ಸಾಹಿತ್ಯದ ಭಾಷೆ ನಮ್ಮ ಮನೆಗಳಿಗೆ ತಲುಪುತ್ತಿಲ್ಲ: ರಂಗನಟಿ ಗೀತಾ ಸುರತ್ಕಲ್ ವಿಷಾದ
ಮಂಗಳೂರು, ಜ.23: ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಆದರೆ, ಕನ್ನಡದ ಪುಸ್ತಕಗಳು, ಸಾಹಿತ್ಯದ ಭಾಷೆ ನಮ್ಮ ಮನೆಗಳಿಗೆ ತಲುಪುತ್ತಿಲ್ಲ. ಸಾಹಿತ್ಯ ನಮ್ಮ ಮನೆ ಮಾತು ಆಗುತ್ತಿಲ್ಲ ಎಂದು ಸಾಹಿತಿ ಮತ್ತು ರಂಗ ನಟಿ ಗೀತಾ ಸುರತ್ಕಲ್ ವಿಷಾದಿಸಿದ್ದಾರೆ.
ಅವರು ಇಂದು ಸುರತ್ಕಲ್ ಗೋವಿಂದದಾಸ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಸಮುದಾಯದ ಪಾತ್ರ ಮಹತ್ತರವಾಗಿದ್ದು, ಕನ್ನಡ ಸಾಹಿತ್ಯವನ್ನು ಮನೆಗಳಿಗೆ ತಲುಪಿಸುವ ಜವಾಬ್ಧಾರಿಯನ್ನು ವಹಿಸಬೇಕು ಎಂದು ಕರೆ ನೀಡಿದರು.
ಕವಿ ಕುವೆಂಪುರವರು ಜೈ ಭಾರತ ಜನನಿಯ ತನುಜಾತೆ ನಾಡಗೀತೆಯಲ್ಲಿ ಯಲ್ಲಿ ಭಾರತ ಮತ್ತು ಕರ್ನಾಟಕ ಸೇರಿ ಎರಡೂ ತಾಯಂದಿರಿಗೂ ಸಮಾನ ಗೌರವ ಸಲ್ಲಿಸಿದ್ದಾರೆ. ಅದೇ ನಮ್ಮ ದೃಷ್ಟಿಯಾಗಬೇಕು. ಅಂಥ ಔದಾರ್ಯವನ್ನು ಕಳೆದುಕೊಳ್ಳುವುದು ಬೇಡ. ಸರ್ವಜನಾಂಗದ ಶಾಂತಿಯ ತೋಟದ ಶಾಂತಿಯನ್ನು ಕದಡಿಸುವುದು ಬೇಡ ಎಂದವರು ಈ ಸಂದರ್ಭ ಕಿವಿಮಾತನ್ನೂ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಆಶಯ ಭಾಷಣ ಮಾಡಿ, ಸುರತ್ಕಲ್ ಎಂಬುದು ಹಿಂದಿನ ಎಲ್ಲ ಆಗುಹೋಗುಗಳ ಮಧ್ಯೆ ಪ್ರಧಾನ ಭೂಮಿಕೆಯಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಘಟನೆ, ತೌಳವ ಪರಂಪರೆಯ ಎಲ್ಲ ಕ್ಷೇತ್ರದಲ್ಲಿ ಇದು ಗಮನ ಸೆಳೆದಿದೆ. ನಮ್ಮ ಸರಕಾರಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತುಳು ರಾಜ್ಯದ ಅಧಿಕೃತ ಭಾಷೆಯಾಗಬೇಕು. ಸ್ಪಷ್ಟ ಕನ್ನಡ ಭಾಷೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕು ಎಂದರು.
