ಉಡುಪಿ: 34 ಅಭ್ಯರ್ಥಿಗಳಲ್ಲಿ ಒಬ್ಬರೇ ಮಹಿಳೆ!
ಉಡುಪಿ, ಎ.29: ಉಡುಪಿ ಜಿಲ್ಲೆಯ ಒಟ್ಟು ಮತದಾರರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಇಡೀ ಜಿಲ್ಲೆಗೆ ಒಬ್ಬರೇ!
ಉಡುಪಿ ಜಿಲ್ಲೆಯ ಕಾಪು, ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ಕ್ಷೇತ್ರಗಳಲ್ಲಿ ಒಟ್ಟು 34 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಪೈಕಿ ಮಹಿಳಾ ಅಭ್ಯರ್ಥಿ ಕಾಪು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಾಜಿ ಡಿವೈಎಸ್ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್ (ಬಿಜೆಸಿ) ಪಕ್ಷದ ಸ್ಥಾಪಕಿ ಅನುಪಮಾ ಶೆಣೈ ಒಬ್ಬರೇ.
2018ರ ಫೆ.28ರವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 9,78,503 ಮತದಾರರ ಪೈಕಿ 4,70,730 ಪುರುಷರು ಹಾಗೂ 5,07,754 ಮಹಿಳೆಯರಿದ್ದಾರೆ. ಅದೇ ರೀತಿ ಪ್ರತಿ ಕ್ಷೇತ್ರದಲ್ಲೂ ಕೂಡ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೈಂದೂರು- 2,18,863ರಲ್ಲಿ 1,06,196 ಪುರುಷರು, 1,12,653 ಮಹಿಳೆಯರು, ಕುಂದಾಪುರ- 1,97,061ರಲ್ಲಿ 94,653 ಪುರುಷರು, 1,02,408 ಮಹಿಳೆಯರು, ಉಡುಪಿ- 2,03,777ರಲ್ಲಿ 98,759 ಪುರುಷರು, 1,05,015 ಮಹಿಳೆಯರು, ಕಾಪು- 1,79,794ರಲ್ಲಿ 85,446ಪುರುಷರು, 94,347 ಮಹಿಳೆಯರು, ಕಾರ್ಕಳ- 179008ರಲ್ಲಿ 85,676 ಪುರುಷರು, 93331 ಮಹಿಳಾ ಮತದಾರರಿದ್ದಾರೆ.
ಈ ಬಾರಿ ಬೈಂದೂರು 9, ಕುಂದಾಪುರ 7, ಉಡುಪಿ 10, ಕಾರ್ಕಳ 8, ಕಾಪು 5 ಸಹಿತ ಒಟ್ಟು 39 ಮಂದಿ ನಾಮಪತ್ರ ಸಲ್ಲಿಸಿದ್ದು, ಐವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈಗ ಬೈಂದೂರು 9, ಕುಂದಾಪುರ 5, ಉಡುಪಿ 8, ಕಾರ್ಕಳ 7, ಕಾಪು 5 ಸಹಿತ ಒಟ್ಟು 34 ಮಂದಿ ಕಣದಲ್ಲಿದ್ದಾರೆ. ಇವರ ಪೈಕಿ ಅನುಪಮಾ ಶೆಣೈ ಒಬ್ಬರೇ ಮಹಿಳಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಂತಹ ಪ್ರಮುಖ ಪಕ್ಷಗಳಲ್ಲಿ ಒಂದೇ ಒಂದು ಮಹಿಳೆಗೆ ಅವಕಾಶ ಸಿಕ್ಕಿಲ್ಲ. ಅನುಪಮಾ ಶೆಣೈ ತಾನೇ ಸ್ಥಾಪಿಸಿದ ಪಕ್ಷ ಎಂಬ ನೆಲೆಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಸ್ಥಾಪಿತವಾಗಿರುವ ಅಖಿಲ ಭಾರತ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಐದು ಕ್ಷೇತ್ರಗಳಲ್ಲೂ ಕೂಡ ಪುರುಷರನ್ನೇ ಕಣಕ್ಕಿಳಿಸಿದೆ.
