ಥಿಯೇಟರ್ ಒಲಿಂಪಿಕ್ಸ್: ರಂಗಭೂಮಿಯ ಹೊಸ ದಿಗಂತ

Update: 2018-02-18 09:49 GMT
ಥಿಯೇಟರ್ ಒಲಿಂಪಿಕ್ಸ್: ರಂಗಭೂಮಿಯ ಹೊಸ ದಿಗಂತ
  • whatsapp icon

ಥಿಯೋಡೊರಾಸ್ ಟೆರ್ರೊಪೊಲಸ್ ಇಪ್ಪತ್ತನೆ ಶತಮಾನದ ಗ್ರೀಕ್ ಕಂಡ ಒಬ್ಬ ಮೇಧಾವಿ ರಂಗ ನಿರ್ದೇಶಕ. ಥಿಯೇಟರ್ ಒಲಿಂಪಿಕ್ಸ್ ಥಿಯೋಡೊರಾಸ್‌ನ ಕಲ್ಪನೆಯ ಕೂಸು. 1993ರಲ್ಲಿ ಗ್ರೀಸ್‌ನ ಡೆಲ್ಫಿಯಲ್ಲಿ ‘ಥಿಯೇಟರ್ ಒಲಿಂಪಿಕ್ಸ್’ ಅಸ್ತಿತ್ವಕ್ಕೆ ಬಂತು. ಪ್ರತೀವರ್ಷ ಜಗತ್ತಿನ ರಂಗಭೂಮಿಯ ಮಹಾನ್ ನಿರ್ದೇಶಕರ ಸಾಧನೆಗಳನ್ನು ಬಿಂಬಿಸುವ ನಾಟಕೋತ್ಸವಗಳನ್ನು ವಿಶ್ವದ ವಿವಿಧೆಡೆಗಳಲ್ಲಿ ನಡೆಸುವುದು ಇದರ ಮುಖ್ಯ ಉದ್ದೇಶ. ರಂಗಭೂಮಿಯ ಕಲಾವಿದರಿಗೆ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವವರಿಗೆ, ಅಭಿನಯ ಕಲೆಯ ವಿದ್ಯಾಥಿಗಳಿಗೆ, ರಂಗ ಕರ್ಮಿಗಳಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಹಾಗೂ ರಂಗಭೂಮಿ ಪರಂಪರೆಯೊಂದಿಗೆ ಅನುಸಂಧಾನ ನಡೆಸಲು ‘ಥಿಯೇಟರ್ ಒಲಿಂಪಿಕ್ಸ್’ನ್ನು ಒಂದು ವೇದಿಕೆಯಾಗಿಸುವುದು ಇದರ ಸೃಷ್ಟಿಕರ್ತರ ಮುಖ್ಯ ಆಶಯ.


ಕಳೆದ ವಾರವಷ್ಟೆ ಕನ್ನಡ ರಂಗಭೂಮಿ ಮತ್ತು ಶ್ರೀರಂಗರ ಬಗ್ಗೆ ಬರೆದದ್ದನ್ನು ಪ್ರಿಯ ವಾಚಕರು ಮರೆತಿರಲಾರರು. ಈ ವಾರ ಮತ್ತೆ ರಂಗಭೂಮಿಯ ಬಗ್ಗೆ ಬರೆಯಬೇಕಾದಂಥ ನನ್ನ ಸುದೈವಕ್ಕೆ ಕಾರಣ ನಿನ್ನೆಯಷ್ಟೆ (ಫೆ.17) ಹೊಸದಿಲ್ಲಿಯಲ್ಲಿ ಉದ್ಘಾಟನೆಗೊಂಡ ‘ಥಿಯೇಟರ್ ಒಲಿಂಪಿಕ್ಸ್’ ಅಂತಾರಾಷ್ಟ್ರೀಯ ನಾಟಕೋತ್ಸವ. ನಮಗೆ ಒಲಿಂಪಿಕ್ಸ್ ಕ್ರೀಡಾ ಕೂಟಗಳು ಗೊತ್ತು. ಆದರೆ ಥಿಯೇಟರ್ ಒಲಿಂಪಿಕ್ಸ್ ಎನ್ನುವುದು ಹೊಸತು. ಏನಿದು ಥಿಯೇಟರ್ ಒಲಿಂಪಿಕ್ಸ್? ಇದು ವಿಶ್ವ ರಂಗಭೂಮಿಯನ್ನು ಗಾಢವಾಗಿ ಪ್ರಭಾವಿಸಿರುವ ಗ್ರೀಕ್ ರಂಗಭೂಮಿಯ ಹೊಸ ಆವಿಷ್ಕಾರ. ಪಾಶ್ಚಾತ್ಯ ಜಗತ್ತಿನಲ್ಲಿ ನಾಟಕ ಮೊದಲು ರೂಪಗೊಂಡದ್ದು ಗ್ರೀಸ್‌ನಲ್ಲಿ ಎಂದು ಇತಿಹಾಸ ಹೇಳುತ್ತದೆ. ಗ್ರೀಕ್ ನಾಟಕ ಬೆಳೆದದ್ದು ಅಥೆನ್ಸ್ ನಗರದಲ್ಲಿ. ಕ್ರಿ.ಪೂ. ಆರನೆಯ ಶತಮಾನವನ್ನು ಗ್ರೀಕ್ ರಂಗಭೂಮಿಯ ಸ್ವರ್ಣಯುಗ ಎಂದು ಕರೆಯಲಾಗುತ್ತದೆ. ಜಗತ್ತಿನ ರುದ್ರ ನಾಟಕಗಳ ಚರಿತ್ರೆಯಲ್ಲಿ ಶ್ರೇಷ್ಠ ನಾಟಕಕಾರರೆಂದು ಮಾನ್ಯಮಾಡಲ್ಪಟ್ಟ ಈಸ್ಕಲಿಸ್(ಕ್ರಿ.ಪೂ.524-456), ಸಫೋಕ್ಲಿಸ್(495-406) ಮತ್ತು ಯೂರಿಪಿಡಿಸ್ (480-406) ಅಥೆನ್ಸ್ ನಗರದಲ್ಲಿ ಜನಿಸಿದವರು. ಪ್ರಾಚೀನ ಗ್ರೀಸ್‌ನಿಂದ ಇಂದಿನವರೆಗೆ ನಿರಂತರವಾಗಿ ಪ್ರಯೋಗಶೀಲತೆಯನ್ನು ಮೆರೆಯುತ್ತಿರುವ ಗ್ರೀಕ್ ರಂಗಭೂಮಿ ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ.

ಥಿಯೋಡೊರಾಸ್ ಟೆರ್ರೊಪೊಲಸ್ ಇಪ್ಪತ್ತನೆ ಶತಮಾನದ ಗ್ರೀಕ್ ಕಂಡ ಒಬ್ಬ ಮೇಧಾವಿ ರಂಗ ನಿರ್ದೇಶಕ. ಥಿಯೇಟರ್ ಒಲಿಂಪಿಕ್ಸ್ ಥಿಯೋಡೊರಾಸ್‌ನ ಕಲ್ಪನೆಯ ಕೂಸು. 1993ರಲ್ಲಿ ಗ್ರೀಸ್‌ನ ಡೆಲ್ಫಿಯಲ್ಲಿ ‘ಥಿಯೇಟರ್ ಒಲಿಂಪಿಕ್ಸ್’ ಅಸ್ತಿತ್ವಕ್ಕೆ ಬಂತು. ಪ್ರತೀವರ್ಷ ಜಗತ್ತಿನ ರಂಗಭೂಮಿಯ ಮಹಾನ್ ನಿರ್ದೇಶಕರ ಸಾಧನೆಗಳನ್ನು ಬಿಂಬಿಸುವ ನಾಟಕೋತ್ಸವಗಳನ್ನು ವಿಶ್ವದ ವಿವಿಧೆಡೆಗಳಲ್ಲಿ ನಡೆಸುವುದು ಇದರ ಮುಖ್ಯ ಉದ್ದೇಶ. ರಂಗಭೂಮಿಯ ಕಲಾವಿದರಿಗೆ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವವರಿಗೆ, ಅಭಿನಯ ಕಲೆಯ ವಿದ್ಯಾಥಿಗಳಿಗೆ, ರಂಗ ಕರ್ಮಿಗಳಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಹಾಗೂ ರಂಗಭೂಮಿ ಪರಂಪರೆಯೊಂದಿಗೆ ಅನುಸಂಧಾನ ನಡೆಸಲು ‘ಥಿಯೇಟರ್ ಒಲಿಂಪಿಕ್ಸ್’ನ್ನು ಒಂದು ವೇದಿಕೆಯಾಗಿಸುವುದು ಇದರ ಸೃಷ್ಟಿಕರ್ತರ ಮುಖ್ಯ ಆಶಯ. ದೇಶದೇಶಗಳ ನಡುವಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ಭಾಷೆ ಮತ್ತು ಸಾಂಸ್ಕೃತಿಕ ಕಂದರಗಳು, ಭಿನ್ನತೆಗಳು-ಇವುಗಳ ನಡುವೆಯೂ ಅರ್ಥಪೂರ್ಣ ಸಂವಾದಕ್ಕೆ ‘ಥಿಯೇಟರ್ ಒಲಿಂಪಿಕ್ಸ್’ ಒಂದು ವೇದಿಕೆಯಾಗಬೇಕು ಎಂಬುದು ಇದರ ಹಿಂದಿನ ತೀವ್ರ ಕಾಳಜಿ. ಹೊಸ ಸಹಸ್ರಮಾನದ ಉದಯಪೂರ್ವದಲ್ಲಿ ಹುಟ್ಟಿದ ‘ಥಿಯೇಟರ್ ಒಲಿಂಪಿಕ್ಸ್’ನ ಉಪಶೀರ್ಷಿಕೆ: ‘ಸಹಸ್ರ ಮಾನದ ದಾಟು’-(ಕ್ರಾಸಿಂಗ್ ದಿ ಮಿಲೇನಿಯಾ). ಈ ‘ದಾಟುವಿಕೆ’ ಹೊಸ ಸಹಸ್ರಮಾನದತ್ತ ರಂಗಭೂಮಿ ಇಡುತ್ತಿರುವ ಹೊಸ ಹೆಜ್ಜೆ. ಅದರೆ ಇದು ಗತಕಾಲದ ರಂಗಭೂಮಿಯನ್ನು ಪೂರ್ತಿಯಾಗಿ ಮರೆತು ಹೊಸದಕ್ಕೆ ಕೈಚಾಚುತ್ತಿರುವ ಹುಂಬ ಉತ್ಸಾಹವಲ್ಲ. ಭೂತ ಮತ್ತು ವರ್ತಮಾನ ಕಾಲಗಳ ನಡುವೆ ಸಂಬಂಧ ಕಲ್ಪಿಸುವ ಮೂಲಕ ಪರಂಪರೆಯ ಮಹತ್ವವನ್ನು ಮನವರಿಕೆಮಾಡಿಕೊಂಡು, ಆ ಶ್ರೀಮಂತಿಕೆಯ ಪ್ರಭಾವಗಳನ್ನು ಅರಗಿಸಿಕೊಂಡು ಹೊಸದರತ್ತ ಇಡುತ್ತಿರುವ ಹೆಜ್ಜೆ. ಮೊದಲ ಕ್ರಮವಾಗಿ ಈ ಅಂತಾರಾಷ್ಟ್ರೀಯ ನಾಟಕೋತ್ಸವ ವಿಶ್ವ ರಂಗಭೂಮಿ ಪರಂಪರೆಯ ಶ್ರೀಮಂತಿಕೆಯನ್ನು, ಪರಂಪರೆಯಲ್ಲಿನ ವೈವಿಧ್ಯಗಳನ್ನು ಅರ್ಥಮಾಡಿಸಬೇಕು ಹಾಗೂ ಈ ನಿಟ್ಟಿನಲ್ಲಿ ಪ್ರದರ್ಶನ ಕಲೆಗಳಲ್ಲಿ ಸಂಶೋಧನೆ ಮತ್ತು ಪ್ರಯೋಗಗಳಿಗೆ ನೆರವಾಗಬೇಕು. ಹೀಗೆ ಪರಂಪರೆಯ ಸತ್ವ ಹೀರಿಕೊಂಡು ಹೊಸ ಆಯಾಮಗಳಿಗೆ ಕೈಚಾಚುವ ಇಂಥ ಪ್ರಯತ್ನಗಳ ಮೂಲಕ ವಿಶ್ವ ರಂಗಭೂಮಿಯನ್ನು ಶಕ್ತಿಶಾಲಿಯಾಗಿ ಬೆಳೆಸುವುದು ‘ಥಿಯೇಟರ್ ಒಲಿಂಪಿಕ್ಸ್‌ನ ಗುರಿ.