ತುಳುನಾಡು ಎಲ್ಲ ಭಾಷೆ, ಧರ್ಮೀಯರನ್ನು ಸ್ವೀಕರಿಸಿದೆ. ಈಗ ನಾವು ಭಿನ್ನವಾಗಿ ಕಾಣುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬದುಕು ಇದ್ದರೆ ಮಾತ್ರ ಸಾಹಿತ್ಯ. ಸಾಹಿತ್ಯವು ಹಿತಕಾರಿಯಾಗಿ ಸೌಹಾರ್ದದ ಸಂದೇಶ ನೀಡಬೇಕು ಎಂದು ನಿಕಟಪೂರ್ವಾಧ್ಯಕ್ಷೆ ಚಂದ್ರಕಲಾ ನಂದಾವರ ಹೇಳಿದರು.
ಸಮ್ಮೇಳನದಲ್ಲಿ ಅಂಧ ಬರಹಗಾರ ಹುಸೈನ್ ಕಾಪು ಅವರ ‘ಮೊಗ್ಗರಳಿ ಹೂವಾಗಿ’ ಕಾದಂಬರಿ, ಸಾವಿತ್ರಿ ರಮೇಶ್ ಭಟ್ ಅವರ ‘ಅಂತರಾಳದ ತುಡಿತಗಳು’ ಕೃತಿ ಮತ್ತು ರಮೇಶ್ ಭಟ್ ಎಸ್.ಡಿ. ಅವರ ‘ಸ್ವಾತಂತ್ರ್ಯಪೂರ್ವದ ಕನ್ನಡ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ’ ಸಂಶೋಧನಾ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು.
ಅವರು ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ. ರಾಜ್ಯದಲ್ಲಿ ಮೂರು ಸಾವಿರ ಶಾಲೆಗಳು ಮುಚ್ಚುತ್ತಿವೆ. ನಾನು ನಡೆಸುವ ಎಂಟು ಕನ್ನಡ ಶಾಲೆಗಳೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಾಹಿತಿ ಪ್ರೊ.ಎಚ್.ರಮೇಶ್ ಕೆದಿಲಾಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಗೋವಿಂದದಾಸ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ. ಮುರಳೀಧರ್, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಲಕ್ಷ್ಮೀ ಬಿ., ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ.ತಮ್ಮಯ್ಯಘಿ, ಗೌರವ ಕೋಶಾಧ್ಯಕ್ಷೆ ಪೂರ್ಣಿಮಾ ರಾವ್ ಪೇಜಾವರ, ಪುತ್ತೂರು ತಾಲೂಕು ಅಧ್ಯಕ್ಷ ಬಿ.ಐತಪ್ಪ ನಾಯ್ಕೆ, ಮೂಲ್ಕಿ ಹೋಬಳಿ ಸಂಚಾಲಕ ಎನ್.ಪಿ.ಶೆಟ್ಟಿ, ಸುರತ್ಕಲ್ ಹೋಬಳಿ ಸಂಚಾಲಕ ವಿನಯ ಆಚಾರ್ ಉಪಸ್ಥಿತರಿದ್ದರು.
ಗೋವಿಂದದಾಸ ಕಾಲೇಜು ಮೈದಾನದಿಂದ ಸಭಾಂಗಣ ತನಕ ನಡೆದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಚಾಲನೆ ನೀಡಿ, ರಾಷ್ಟ್ರ ಧ್ವಜಾರೋಹಣ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಪರಿಷತ್ತಿನ ಧ್ವಜಾರೋಹಣ ಮಾಡಿದರು. ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಂ.ವೆಂಕಟ್ರಾಮ್ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಸಾಹಿತಿ ಪಾದೆಕಲ್ಲು ನರಸಿಂಹ ಭಟ್ ಅವರ ನಿಧನಕ್ಕೆ ಮೌನ ಪ್ರಾರ್ಥನೆ ಮೂಲಕ ಸಂಪಾಪ ಸೂಚಿಸಲಾಯಿತು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ದೇವಕಿ ಅಚ್ಯುತ ವಂದಿಸಿದರು. ಪ್ರೊ.ರಮೇಶ ಭಟ್ ಎಸ್. ಮತ್ತು ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.