಹೈದರಾಬಾದ್ ಕರ್ನಾಟಕ- ಕೋಲಾರ- ಬೆಂಗಳೂರು ಮಾರ್ಗವಾಗಿ ಮೈಸೂರಿಯಲ್ಲಿ ಜಾಥವನ್ನು ಸಮಾಪ್ತಿಗೊಳಿಸಲಿದ್ದಾರೆ. ಹೀಗೆ ಅವರು ಸುಮಾರು 3000 ಕಿ.ಮೀ. ದೂರ ಸೈಕಲ್‌ನಲ್ಲಿ ಕ್ರಮಿಸಲಿದ್ದಾರೆ.

ಸೈಕಲಿನ ಒಂದು ಬದಿಯಲ್ಲಿ ಅಂಟಿಸಿರುವ ಫೋಸ್ಟರ್‌ನಲ್ಲಿ ‘ಜಾತಿ, ಧರ್ಮ, ಭಾಷೆಗಳ ಆಧಾರದ ಮೇಲೆ ವಿಂಗಡಿಸಬೇಡಿ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಒಟ್ಟಿಗೆ ಸೇರಿಕೊಳ್ಳಿ. ಇದಕ್ಕೆ ಒಪ್ಪಿದರೆ ದಯವಿಟ್ಟು ನಿಮ್ಮ ಬೆಂಬಲ ವ್ಯಕ್ತಪಡಿಸಲು 7877778850 ನಂಬರ್‌ಗೆ ಮಿಸ್ಡ್‌ಕಾಲ್ ಮಾಡಿ. ಪ್ರತಿ ಮಿಸ್ಡ್ ಕಾಲ್ ಮುಖ್ಯವಾಗಿದೆ’ ಎಂಬ ಬರಹವನ್ನು ಹಾಕಲಾಗಿದೆ.

ಇನ್ನೊಂದು ಬದಿಯ ಪೋಸ್ಟರ್‌ನಲ್ಲಿ ‘ಚುನಾವಣೆಯಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು, ಯುವಜನರಿಗೆ ಉದ್ಯೋಗ, ರೈತಪರ ನೀತಿ ಮುಖ್ಯವಾಗಿರಬೇಕು. ಜಾತಿ, ಧರ್ಮದ ಮೇಲೆ ರಾಜಕೀಯ ಅಲ್ಲ’ ಎಂದು ಬರೆಯಲಾಗಿದೆ. ಅವರು ಧರಿಸಿರುವ ಟೀಶರ್ಟ್‌ನ ಮುಂಭಾಗದಲ್ಲಿ ‘ವೋಟ್ ಫಾರ್ ಕ್ಲೀನ್ ಪಾಲಿಟಿಕ್ಸ್’ ಮತ್ತು ಹಿಂಬದಿಯಲ್ಲಿ ಭ್ರಷ್ಟಾಚಾರದಿಂದ ಕರ್ನಾಟಕವನ್ನು ಮುಕ್ತಗೊಳಿಸಲು ಸ್ವಚ್ಛ ರಾಜಕೀಯ ಮಾಡುವ ಜನರಿಗೆ ಮತ ಹಾಕಿ ಎಂದು ಬರೆಯಲಾಗಿದೆ.

ಮೈಸೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಶಿಕ್ಷಣ ಮುಗಿಸಿರುವ ಅಖಿಲ್, ಮೈಸೂರು ಯುವ ಸಂಘಟನೆಯ ಸ್ಥಾಪಕ. ಈ ಸಂಘಟನೆಯ ಪ್ರಥಮ ಹಂತದ ಕಾರ್ಯಕ್ರಮ ಕ್ಲೀನ್ ಪೊಲಿಟಿಕ್ಸ್ ಅಭಿಯಾನ ಆಗಿದ್ದು, ಮುಂದೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವರು ಹಾಗೂ ಅವರ ತಂಡ ನಿರ್ಧರಿಸಿದೆ. ಅವರ ತಂಡದಲ್ಲಿ ಸುಮಾರು 200 ಮಂದಿ ಸದಸ್ಯರಿದ್ದಾರೆ. ಯುವ ಸಂಘಟನೆಯ ಮೂಲಕ 2016ರಲ್ಲಿ 300 ಹಾಗೂ 2017ರಲ್ಲಿ 250 ವಿದ್ಯುತ್ ಇಲ್ಲದ ಮನೆಗಳಿಗೆ ಸೋಲಾರ್ ದೀಪಗಳನ್ನು ಒದಗಿಸಿಕೊಡ ಲಾಗಿದೆ. ಇದಕ್ಕೆಲ್ಲ ಫೇಸ್‌ಬುಕ್ ಮೂಲಕ ನಿಧಿಯನ್ನು ಸಂಗ್ರಹಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಸುಮಾರು 350 ಬಡ ಕುಟುಂಬಗಳಿಗೆ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದೆ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅಖಿಲ್ ತಿಳಿಸಿದರು.

ಗೌರಿ ಲಂಕೇಶ್, ಗಣಪತಿಗೆ ಗೌರವ

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿಗೆ ಗೌರವ ಸಲ್ಲಿಸುವ ಉದ್ದೇಶವನ್ನೂ ಅಖಿಲ್ ಈ ಸೈಕಲ್ ಜಾಥಾದಲ್ಲಿ ಹೊಂದಿದ್ದಾರೆ. ಅದಕ್ಕಾಗಿ ಅವರು ಸೈಕಲ್‌ನ ಫೋಸ್ಟರ್‌ನಲ್ಲಿ ಹಾಗೂ ಟೀಶರ್ಟ್‌ನಲ್ಲಿ ಗೌರಿ ಲಂಕೇಶ್ ಮತ್ತು ಗಣಪತಿಯ ಭಾವಚಿತ್ರವನ್ನು ಹಾಕಿ ಕೊಂಡಿದ್ದಾರೆ. ‘‘ಈ ಅಭಿಯಾನವನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ’’ ಎಂದು ಅಖಿಲ್ ತಿಳಿಸಿದರು.

Full View

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News