ಪ್ರಪಂಚದಾದ್ಯಂತ ರಂಗಭೂಮಿ ಕಲಾವಿದರ ಸಂಪರ್ಕ ಜಾಲವೊಂದನ್ನು ನಿರ್ಮಿಸಿ ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ಈ ನಮೂನೆಯಲ್ಲಿ ರಂಗಭೂಮಿಯನ್ನು ಬೆಳೆಸುವುದು ‘ಥಿಯೇಟರ್ ಒಲಿಂಪಿಕ್ಸ್’ನ ಅಂತಾರಾಷ್ಟ್ರೀಯ ಸಮಿತಿಯ ಮಹತ್ವಾಕಾಂಕ್ಷೆ. ಅಮೆರಿಕದ ರಂಗಭೂಮಿ ನಿರ್ದೇಶಕ ರಾಬರ್ಟ್ ವಿಲ್ಸನ್ ‘ಥಿಯೇಟರ್ ಒಲಿಂಪಿಕ್ಸ್’ನ ವಿಶಿಷ್ಟ ಲಾಂಛನವನ್ನು ವಿನ್ಯಾಸಗೊಳಿಸಿದ್ದಾರೆ.
‘ಥಿಯೇಟರ್ ಒಲಿಂಪಿಕ್ಸ್’ನ ಅಂತಾರಾಷ್ಟ್ರೀಯ ಸಮಿತಿಯ ಮೊದಲ ಅಧಿಕೃತ ಸಭೆ 1994ರ ಜೂನ್ 18ರಂದು ನಡೆಯಿತು. ಈ ಸಭೆಯ ತೀರ್ಮಾನದಂತೆ ಪ್ರಪ್ರಥಮ ‘ಥಿಯೇಟರ್ ಒಲಿಂಪಿಕ್ಸ್’-ಅಂತಾರಾಷ್ಟ್ರೀಯ ನಾಟಕೋತ್ಸವ 1995ರ ಆಗಸ್ಟ್ ತಿಂಗಳಲ್ಲಿ ಗ್ರೀಸ್ ದೇಶದ ಡೆಲ್ಫಿಯಲ್ಲಿ ನಡೆಯಿತು. ಪ್ರತೀ ಉತ್ಸವಕ್ಕೂ ಒಂದು ಮುಖ್ಯಸ್ವರ-ಸಂಗತಿ(ಥೀಮ್) ಇರಬೇಕೆಂಬುದು ಅಂತಾರಾಷ್ಟ್ರೀಯ ಸಮಿತಿಯ ನಿರ್ಧಾರ. ಇಲ್ಲಿಯವರೆಗೆ ಆರು ದೇಶಗಳಲ್ಲಿ ‘ಥಿಯೇಟರ್ ಒಲಿಂಪಿಕ್ಸ್’ ನಾಟಕೋತ್ಸವ ನಡೆದಿದೆ. 1995-ಡೆಲ್ಫಿ-ಗ್ರೀಸ್-ವಿಷಯ:ರುದ್ರ ನಾಟಕ(ಟ್ರ್ಯಾಜಿಡಿ.) 1999-ಜಪಾನ್: ಭರವಸೆಗಳಿಗೆ ಬೀಜಾಂಕುರ (ಕ್ರಿಯೇಟಿಂಗ್ ಹೋಪ್). 2001-ಮಾಸ್ಕೊ: ಜನರಿಗಾಗಿ ರಂಗಭೂಮಿ (ಥಿಯೇಟರ್ ಫಾರ್ ಪೀಪಲ್). 2006-ತುರ್ಕಿ-ಪ್ರತಿಬಂಧಗಳ ಆಚೆ(ಬಿಯಾಂಡ್ ಬಾರ್ಸ್‌). 2010 ದಕ್ಷಿಣ ಕೊರಿಯ: ಪ್ರೀತಿ ಮತ್ತು ಮಾನವೀಯತೆ(ಲವ್ ಅಂಡ್ ಹ್ಯುಮಾನಿಟಿ). 