ಬಿಜೆಪಿಗೆ ಮುಳುವಾಗುತ್ತಿರುವ ಜಾತಿಕಾರ್ಡ್; ಕಾಂಗ್ರೆಸ್ ಗೆ ಅಭಿವೃದ್ಧಿಯೇ ಆನೆಬಲ
ಭಟ್ಕಳ, ಮೇ 5: ಮತದಾನದಕ್ಕೆ ಇನ್ನು ಆರು ದಿನ ಮಾತ್ರ ಬಾಕಿ. ರಾಜಕೀಯ ಪಕ್ಷಗಳು ಏನೆಲ್ಲ ಆಟವಾಡಬೇಕು ಅದನ್ನೆಲ್ಲ ಆಡಲು ಆರಂಭಿಸಿದ್ದಾರೆ. ತೀರ ಭಾವನಾತ್ಮಕ ವಿಷಯಗಳನ್ನು ಕೆದುಕುತ್ತ, ಜಾತಿ ಮತ್ತು ಧರ್ಮದ ಲೆಕ್ಕಚಾರದಲ್ಲಿ ಮುಳುಗಿದ ಪಕ್ಷ ಒಂದೆಡೆಯಾದರೆ ತಾನು ಈ ಹಿಂದಿನ ಅವಧಿಯಲ್ಲಿ ಮಾಡಿದ ಜನಾಭಿವೃದ್ಧಿ ಕಾರ್ಯಗಳು, ಬಡ ನಿರ್ಗತಿಕರ ಸೇವೆ, ರಸ್ತೆ, ಸೇತುವೆ, ಧಾರ್ಮಿಕ ಸೇವೆ ಮುಂತಾದ ಅಭಿವೃದ್ಧಿಪರ ವಿಷಯಗಳನ್ನು ಮುಂದಿಟ್ಟು ಕೊಂಡು ಮತ್ತೊಂದು ಪಕ್ಷ ಮತಯಾಚನೆ ಮಾಡುತ್ತಿದೆ.
ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿ.ಜೆ.ಪಿ., ಎಂ.ಇ.ಪಿ. ಪಕ್ಷ, ಹಾಗೂ ಮೂವರು ಪಕ್ಷೇತರರು ಸೇರಿಂದಂತೆ ಒಟ್ಟು ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ವಿಜೇತ ಅಭ್ಯರ್ಥಿಗೆ ಸೆಡ್ಡು ಹೊಡೆದು ನಿಂತು ಕೇವಲ 2-3 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ ಜೆ.ಡಿ.ಎಸ್ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಕಣದಿಂದ ಹಿಂದೆ ಸರಿದಿದ್ದು ಇಲ್ಲಿ ಆರು ಮಂದಿ ಅಭ್ಯರ್ಥಿಗಳಿದ್ದು ಕೇವಲ ಕಾಂಗ್ರೇಸ್ ಮತ್ತು ಬಿಜೆಪಿಗಳ ನಡುವೇ ನೇರಾ ನೇರ ಸ್ಪರ್ಧೆಯಿದ್ದು ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿ.ಜೆ.ಪಿ., ಕೆ.ಜೆ.ಪಿ., ಜನತಾದಳ ಹಾಗೂ ಪಕ್ಷೇತರ ಅಭ್ಯರ್ಥಿ ಮಂಕಾಳ ವೈದ್ಯ ಅವರ ನಡುವೆ ಸ್ಪರ್ಧೆ ಎರ್ಪಟ್ಟಿದ್ದು ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿದ ಪಕ್ಷೇತರ ಅಭ್ಯರ್ಥಿ ಮಂಕಾಳ ವೈದ್ಯ ಆಯ್ಕೆಯಾಗಿದ್ದರು. ಜನತಾದಳ ಎರಡನೇ ಸ್ಥಾನ ಗಳಿಸಿದ್ದರೆ, ಕೆ.ಜೆ.ಪಿ., ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಮೂರು, ನಾಲ್ಕು ಹಾಗೂ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದವು. ಈ ಬಾರಿ ನೇರ ಸ್ಪರ್ಧೆ ಇರುವುದರಿಂದ ಇಲ್ಲಿ ಬಿ.ಜೆ.ಪಿ. ತುಸು ಬಿರುಸಿನ ಪ್ರಚಾರ ಕೈಗೊಂಡಿದೆ. ಈ ಹಿಂದೆ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಕಾಂಗ್ರೆಸ್ ಪಕ್ಷ ಸೇರಿ ಕ್ಷೇತ್ರದಲ್ಲಿ ಸಾಕ್ಟು ಅಭಿವೃದ್ಧಿಯನ್ನು ಮಾಡಿದ್ದ ಮಾಂಕಾಳ್ ವೈದ್ಯ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು ತಾವು ಮಾಡಿದ ಅಭಿವೃದ್ಧಿ ಕಾರ್ಯ, ಸಾಮಾಜಿಕ ನೆರವು, ವಯಕ್ತಿಕ ಸಂಪರ್ಕದ ನೆಲೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಇಲ್ಲಿ ಜಾತಿ ಲೆಕ್ಕಚಾರ ನಡೆಯಲ್ಲ: ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಇಲ್ಲಿಯ ತನಕವೂ ಕೂಡಾ ಯಾವುದೇ ಅಭ್ಯರ್ಥಿ ಜಾತಿ ಆಧಾರದ ಮೇಲೆ ವಿಜಯ ಸಾಧಿಸಿದ ದಾಖಲೆಯೇ ಇಲ್ಲ. ಈ ಹಿಂದಿನ ಎಲ್ಲಾ ಚುನಾವಣೆಯಲ್ಲಿಯೂ ಕೂಡಾ ಎಲ್ಲಾ ವರ್ಗದವರ ಮತಗಳಿಸಿದವರೇ ಆಯ್ಕೆಯಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿ.ಜೆ.ಪಿ. ಹಿಂದುತ್ವ ಮತ್ತು ಜಾತಿ ಎನ್ನುವ ಎರಡು ಟ್ರಂಪ್ ಕಾರ್ಡಗಳನ್ನು ಉಪಯೋಗಿಸುತ್ತಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಇದುವೇ ಹರಿದಾಡುತ್ತಿದೆ. ಕ್ಷೇತ್ರದಲ್ಲಿ ಅತಿಹೆಚ್ಚು ಮತದಾರರನ್ನು ಹೊಂದಿರುವ ನಾಮಧಾರಿ ಸಮಾಜಕ್ಕೆ ಸೇರಿದ ವ್ಯಕ್ತಿಗೆ ಬಿಜೆಪಿ ಟಿಕೇಟ್ ನೀಡಿದ್ದರಿಂದಾಗಿ ತಮ್ಮ ಜಾತಿಯ ವ್ಯಕ್ತಿಯನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದರಿಂದಾಗಿ ಉಳಿದ ಇತರ ಚಿಕ್ಕಚಿಕ್ಕ ಸಮಾಜದವರಿಗೆ ತಪ್ಪುಸಂದೇಶ ರವಾನಿಸಿದಂತಾಗಿ ಅವರು ಕೂಡ ಈಗ ನಾವೆಲ್ಲ ಒಟ್ಟಾಗಿ ಮತ್ತೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂಬ ಹಂತಕ್ಕೆ ಬಂದು ತಲುಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗರ ಜಾತಿ ಹಾಗೂ ಹಿಂದುತ್ವದ ಲೆಕ್ಕಚಾರ ಇಲ್ಲಿ ತಲೆಕೆಳೆಗಾಗುವ ಸ್ಪಷ್ಟ ಚಿತ್ರಣ ಕಂಡುಬರುತ್ತಿದೆ. ಈ ಬಾರಿ ಬಿ.ಜೆ.ಪಿ. ಅಭಿವೃದ್ಧಿ, ಪಕ್ಷದ ಅಧಿಕಾರಕ್ಕಿಂತ ಹೆಚ್ಚು ಒಂದೇ ಜಾತಿಯ ಓಲೈಕೆಯ ಕುರಿತೇ ಹೆಚ್ಚು ಒತ್ತು ಕೊಡುತ್ತಿರುವುದು ಆರಿಸಿ ಬಂದ ನಂತರ ಜಾತಿ ಎಂ.ಎಲ್.ಎ. ಆಗಬಹುದೆಂದು ನಂಬಿದ ಇತರ ಸಮಾಜದ ಜನ ತಿರುಗಿ ಬಿದ್ದರೂ ಆಶ್ಚರ್ಯವಿಲ್ಲ. ಈಗಾಗಲೇ ವಿಶ್ವಕರ್ಮ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹಲವು ಸಣ್ಣ ಸಣ್ಣ ಸಮಾಜಗಳು ಒಂದಾಗುವ ಮುನ್ಸೂಚನೆ ನೀಡಿದಂತಾಗಿದೆ.
ಹಿಂದೂ-ಮುಸ್ಲಿಮ್ ಎಂದು ಭಯ ಹುಟ್ಟಿಸುತ್ತಿರುವ ಸಂದೇಶಗಳು: ಇಲ್ಲಿನ ಮುಸ್ಲಿಮರ ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಕಳೆದ ಬಾರಿ ಜೆ.ಡಿಎಸ್ಸಿಗೆ ಬೆಂಬಲ ನೀಡಿದ್ದು ಈ ಬಾರಿ ಅದು ಸಿದ್ದರಾಮಯ್ಯರ ಅಭಿವೃದ್ಧಿಯನ್ನು ನೆಚ್ಚಿಕೊಂಡು ಭಟ್ಕಳ ಕ್ಷೇತ್ರಕ್ಕೆ ಕಾಂಗ್ರೆಸ್ ನ್ನು ಬೆಂಬಲಿಸುವ ನಿರ್ಣಯವನ್ನು ಕೈಕೊಂಡಿದೆ. ಸಾಮಾಜಿಕ ಜಾಲ ತಾಣದಲ್ಲಿ ಇದನ್ನೇ ಬಹುದೊಡ್ಡ ಪ್ರಚಾರದ ಅಸ್ತ್ರವನ್ನಾಗಿಸಿಕೊಂಡು ಭಟ್ಕಳದಲ್ಲಿ ಹೈಟೆಕ್ ಖಸಾಯಿಖಾನೆ ಮಾಡಬೇಕು, ಮುಸ್ಲಿಮ್‌ರ ಮೇಲೆ ಕೇಸು ಮಾಡಬಾರದು, ಮುಸ್ಲಿವರು ಹೇಳಿದಂತೆ ಎಂ.ಎಲ್.ಎ. ಕೇಳಬೇಕು ಇತ್ಯಾದಿ ಶರತ್ತು ವಿಧಿಸಿದ್ದಾರೆನ್ನುವ ಸುಳ್ಳು ಸುದ್ದಿಗಳನ್ನೇ ಹರಿಯ ಬಿಡುತ್ತಿದ್ದು, ಭಟ್ಕಳದ ಪರಿಸ್ಥಿತಿಯನ್ನು ಅರಿತವರಿಗೆಲ್ಲ ಇದು ಪ್ರಚಾರದ ತಂತ್ರ ಎಂದು ಅರಿವಾಗಿದೆ. ರಾಷ್ಟ್ರೀಯ ಪಕ್ಷವೊಂದು ಮತಬೇಟೆಗಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಈಗಾಗಲೇ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸುತ್ತಿರುವವರ ಕುರಿತು ಎರಡು ಪ್ರಕರಣಗಳು ಮುರ್ಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.
ಕಾಂಗ್ರೆಸ್ ಮತ್ತು ಬಿ.ಜೆ.ಪಿ. ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಅಭಿವೃದ್ಧಿ, ಬಡವರ ಪರ ವಾಗಿ ಮಾಡಿದ ಕೆಲಸವನ್ನು ಬಿಂಬಿಸಿ ಮತಯಾಚನೆ ಮಡುತ್ತಿದೆ , ಬಿ.ಜೆ.ಪಿ. ಪ್ರಚಾರದಲ್ಲಿ ಕೇವಲ ಹಿಂದುತ್ವ, ಜಾತಿ ಎನ್ನುವ ಎರಡೇ ವಿಷಯವನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸುತ್ತಿದೆ. ಒಟ್ಟಾರೆ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದ್ದು ಈ ಬಾರಿಯ ಚುನಾವಣೆ ಕುತೂಹಲ ಕೆರಳಿಸಿದ್ದಂತೂ ಸತ್ಯ.