ಮುಅದ್ಸಿನ್ ವೃತ್ತಿಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಮುಹಮ್ಮದ್!
ಮಂಗಳೂರು, ಫೆ.22: ಕೃಷಿ-ಮಣ್ಣು ಎಲ್ಲರ ಕೈ ಹಿಡಿಯುವುದಿಲ್ಲ, ಸೆಳೆಯುವುದೂ ಇಲ್ಲ. ಸೆಳೆದರೆ ಅದರಿಂದ ದೂರ ಸರಿದು ನಿಲ್ಲಿಸಲು ಯಾರಿಂದಲೂ ಅಸಾಧ್ಯ ಎಂಬುದಕ್ಕೆ ಈ ಮುಅದ್ಸಿನ್ ಸಾಕ್ಷಿ. ಕಳೆದ 30 ವರ್ಷದಿಂದ ಇವರು ತನ್ನ ವೃತ್ತಿಯೊಂದಿಗೆ ಕೃಷಿ-ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
ಹರೇಕಳ ಗ್ರಾಮದ ಆಲಡ್ಕ ನಿವಾಸಿಯಾದ ಎ. ಅಬೂಬಕರ್-ಆಯಿಶಾ ದಂಪತಿಯ ಪುತ್ರನಾಗಿರುವ ಎಸ್. ಮುಹಮ್ಮದ್ (54) ಕಳೆದ 2 ವರ್ಷಗಳಿಂದ ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿಯಲ್ಲಿ ಮುಅದ್ಸಿನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಮೊದಲು 19 ವರ್ಷ ಆಲಡ್ಕ, 3 ವರ್ಷ ಕಣಕೂರು ಜುಮಾ ಮಸೀದಿಯಲ್ಲಿ ಮುಅದ್ಸಿನ್ ಆಗಿ ಸೇವೆ ಸಲ್ಲಿಸಿದ್ದರು. ಈ ಮಧ್ಯೆ 6 ವರ್ಷ ಮನೆ ಮನೆಗೆ ತೆರಳಿ ಜವುಳಿ ವ್ಯಾಪಾರದಲ್ಲೂ ತೊಡಗಿಸಿಕೊಂಡಿದ್ದರು. ಹೀಗೆ ಮುಅದ್ಸಿನ್ ವೃತ್ತಿ ಮತ್ತು ಜವುಳಿ ವ್ಯಾಪಾರದಲ್ಲಿ ತೊಡಗಿಸಿಕೊಂಡರೂ ಕೂಡ ಬಿಡುವಿನ ಮಧ್ಯೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಇತರರಿಗೆ ಇವರು ಮಾದರಿಯಾಗಿದ್ದಾರೆ.
ಅಂದರೆ ತಾನಿರುವ ಮಸೀದಿಯ ಅಂಗಳವೋ, ತನ್ನ ಬಾಡಿಗೆ ಮನೆಯಲ್ಲೋ ಬಸಳೆ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಟೊಮಟೊ ಇತ್ಯಾದಿ ಬೆಳೆದು ಕೃಷಿಗಳನ್ನು ಬೆಳೆಯುತ್ತಾರೆ. ಹಾಗೇ ಅದನ್ನು ಮಾರಾಟ ಮಾಡಿ ದಿನವಹಿ ಖರ್ಚಿಗೆ ಬಳಸುತ್ತಾರೆ. ಮಸೀದಿಯ ಅಂಗಳದಲ್ಲಿ ಬೆಳೆದ ತರಕಾರಿಯನ್ನು ಮಸೀದಿಯಲ್ಲೇ ವಾರಕ್ಕೊಮ್ಮೆ ಏಲಂ ಮಾಡಿ ಒಂದು ಪಾಲನ್ನು ಮಸೀದಿಗೆ ನೀಡುವ ಇವರು ಮನೆಯಲ್ಲಿ ಬೆಳೆದುದನ್ನು ಸ್ಥಳೀಯ ಅಂಗಡಿಗೋ, ಮನೆಗಳಿಗೋ ಮಾರಾಟ ಮಾಡಿ ಗಮನ ಸೆಳೆಯುತ್ತಿದ್ದಾರೆ.