2011 ಚೀನಾ: ಕನಸು(ಡ್ರೀಮ್). ಈಗ ಭಾರತದಲ್ಲಿ ಶುರುವಾಗಿರುವ ಈ ನಾಟಕೋತ್ಸವದ ಸ್ವರಸಂಗತಿ-ಸ್ನೇಹ ಪತಾಕೆ(ದಿ ಫ್ಲಾಗ್ ಆಫ್ ಫ್ರೆಂಡ್‌ಶಿಪ್).
       
ಥಿಯೆಟರ್ ಒಲಿಂಪಿಕ್ಸ್ ವೇದಿಕೆಯಲ್ಲಿ ರಂಗಕರ್ಮಿಗಳನ್ನು ಒಂದೆಡೆ ಕಲೆಹಾಕಿ ವಿಶ್ವದ ವಿವಿಧ ಭಾಗಗಳಲ್ಲಿನ ರಂಗ ಪ್ರಕಾರಗಳು, ರಂಗರೂಪಗಳು, ರಂಗ ಸಂಗೀತ, ರಂಗತಂತ್ರಗಳು ಸೇರಿದಂತೆ ಒಟ್ಟಾರೆಯಾಗಿ ರಂಗಭೂಮಿ ಪರಂಪರೆ ಮತ್ತು ಸಂಸ್ಕೃತಿ ಕುರಿತು ವಿಚಾರವಿನಿಮಯ ಮಾಡಿಕೊಳ್ಳುವ ಆಶಯ ಸ್ವಾಗತಾರ್ಹವಾದುದೇ. ಜೊತೆಗೆ ಇವತ್ತಿನ ರಂಗಭೂಮಿ ಪರಂಪರೆಯ ಅಧ್ಯಯನದ ಮೂಲಕ ಒಂದು ಸಾಧ್ಯತೆಯನ್ನು ಬೆಳೆಸುವ ಆಲೋಚನೆಯೂ ರಂಗಭೂಮಿಯ ಭವಿಷ್ಯದ ದೃಷ್ಟಿಯಿಂದ ಘನವಾದುದೇ. ಸಂಸ್ಕೃತ ನಾಟಕಗಳು ಮತ್ತು ಜಾನಪದ ರಂಗಭೂಮಿಯ ಶ್ರೀಮಂತ ಪರಂಪರೆ ಉಳ್ಳ ಭಾರತೀಯ ರಂಗಭೂಮಿಯ ಹಿನ್ನೆಲೆಯಲ್ಲಿ ಈ ವೇದಿಕೆ ಅರ್ಥಪೂರ್ಣ ಸಂವಾದ ಮತ್ತು ಕೊಡುಕೊಳ್ಳುವಿಕೆಗಳಿಗೆ ಉಪಯುಕ್ತವೆನಿಸುತ್ತದೆ. ಜೊತೆಗೆ ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿಕೊಂಡ ‘ಇಪ್ಟಾ’ (ಇಂಡಿನ್ ಪೀಪಲ್ಸ್ ಥಿಯೇಟರ್) ರಂಗಭೂಮಿ ಚಳವಳಿ, ಸ್ವಾತಂತ್ರ್ಯೋತ್ತರ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ನಾಟಕ ಶಾಲೆ(ಎನ್‌ಎಸ್‌ಡಿ) ಪ್ರಯೋಗಗಳು, ಎನ್‌ಎಸ್‌ಡಿ ಪ್ರಯೋಗ ರಂಗಭೂಮಿಯಲ್ಲಿ ಪ್ರಮುಖರಾದ ಇಬ್ರಾಹೀಂ ಅಲ್ಕಾಜಿ, ಮೋಹನ ರಾಕೇಶ್, ಬಾದಲ್ ಸರ್ಕಾರ್, ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್, ಸತ್ಯದೇವ್ ದುಬೆ, ಹಬೀಬ್ ತನ್ವೀರ್, ವಿಜಯ್ ತೆಂಡೂಲ್ಕರ್, ಸಫ್ದರ್ ಹಶ್ಮಿ ಮೊದಲಾದ ನಿರ್ದೇಶಕರು ಮತ್ತು ನಾಟಕಕಾರರ ಕೊಡುಗೆ ಅನನ್ಯವಾದುದು. ಹೀಗೆ, ಥಿಯೇಟರ್ ಒಲಿಂಪಿಕ್ಸ್ ನಾಟಕೋತ್ಸವಕ್ಕೆ ಭಾರತ ಪ್ರಶಸ್ತವಾದ ಆಯ್ಕೆ. ಈ ನಾಟಕೋತ್ಸವದಿಂದ ನಮಗೆ ಆಧುನಿಕ ಅಂತಾರಾಷ್ಟ್ರೀಯ ರಂಗಭೂಮಿಯ ದರ್ಶನವಾಗುತ್ತದೆ. ಅಷ್ಟೇ ಅಲ್ಲದೆ ಭಾರತೀಯರಿಗೂ ಭಾರತೀಯ ರಂಗಭೂಮಿಯನ್ನು ಅರಿತುಕೊಳ್ಳಲು ಒಂದು ಸದಾವಕಾಶವಾಗಿದೆ(ಈ ಉತ್ಸವದಲ್ಲಿ ಭಾರತೀಯ ನಾಟಕಗಳ ಪ್ರದರ್ಶನವೂ ಇರುತ್ತದೆ) ಎನ್ನುತ್ತಾರೆ, ಈ ಅಂತಾರಾಷ್ಟ್ರೀಯ ನಾಟಕೋತ್ಸವದ ಹೊಣೆ ಹೊತ್ತಿರುವ ಎನ್‌ಎಸ್‌ಡಿಯ ನಿರ್ದೇಶಕ ವಾಮನ್ ಕೆಂಡ್ರೆ. ವಿದೇಶಿಯರಿಗೆ ಹಾಗೂ ಸ್ವತಃ ಭಾರತೀಯರಿಗೆ ‘‘ಎರಡು ಸಾವಿರದಿಂದ ಐದು ಸಾವಿರ ವರ್ಷಗಳ ಇತಿಹಾಸವುಳ್ಳ ಭಾರತೀಯ ರಂಗಭೂಮಿಯನ್ನು ದರ್ಶನ ಮಾಡಿಸಬೇಕಾಗಿದೆ ಹಾಗೂ ಅದನ್ನು ಬೆಳೆಸಬೇಕಾಗಿದೆ’’ ಎನ್ನುವ ವಾಮನ್ ಅವರ ಪ್ರಕಾರ ಥಿಯೇಟರ್ ಒಲಿಂಪಿಕ್ ಉತ್ಸವದ ಪ್ರಭಾವದಿಂದ ಇಂದಿನ ಭಾರತೀಯ ರಂಗಭೂಮಿಗೆ ಅಗತ್ಯವಾಗಿರುವ ಕಂಪನ ಚಿಕಿತ್ಸೆ ಮತ್ತು ಪ್ರೋತ್ಸಾಹ ಎರಡೂ ಲಭಿಸಲಿದೆ. ಅಂದರೆ ಜಡವಾಗಿರುವ ನಮ್ಮ ರಂಗಭೂಮಿ ಈ ಉತ್ಸವದಿಂದಾಗಿ ಜಡತ್ವ ಕೊಡವಿಕೊಂಡು ಕ್ರಿಯಾಶೀಲವಾಗಬಹುದು. ಹೀಗೆ ಭಾವಿಸಲು ಕಾರಣಗಳಿಲ್ಲದೇ ಇಲ್ಲ. ಈ ಉತ್ಸವಕ್ಕೆ ಭಾರೀ ಪ್ರಮಾಣದಲ್ಲಿ ನಡೆದಿರುವ ಪ್ರಯತ್ನಗಳೇ ವಿಸ್ಮಯಕಾರಿಯಾದುದು. ಐವತ್ತೊಂದು ದಿವಸಗಳ ಕಾಲ ಐವತ್ತೊಂದು ಕೋಟಿ ಎಂಬತ್ತೆರಡು ಲಕ್ಷ ರೂ.ಗಳ ವೆಚ್ಚದಲ್ಲಿ ನಡೆಯಲಿರುವ ‘ಥಿಯೇಟರ್ ಒಲಿಂಪಿಕ್ಸ್ ನಲ್ಲಿ ಮೂವತ್ತೈದು ರಾಷ್ಟ್ರಗಳ ತಂಡಗಳು ಭಾಗವಹಿಸಲಿವೆ. ದೇಶದ ಹದಿನೇಳು ನಗರಗಳಲ್ಲಿ ನಡೆಯಲಿರುವ ಈ ಉತ್ಸವದಲ್ಲಿ 465 ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತೀ ನಾಟಕದ ಪ್ರದರ್ಶನಕ್ಕೂ ಒಂದೂವರೆ ಲಕ್ಷ ರೂ. ಸಂಭಾವನೆ ನೀಡಲಾಗುವುದು. ಜೊತೆಗೆ ಕಲಾವಿದರ ಪ್ರಯಾಣ, ಊಟ, ವಸತಿ ವೆಚ್ಚಗಳನ್ನೂ ಎನ್‌ಎಸ್‌ಡಿ ಭರಿಸುತ್ತದೆ. ಈ ಉತ್ಸವದಲ್ಲಿ ವಿದೇಶಿ ತಂಡಗಳ ನಾಟಕಗಳಲ್ಲದೆ ಭಾರತೀಯ ತಂಡಗಳ ನಾಟಕಗಳೂ ಪ್ರದರ್ಶನಗೊಳ್ಳಲಿವೆ. ದಿನವಿಡೀ ನಡೆಯುವ ಈ ಉತ್ಸವದಲ್ಲಿ ನಾಟಕಗಳ ಪ್ರದರ್ಶನದ ಜೊತೆಗೆ ವಿಚಾರ ಸಂಕಿರಣ, ಖ್ಯಾತನಾಮರಾದ ರಂಗ ನಿರ್ದೇಶಕರು ಮತ್ತು ರಂಗ ಕರ್ಮಿಗಳೊಂದಿಗೆ ಸಂವಾದ, ವಿಚಾರ ವಿನಿಮಯ ಮೊದಲಾಗಿ ದಿನವಿಡೀ ಕಾರ್ಯಕ್ರಮಗಳು ನಡೆಯುತ್ತವೆ. ಭಾರತೀಯ ನಾಟಕಗಳ ಪ್ರದರ್ಶನದ ಜೊತೆಗೆ ಭಾರತೀಯ ಆದಿವಾಸಿ ಕಲೆ ಮತ್ತು ರಂಗಭೂಮಿ,ಜಾನಪದ ಕಲೆ, ಬೀದಿ ನಾಟಕ, ರಂಗ ಸಂಗೀತ ಮೊದಲಾದ ತುಣುಕು ಕಾರ್ಯಕ್ರಮಗಳು ನಡೆಯುತ್ತವೆ.
