ಅಂಗೈಯಗಲ ಜಾಗದಲ್ಲಿ ತರಕಾರಿ ಕಣಜ ರೂಪಿಸಿದ ಚೆನ್ನಯಕೋಡಿಯ ಮೌಲವಿ
ಚೆನ್ನಯಕೋಡಿ, ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿರುವುದು ಸುಮಾರು ನಲ್ವತ್ತು ಮನೆಗಳು. ಅದರಲ್ಲಿ ಮೂವತ್ತೆರಡು ಮನೆಗಳು ಮುಸ್ಲಿಮರದ್ದು.ಈ ಪೈಕಿ ಬಹುತೇಕರು ಕೂಲಿ ಕಾರ್ಮಿಕರು. ಒಂದಿಬ್ಬರು ತುಂಡು ಭೂಮಿಯ ಅತೀ ಸಣ್ಣ ರೈತರು. ಇಂತಹ ಹಳ್ಳಿಗೊಂದು ಪುಟ್ಟ ಮಸೀದಿಯಿದೆ, ಮದ್ರಸವಿದೆ. ಅದು ಏಕೋಪಾಧ್ಯಾಯ ಮದ್ರಸ. ಏಳನೇ ತರಗತಿಯವರೆಗಿರುವ ಈ ಮದ್ರಸದಲ್ಲಿ ಮೂವತ್ತೈದು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಕಳೆದ ರಮಝಾನ್ ತಿಂಗಳ ನಂತರ ಈ ಮಸೀದಿ ಮದ್ರಸಕ್ಕೆ ಮೌಲವಿಯಾಗಿ ಬಂದವರು ಮಂಗಳೂರು ತಾಲೂಕಿನ ಬೋಳಿಯಾರು ಗ್ರಾಮದ ಅಬ್ದುಲ್ ಅಝೀಝ್ ಮುಸ್ಲಿಯಾರ್. ಧಾರ್ಮಿಕ ವಿದ್ಯಾಭ್ಯಾಸ ಕಲಿತು ಕೆಲವು ಸಮಯ ಮಸೀದಿಗಳಲ್ಲಿ ಸೇವೆ ಸಲ್ಲಿಸಿ ಆ ಬಳಿಕ ಕೊಲ್ಲಿ ರಾಷ್ಟ್ರದಲ್ಲಿ ದುಡಿದು ಮತ್ತೆ ಊರಿಗೆ ಮರಳಿ ಧಾರ್ಮಿಕ ವೃತ್ತಿಯನ್ನೇ ಆಯ್ದುಕೊಂಡವರು ಅಝೀಝ್.
ಚೆನ್ನಯಕೋಡಿಯ ಈ ಮಸೀದಿಗೆ ಒಟ್ಟು ಹದಿನೈದು ಸೆಂಟ್ಸ್ ಜಮೀನಿದೆ. ಇಲ್ಲಿ ಮಸೀದಿ ಕಟ್ಟಡ, ಮದ್ರಸ ಕಟ್ಟಡ, ಎರಡು ಪುಟ್ಟ ಬಾಡಿಗೆ ಬಿಡಾರಗಳು, ಶೌಚಾಲಯ, ಬಾವಿ, ಧ್ವಜಸ್ಥಂಭ, ಪುಟ್ಟ ಅಂಗಳ ಎಲ್ಲವೂ ಇದೆ. ಇಲ್ಲಿ ಒಂದಂಗುಲ ಜಾಗವು ವ್ಯರ್ಥವಾಗಿಲ್ಲ. ಆದರೆ ಮನಸ್ಸಿದ್ದರೆ ಮಾರ್ಗ ಎಂದು ಸಾಧಿಸಿ ತೋರಿಸಿದವರು ಇಲ್ಲಿನ ಮದ್ರಸ ಅಧ್ಯಾಪಕ ಅಬ್ದುಲ್ ಅಝೀಝ್ ಮುಸ್ಲಿಯಾರ್.