ಅಂದಹಾಗೆ ಇವರ ಕೃಷಿ ಚಟುವಟಿಕೆ ಅಥವಾ ಉಪವೃತ್ತಿ ಇಷ್ಟಕ್ಕೆ ಸೀಮಿತವಲ್ಲ. ಬಿಡುವಿದ್ದಾಗ ಆಸುಪಾಸಿನ ತೋಟದ ಕೂಲಿ ಕೆಲಸಕ್ಕೂ ಹೋಗುತ್ತಾರೆ. ಅಲ್ಲಿ ಹಾರೆ-ಪಿಕ್ಕಾಸು ಹಿಡಿಯಲು, ಬುಟ್ಟಿ ತಲೆಗೇರಿಸಲು ಹಿಂಜರಿಯುವವರಲ್ಲ. ಇನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಸ್ತ್ರಿಗೆ ಸಹಾಯಕನಾಗಿಯೂ ಇವರು ಹೋಗುತ್ತಾರೆ. ಅಷ್ಟೇ ಅಲ್ಲ, ಅಡಿಕೆ ಸುಲಿಯಲೂ ಕೂಡ ಹೋಗುತ್ತಾರೆ. ಈಗ 1 ಕೆಜಿ ಅಡಿಕೆ ಸುಲಿದರೆ 12 ರೂ. ಸಿಗುತ್ತದೆ. ಮುಹಮ್ಮದ್ ಅವರು ದಿನಕ್ಕೆ ಕನಿಷ್ಠ 20 ಕೆ.ಜಿ. ಅಡಿಕೆ ಸುಲಿದರೆ 240 ರೂ. ಸಂಪಾದಿಸುತ್ತಾರೆ. ಹೀಗೆ ಉಪವೃತ್ತಿ ಮಾಡುವಾಗ ಒಂದು ದಿನವೂ ತನ್ನ ಮೂಲವೃತ್ತಿಗೆ ಯಾವುದೇ ತೊಂದರೆ, ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ. ಮೈಮುರಿದು ದುಡಿದರೆ ಮಾತ್ರ ಮನಸ್ಸಿಗೆ ಶಾಂತಿ, ಸಮಾಧಾನ, ಆರೋಗ್ಯಕ್ಕೆ ಹಿತ ಎಂದು ಮುಹಮ್ಮದ್ ಹೇಳುತ್ತಾರೆ.
ಹೆಂಡತಿ, 3 ಗಂಡು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಹೊಂದಿರುವ ಮುಹಮ್ಮದ್ ಅವರಿಗೆ ಬದುಕಿನ ಕಷ್ಟ ಎಳೆಯ ಪ್ರಾಯದಲ್ಲೇ ಅರಿವಿಗೆ ಬಂದಿತ್ತು. ಅದರಂತೆ 14-15 ವರ್ಷ ಪ್ರಾಯವಾಗಿದ್ದಾಗಲೇ ದುಡಿಯುವುದು ಅನಿವಾರ್ಯವಾಗಿತ್ತು. ಹಾಗಾಗಿ ಶಾಲೆಯ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರೂ ಕೂಡ ಮದ್ರಸ ಶಿಕ್ಷಣವನ್ನು ಒಂದಷ್ಟು ಮುಂದುವರಿಸಿದರಲ್ಲದೆ, ತನ್ನೂರಿನಲ್ಲೇ ಮುಅದ್ಸಿನ್‌ರಾಗಿ ವೃತ್ತಿ ಆರಂಭಿಸಿದರು. ಸುಮಾರು 19 ವರ್ಷ ಊರಲ್ಲೇ ಈ ವೃತ್ತಿಯೊಂದಿಗೆ ಕೃಷಿ-ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಗಮನ ಸೆಳೆದರು.
"ಮದ್ರಸದ ವಿದ್ಯಾರ್ಥಿಗಳಿಗೆ ಕಲಿಸುವುದರೊಂದಿಗೆ ಮಸೀದಿಯನ್ನು ಶುಚಿಗೊಳಿಸುವ ಈ ವೃತ್ತಿಯಿಂದ ನನ್ನ ಕುಟುಂಬವನ್ನು ಸಲಹುವುದು ಕಷ್ಟವಾಗಿತ್ತು. ಹಾಗಾಗಿ ನಾನು ಅನಿವಾರ್ಯವಾಗಿ ಕೃಷಿ ಚಟುವಟಿಕೆಯತ್ತ ಆಸಕ್ತಿ ವಹಿಸಿದೆ. ಅದೂ ಕೂಡ ಕೆಲಸವೇ. ಅದು ನೀಡುವ ಫಲಗಳನ್ನು ನೋಡುವಾಗ ಮನಸ್ಸಿಗೆ ಆನಂದವಾಗುತ್ತದೆ. ಜೊತೆಗೆ ಅದನ್ನು ಮಾರಾಟ ಮಾಡಿದರೆ ಸಿಗುವ ಅಲ್ಪಸ್ವಲ್ಪ ಹಣದಿಂದ ಕುಟುಂಬ ನಿರ್ವಹಣೆ ಮಾಡಲು ಸುಲಭವಾಗುತ್ತದೆ. ಹೀಗೆ ದುಡಿದು ಸಂಪಾದಿಸಿದ ಹಣದಿಂದ 2008ರಲ್ಲಿ ಉಮ್ರಾ ಯಾತ್ರೆ ಪೂರೈಸಿದೆ ಎನ್ನುವ ಮುಹಮ್ಮದ್, ಮುಅದ್ಸಿನ್, ಮುಅಲ್ಲಿಂ, ಖತೀಬ್ ಆದವರು ಉಪವೃತ್ತಿ ಮಾಡಿದರೆ ಅದನ್ನು ಯಾರೂ ಕೀಳಾಗಿ ಕಾಣಬೇಕಿಲ್ಲ. ಅವರನ್ನೂ ಅವರ ವೃತ್ತಿಯನ್ನೂ ಗೌರವದಿಂದ ಕಂಡರೆ ಅದರಿಂದ ಕುಟುಂಬಕ್ಕೆ, ಸಮಾಜಕ್ಕೆ, ಸಮುದಾಯಕ್ಕೆ ಒಳಿತು" ಎಂದು ಅಭಿಪ್ರಾಯಪಡುತ್ತಾರೆ.