ದಿಲ್ಲಿ, ಅಹಮದಾಬಾದ್,ಮುಂಬೈ, ಬೆಂಗಳೂರು, ತಿರುವನಂತಪುರಂ, ಚೆನ್ನೈ, ಭುವನೇಶ್ವರ, ಕೋಲ್ಕತಾ, ಅಗರ್ತಲಾ, ಇಂಫಾಲ್, ಗುವಾಹಟಿ, ಪಾಟ್ನಾ, ವಾರಾಣಾಸಿ, ಭೋಪಾಲ್, ಜೈಪುರ, ಚಂಡಿಗಡ ಮತ್ತು ಜಮ್ಮು ನಗರಗಳಲ್ಲಿ ‘ಥಿಯೇಟರ್ ಒಲಿಂಪಿಕ್’್ಸ ನಾಟಕೋತ್ಸವ ನಡೆಯಲಿದೆ. ಈ ತಿಂಗಳ 20ರಿಂದ ಮಾರ್ಚ್ 6ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಉತ್ಸವದ ನಾಟಕಗಳ ಪ್ರದರ್ಶನ ರವೀಂದ್ರ ಕಲಾಕ್ಷೇತ್ರ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ ಸಮೀಪದ ಮಲ್ಲತ್ತಹಳ್ಳಿ ಕಲಾಗ್ರಾಮದ ರಂಗಮಂದಿರಗಳಲ್ಲ್ಲಿ ನಡೆಯಲಿದೆ. ಕಲಾ ಗ್ರಾಮದ ರಂಗ ಮಂದಿರಗಳಲ್ಲಿ ವಿದೇಶಿ ನಾಟಕಗಳೂ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತೀಯ ನಾಟಗಳು ಪ್ರದರ್ಶನಗೊಳ್ಳಲಿವೆ. ಉತ್ಸವದಲ್ಲಿ ಎರಡು ಕನ್ನಡ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಒಂದು ಲಂಕೇಶರ ‘ಗುಣಮುಖ’. ಬಸವಲಿಂಗಯ್ಯ ನಿರ್ದೇಶನದ ಈ ನಾಟಕವನ್ನು ಬೆಂಗಳೂರಿನ ಎನ್‌ಎಸ್‌ಡಿ ತಂಡ ಅಭಿನಯಿಸಲಿದೆ.
‘ಥಿಯೇಟರ್ ಒಲಿಂಪಿಕ್’ನ ಧ್ಯೇಯ, ಉದ್ದೇಶಗಳು ಶ್ಲಾಘನೀಯವಾದುದೇ. ಪ್ರತೀ ವರ್ಷವೂ ಅನ್ಯದೇಶಗಳಲ್ಲಿ ಅದು ನಡೆಸುತ್ತಾ ಬಂದಿರುವ ಅಂತಾರಾಷ್ಟ್ರೀಯ ನಾಟಕೋತ್ಸವದ ‘ಸ್ವರಸಂಗತಿ’ಯೂ ಹೊಸತಲೆಮಾರಿನ ಆಶೋತ್ತರಗಳಿಗೆ ಸ್ಪಂದಿಸುವ ರೀತಿಯದ್ದಾಗಿದೆ. ಗತಕಾಲದ ಪರಂಪರೆ ಹಾಗೂ ಭವಿಷ್ಯದ ಬಗ್ಗೆ ಗಾಢ ಕಾಳಜಿ ಹೊಂದಿರುವ ‘ಥಿಯೇಟರ್ ಒಲಿಂಪಿಕ್ಸ್’ ವಿಶ್ವ ರಂಗಭೂಮಿಗೆ, ಅದರ ಮೂಲಕ ಮನುಕುಲಕ್ಕೆ, ಹೊಸ ದಿಗಂತವನ್ನು ಕಾಣಿಸಬಹುದೇ? ಕಾದು ನೋಡಬೇಕು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News