ಅಡಿಗ ಸಮಕಾಲೀನ ಮತ್ತು ಸಾರ್ವಕಾಲಿಕ ಕವಿ: ಕೆದಿಲಾಯ
ಉಡುಪಿ, ಫೆ.20: ಕನ್ನಡದ ನವ್ಯ ಕಾವ್ಯದ ಪ್ರವರ್ತಕ ಕವಿ ಗೋಪಾಲಕೃಷ್ಣ ಅಡಿಗ ಸಮಕಾಲೀನರಾಗಿದ್ದಂತೆ, ಸಾರ್ವಕಾಲಿಕ ಕವಿಯೂ ಆಗಿದ್ದರು. ಪ್ರತಿಮಾ ವಿಧಾನದಲ್ಲಿ ಬರೆದ ಅವರ ಕವಿತೆಗಳು, ಬಹು ಧ್ವನಿತ್ವವನ್ನು ಬಿಂಬಿಸುತ್ತಿವೆ ಎಂದು ಹಿರಿಯ ಲೇಖಕ ಬಿ.ವಿ.ಕೆದಿಲಾಯ ಹೇಳಿದ್ದಾರೆ.
ಎಂಜಿಎಂ ಕಾಲೇಜು ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಖ್ಯಾತ ವಿಮರ್ಶಕ ಪ್ರೊ.ವಿ.ಎಂ.ಇನಾಂದಾರ್ ನೆನಪಿನಲ್ಲಿ ನೀಡುವ 2017ನೇ ಸಾಲಿನ ‘ಇನಾಂದಾರ್ ವಿಮರ್ಶಾ ಪ್ರಶಸ್ತಿ’ಯನ್ನು ತಮ್ಮ ‘ಅಡಿಗ ನೆನಪು ಅಡಿಗಡಿಗೆ’ ಕೃತಿಗೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮಂಗಳವಾರ ನಡೆದ ‘ಮುದ್ದಣ ಸಾಹಿತ್ಯೋತ್ಸವ’ದಲ್ಲಿ ಇನಾಂದಾರ್ ಪ್ರಶಸ್ತಿ ಪ್ರದಾನ ನಡೆಯಿತು.
ನವೋದಯದ ಮೂಲಕ ತನ್ನ ಸಾಹಿತ್ಯ ಕೃಷಿ ಆರಂಭಿಸಿದ ಅಡಿಗ, ಬಹುಬೇಗನೇ ಅದರಿಂದ ಹೊರಬಂದು ಅಂದಿನ ಪ್ರಗತಿಶೀಲ ಚಳವಳಿಯಲ್ಲಿ ಗುರುತಿಸಿಕೊಂಡರು. ಅನಂತರ ಕನ್ನಡ ಸಾಹಿತ್ಯದಲ್ಲಿ ನವ್ಯಕಾವ್ಯ ಪರಂಪರೆಯನ್ನು ಪ್ರಾರಂಭಿಸಿದ ಅಡಿಗರು, ಈ ಪಂಥದ ಸರ್ವಶ್ರೇಷ್ಠ ಕವಿ ಎನಿಸಿಕೊಂಡರು ಎಂದು ಕೆದಿಲಾಯ ನುಡಿದರು.
ಪರಿಸರ ಪ್ರಜ್ಞೆಯ ಕುರಿತಂತೆ ಅರ್ಧ ಶತಮಾನಗಳ ಹಿಂದೆಯೇ ತನ್ನ ಕವನಗಳಲ್ಲಿ ಉಲ್ಲೇಖಿಸಿದ್ದ ಅಡಿಗರ ಮಾತು ಇಂದು ನಿಜಗೊಳ್ಳುತ್ತಿವೆ. ತನ್ನ ಕವನಗಳಲ್ಲಿ ಪ್ರತಿಮೆಗಳನ್ನು ವಿಪುಲವಾಗಿ ಬಳಸುವ ಅಡಿಗರ ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಅವರ ಭಾಷೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಆಧುನಿಕ ಕಾಲದ ದ್ವಂದ್ವ, ತುಮಲ ಹಾಗೂ ತಲ್ಲಣಗಳನ್ನು ಅವರು ಕಾವ್ಯದ ಮೂಲಕ ಪ್ರತಿಬಿಂಬಿಸಿದರು ಎಂದು ಕೆದಿಲಾಯ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗ ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಖ್ಯಾತ ಸಾಹಿತಿ ಡಾ.ಶ್ರೀಕಂಠ ಕೂಡಿಗೆ ‘ಕನ್ನಡ- ನಿನ್ನೆ, ಇಂದು, ನಾಳೆ’ ವಿಷಯದಲ್ಲಿ ಮಾತನಾಡಿ, ಭಾಷೆ ಎಂಬುದು ಹಿರಿಯರಿಂದ ಕಿರಿಯರಿಗೆ ಬರುವ ಬಳುವಳಿಯಾಗಿದೆ. ಅದನ್ನು ನಾವು ಬಳಸಿಕೊಳ್ಳಲು ವಿಫಲರಾಗಿದ್ದೇವೆ ಎಂದರು.