ಮಸೀದಿಯ ಜಮೀನಿನ ಒಂದು ಮೂಲೆಯಲ್ಲಿ ಕಸ ಕಡ್ಡಿಗಳನ್ನು ಎಸೆಯುವ ಹೊಂಡದಂತಹ ಒಂದು ಸೆಂಟ್ ಜಮೀನು ಖಾಲಿ ಬಿದ್ದಿತ್ತು. ಆ ಜಾಗವನ್ನು ಸದ್ಬಳಕೆ ಮಾಡಿದರೆ ಹೇಗೆಂದು ಯೋಚಿಸಿದಾಗ ಅವರಿಗೆ ಹೊಳೆದ ಯೋಚನೆ ಕೃಷಿ ಚಟುವಟಿಕೆ. ಅದರಂತೆ ಕಾರ್ಯಪ್ರವೃತ್ತರಾದ ಅಝೀಝ್ ಮುಸ್ಲಿಯಾರ್ ಅಲ್ಲಿ ತುಂಬಿದ್ದ ಕಸಕಡ್ಡಿಗಳನ್ನು ಸ್ವತಃ ತೆರವುಗೊಳಿಸಿದರು. ಹಾರೆ ಪಿಕ್ಕಾಸು ಎತ್ತಿ ಆ ಪುಟ್ಟ ಜಮೀನನ್ನು ಸಮತಟ್ಟುಗೊಳಿಸಿ, ಭೂಮಿಯನ್ನು ಹದಗೊಳಿಸಿದರು. ಕೆಲವು ತರಕಾರಿ ಬೀಜಗಳನ್ನು ತಂದು ಬಿತ್ತಿದರು. ಬಸಳೆ ಕೃಷಿಗೆ ಚಪ್ಪರ ಕಟ್ಟಿದರು. ಪೋಲಾಗುತ್ತಿದ್ದ ನಮಾಝಿನ ಅಂಗಸ್ನಾನಕ್ಕೆ ಬಳಸಿದ ನೀರನ್ನು ತರಕಾರಿ ತೋಟಕ್ಕೆ ಹರಿದುಹೋಗುವಂತೆ ಮಾಡಿದರು. ನೋಡನೋಡುತ್ತಿದ್ದಂತೆಯೇ ತರಕಾರಿ ಬಳ್ಳಿಗಳು ಹಬ್ಬಿದವು, ಗಿಡಗಳು ಬೆಳೆದು ನಿಂತವು. ಕಸ ಎಸೆಯುತ್ತಿದ್ದ ಒಂದು ಸೆಂಟ್ಸ್ ಜಾಗ ಹಸಿರಿನಿಂದ ನಳನಳಿಸಿದವು.
ಬಳ್ಳಿಗಳ ತುಂಬಾ ಕುಂಬಳಕಾಯಿ, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ಅಲಸಂಡೆ, ಮುಳ್ಳುಸೌತೆ, ತುಂಬಿದವು. ಬಸಳೆ ಚಪ್ಪರ ಬಸಳೆಯಿಂದ ನೆರಳಾಯಿತು. ಪಪ್ಪಾಯಿ ಗಿಡ ಫಲ ನೀಡತೊಡಗಿತು. ಬಾಳೆಗಿಡ ಗೊನೆ ಹಾಕಿತು. ಈಗಾಗಲೇ ಹಲವು ಕೊಯ್ಲುಗಳಾದವು. ಈ ಬೆಳೆಗಳನ್ನು ಮಸೀದಿಯಲ್ಲಿ ವಾರಕ್ಕೊಮ್ಮೆ ಏಲಂ ಕರೆದು ಮಾರಾಟ ಪ್ರಾರಂಭವಾಯಿತು. ಒಂದು ಚಿಟಿಕೆಯಷ್ಟೂ ರಾಸಾಯನಿಕ ಗೊಬ್ಬರ ಬಳಸದ, ಕೇವಲ ಸಾವಯವ ಗೊಬ್ಬರಗಳಿಂದಲೇ ಬೆಳೆಯುವ ಆರೋಗ್ಯ ಪೂರ್ಣ ತರಕಾರಿಗೆ ಅಲ್ಲೇ ಒಳ್ಳೆಯ ಬೇಡಿಕೆಯಿದೆ.
ಈಗಾಗಲೇ ಹೇಳಿದಂತೆ ಅದೊಂದು ಬಡ ಜಮಾಅತ್. ಮೂವತ್ತೆರಡು ಮನೆಗಳವರು ಕೊಡುವ ಮಾಸಿಕ ಇನ್ನೂರು ರೂಪಾಯಿ ವಂತಿಗೆ ಮತ್ತು ಎರಡು ಪುಟ್ಟ ಬಿಡಾರಗಳಿಂದ ಬರುವ ಸಣ್ಣ ಬಾಡಿಗೆಯ ಹೊರತು ಏನೇನೂ ಆದಾಯ ಆ ಮಸೀದಿಗಿಲ್ಲ. ಇದೀಗ ಮೌಲವಿಯವರ ತರಕಾರಿ ಕೃಷಿ ಅವರ ಭಾರವನ್ನು ತುಸು ಕಡಿಮೆ ಮಾಡಿದೆ.