'ಕ್ಯಾಂಪಸ್ ಟಾಕ್': ಮಂಗಳೂರು ವಿವಿ ಕ್ಯಾಂಪಸ್ ನಲ್ಲಿ ಹೀಗೊಂದು ವಿಶಿಷ್ಟ ಚರ್ಚಾ ಕಾರ್ಯಕ್ರಮ
ಮಂಗಳೂರು, ಮಾ.13: ಕೊಣಾಜೆಯಲ್ಲಿರುವ ಮಂಗಳಗಂಗೋತ್ರಿ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ನಲ್ಲಿ ಇಲ್ಲಿನ ಕೆಲವು ಸಮಾನಮನಸ್ಕ ವಿದ್ಯಾರ್ಥಿಗಳು 'ಕ್ಯಾಂಪಸ್ ಟಾಕ್' ಎಂಬ ಹೆಸರಿನಡಿಯಲ್ಲಿ ಚಹಾ ಜೊತೆ ಮಾತುಕತೆ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಸೋಮವಾರ ನೂತನ, ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕನ್ನಡದ ನವ್ಯ ಸಾಹಿತ್ಯದ ಪ್ರಮುಖ ಕವಿ ಪಿ.ಲಂಕೇಶ್ ಅವರ 'ಅವ್ವ', ಇಂಗ್ಲಿಷ್ ಮತ್ತು ಮಲಯಾಳಂನ ಹೆಸರಾಂತ ಲೇಖಕಿ, ಕವಯಿತ್ರಿ ಕಮಲಾ ಸುರಯ್ಯಾ ಅವರ 'ಮೈ ಗ್ರಾಂಡ್ ಮದರ್ಸ್ ಹೌಸ್' ಹಾಗೂ ಪ್ರಚಲಿತ ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರಾದ ಆರಿಫ್ ರಾಜಾ ಅವರ 'ಹೊಲಿಗೆ ಯಂತ್ರದ ಅಮ್ಮಿ' ಎಂಬ ತಾಯಿಯ ಪರಿಕಲ್ಪನೆಯ ಕವಿತೆಗಳ ಕುರಿತು ಚಹಾ ಜೊತೆ ಚರ್ಚೆ ನಡೆಸಲಾಯಿತು. ಜೊತೆಗೆ ಆಸಕ್ತ ವಿದ್ಯಾರ್ಥಿಗಳು ಇದೇ ಪರಿಕಲ್ಪನೆಯಡಿಯಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಅನೌಪಚಾರಿಕ ನೆಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್. ಧರ್ಮ ಮತ್ತು ಸಾಮಾಜಿಕ ಹೋರಾಟಗಾರ್ತಿ ಡಾ.ವಿದ್ಯಾ ದಿನಕರ್ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಪ್ರೊ.ಧರ್ಮ, 'ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು 28 ವರ್ಷಗಳಿಂದ ವಿದ್ಯಾರ್ಥಿಗಳಿಂದ ಇಂತಹ ಪ್ರಯತ್ನ ನಡೆದಿರಲಿಲ್ಲ. ಇದೊಂದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳ ಜೊತೆ ಬೆರೆತು ಮುಕ್ತವಾಗಿ ಚರ್ಚಿಸಲು ಇದೊಂದು ಉತ್ತಮ ಅವಕಾಶ. 'ಕ್ಯಾಂಪಸ್ ಟಾಕ್'ನಡಿ ಇನ್ನೂ ಹೆಚ್ಚು ಮತ್ತು ಗಂಭೀರ ವಿಷಯಗಳ ಚರ್ಚೆಗಳು ಸದಾ ನಡೆಯುತ್ತಿರಲಿ' ಎಂದು ಆಶಿಸಿದರು.
ಚರ್ಚೆಯಲ್ಲಿ ಹಲವು ವಿಭಾಗಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.
*ಏನಿದು ಕ್ಯಾಂಪಸ್ ಟಾಕ್ ?*
ಕ್ಲಾಸ್ ರೂಮಿನ ನಾಲ್ಕು ಗೋಡೆಗಳ ಪಾಠ ಸಾಕೆನಿಸಿ ಕ್ಯಾಂಪಸ್ ನ ಒಳಗೆ ಸಾಹಿತ್ಯ, ಕಲೆ, ವಿಚಾರಗಳ ಹತ್ತು ದಿನಗಳಿಗೊಮ್ಮೆ ಚರ್ಚೆಯ ಮೂಲಕ ಅರಿವಿನ ದಾಹ ನೀಗಿಸಲು ಕ್ಯಾಂಪಸ್ ನ ಕೆಲವು ವಿದ್ಯಾರ್ಥಿಗಳು ಒಟ್ಟಾಗಿ ರೂಪಿಸಿದ ಒಂದು ಪುಟ್ಟ ತಂಡ 'ಕ್ಯಾಂಪಸ್ ಟಾಕ್'.
''ಇದೊಂದು ತೀರಾ ವಿಭಿನ್ನವಾದ ತಂಡ. ಈ ತಂಡದ ಮೂಲಕ ನಡೆಸುವ ಕಾರ್ಯಕ್ರಮಗಳು ತೀರಾ ಅನೌಪಚಾರಿಕವಾಗಿರುತ್ತದೆ. ಇದು ಕ್ಯಾಂಪಸ್ ಟಾಕ್ ನಡಿಯಲ್ಲಿ ನಡೆದ ಮೊತ್ತ ಮೊದಲ 'ಮಾತುಕತೆ'ಯಾಗಿದೆ. ಇನ್ನು ಮುಂದೆಯೂ ಹೆಚ್ಚಿನ ಪ್ರಯತ್ನಗಳನ್ನು ಕ್ಯಾಂಪಸ್ ಟಾಕ್ ನಡೆಸಲಿದೆ''
-ಶರೀಫ್ ಕಾಡುಮಠ.