ಕನ್ನಡ ಉಳಿಸಿ ಹೋರಾಟ, ಚಳುವಳಿಗಳಿಂತ ನಮ್ಮಲ್ಲಿ ಸ್ವಜಾಗೃತಿ ಮೂಡ ಬೇಕಾಗಿದೆ. ಇಲ್ಲದಿದ್ದರೆ, ಕನ್ನಡ ಚಟುವಟಿಕೆಗಳೇ ನಿಲ್ಲುವ ಅಪಾಯವಿದೆ. ಇತರ ಭಾಷೆಗಳ ಗುಲಾಮರಾಗಿ ನಾವು ಕನ್ನಡವನ್ನು ಉಳಿಸಿಕೊಳ್ಳಲು ವಿಫಲರಾ ಗುತಿದ್ದೇವೆ. ಅನ್ನವನ್ನು ಅನ್ನ ಎನ್ನುವ ಪರಿವಾಟ ಬಿಟ್ಟಿದ್ದೇವೆ. ಸಂಬಂಧಗಳು ಆಂಟಿ, ಅಂಕಲ್‌ಗೆ ಸೀಮಿತಗೊಂಡಿವೆ. ಆಧುನಿಕ ತಂತ್ರಜ್ಞಾನ ಹಾಗೂ ಸ್ಮಾರ್ಟ್‌ಫೋನ್‌ನಿಂದ ಬರವಣಿಯೂ ನಿಂತಿದೆ. ಇದರಿಂದ ದೇಹದ ಭಾಗಗಳೂ ನಿಷ್ಕೃಿಯಗೊಂಡಿವೆ. ಇವುಗಳು ಕೈಮೀರುವ ಮೊದಲೇ ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದವರು ನುಡಿದರು. ಕನ್ನಡ ಉಳಿಸಿ ಹೋರಾಟ, ಚಳುವಳಿಗಳಿಂತ ನಮ್ಮಲ್ಲಿ ಸ್ವಜಾಗೃತಿ ಮೂಡ ಬೇಕಾಗಿದೆ. ಇಲ್ಲದಿದ್ದರೆ, ಕನ್ನಡ ಚಟುವಟಿಕೆಗಳೇ ನಿಲ್ಲುವ ಅಪಾಯವಿದೆಎಂದವರು ನುಡಿದರು.
ಮನುಷ್ಯರ ನಡುವೆ ಸೌಹಾರ್ದದ ಸೇತುವೆ ಕಟ್ಟಲು ಸಾಹಿತಿ ಹಾಗೂ ಕಲಾವಿದರಿಂದ ಮಾತ್ರ ಸಾಧ್ಯವಿದೆ. ಸಾಹಿತ್ಯ ಮನಸ್ಸಿನ ಸೌಹಾರ್ದ ಸೇತುವೆಯನ್ನು ಬೆಸೆಯಬೇಕು. ಸೌಹಾರ್ದ ಸಂಬಂಧ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಡಾ.ಕೂಡಿಗೆ ವಿವರಿಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಆರ್.ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪ್ರಶಸ್ತಿ ವಿಜೇತರನ್ನು ಪರಿಚಯಿಸಿ, ಅವರ ಕೃತಿಯ ವಿಶ್ಲೇಷಿಸಿದರು. ಕನ್ನಡ ಪ್ರಾಧ್ಯಾಪಕಿ ಸರಿತಾ ಕಾರ್ಯಕ್ರಮ ನಿರೂಪಿಸಿದರು