2013ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 7, ಕುಂದಾಪುರ 6, ಕಾಪು 11, ಕಾರ್ಕಳ 9, ಬೈಂದೂರು 13 ಸೇರಿದಂತೆ ಒಟ್ಟು 46 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇದರಲ್ಲಿ ಬೈಂದೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸುರಯ್ಯ ಬಾನು ಹಾಗೂ ಕಾರ್ಕಳ ಕ್ಷೇತ್ರದಿಂದ ಕೆ.ಪಿ. ದ್ಮಾವತಿ ಮಹಿಳಾ ಅಭ್ಯರ್ಥಿಯಾಗಿದ್ದರು.
2013ರ ಚುನಾವಣೆಯ ಸಂದರ್ಭದಲ್ಲೂ ಜಿಲ್ಲೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯ ಮತದಾರರಾಗಿದ್ದರು ಮಾತ್ರವಲ್ಲದೆ, ಹೆಚ್ಚು ಮತದಾನ ಮಾಡಿದವರು ಕೂಡ ಮಹಿಳೆಯರೇ ಆಗಿದ್ದರು. ಒಟ್ಟು 8,74,155 ಮತದಾರ ರಲ್ಲಿ 3,54,202 ಮಹಿಳೆಯರು ಹಾಗೂ 3,11,435 ಪುರುಷರು ಮತದಾನವನ್ನು ಮಾಡಿದ್ದರು. ಆದರೆ ಮಹಿಳಾ ಸ್ಪರ್ಧಿಗಳಾದ ಸುರಯ್ಯೆ ಬಾನು 1,023 ಮತ್ತು ಪದ್ಮಾವತಿ 478 ಮತಗಳನ್ನು ಪಡೆದಿದ್ದರು.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಪುರುಷ ಹಾಗೂ ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಆದರೆ ಅವರಿಗೆ ಬೇಕಾದ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಇಂದಿನ ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದು ಅಗತ್ಯವಾಗಿದೆ. ಆ ಮೂಲಕ ಮಹಿಳೆಗೆ ಸೂಕ್ತ ಸ್ಥಾನಮಾನ ದೊರೆಯಬೇಕು.
-ಅನುಪಮಾ ಶೆಣೈ, ಬಿಜೆಸಿ ಅಭ್ಯರ್ಥಿ, ಕಾಪು ಕ್ಷೇತ್ರ
ಜಿಲ್ಲೆಯಿಂದ ಇಬ್ಬರೇ ಶಾಸಕಿಯರು
ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಈವರೆಗೆ ಇಬ್ಬರು ಮಹಿಳೆಯರು ಮಾತ್ರ ಶಾಸಕಿಯಾಗಿ ಆಯ್ಕೆಯಾಗಿರುವುದು. ಒಬ್ಬರು ವಿನ್ನಿ ಎಫ್.ಫೆರ್ನಾಂಡಿಸ್, ಮತ್ತೊಬ್ಬರು ಮನೋರಮಾ ಮಧ್ವರಾಜ್.
1967ರ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರದಲ್ಲಿ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದ್ದ ವಿನ್ನಿ ಎಫ್.ಫೆರ್ನಾಂಡಿಸ್ ಕಾಂಗ್ರೆಸ್‌ನ ಎಂ.ಎಂ.ಹೆಗ್ಡೆ ವಿರುದ್ಧ ಜಯಗಳಿಸಿದ್ದರು. 1978, 1985, 1989ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಮನೋರಮಾ ಮಧ್ವರಾಜ್ ಕ್ರಮವಾಗಿ ಜನತಾ ಪಾರ್ಟಿಯ ಶ್ರೀಧರ್ ಕಲ್ಮಾಡಿ, ಬಿಜೆಪಿಯ ವಿ.ಎಸ್.ಆಚಾರ್ಯ ಹಾಗೂ ಪಕ್ಷೇತರ ಅಭ್ಯರ್ಥಿ ಯು.ಆರ್.ಸಭಾಪತಿ ವಿರುದ್ಧ ಜಯಗಳಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು.