​ಹಿರಿಯ ಸಾಹಿತಿ ಬಿ.ಎಂ.ರೋಹಿಣಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ

Update: 2018-06-03 17:28 GMT

ಮಂಗಳೂರು, ಜೂ. 2: ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಮತ್ತು ಮಹಿಳಾ ಘಟಕ ಜಂಟಿ ಆಶ್ರಯದಲ್ಲಿ ನಗರ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ರವಿವಾರ ನಡೆದ ‘ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಹಿರಿಯ ಸಾಹಿತಿ, ವಿಮರ್ಶಕಿ ಬಿ.ಎಂ.ರೋಹಿಣಿ ಅವರಿಗೆ ‘ವಿಶುಕುಮಾರ್ ಪ್ರಶಸ್ತಿ ಪ್ರದಾನ’ ಮಾಡಿ ಗೌರವಿಸಲಾಯಿತು.

ಹಿರಿಯ ಕಾದಂಬರಿಕಾರ ವಿಶುಕುಮಾರ್ ಸಾಹಿತ್ಯಿಕವಾಗಿ ಶ್ರೀಮಂತರು. ನಾನು ಕೇವಲ ನಾಲ್ಕು- ಐದು ಸೆಂಟ್ಸ್ ಜಮೀನಿನಲ್ಲಿ ಸಣ್ಣ ಮಟ್ಟದ ಸಾಹಿತ್ಯಿಕ ಬೇಸಾಯ ಮಾಡುವವಳು ಎಂದು ಹಿರಿಯ ಸಾಹಿತಿ, ವಿಮರ್ಶಕಿ ಬಿ.ಎಂ.ರೋಹಿಣಿ ವಿಶ್ಲೇಷಿಸಿದರು. ಪ್ರಸ್ತುತ ವಿಶುಕುಮಾರ್ ಕತೆಗಾರ, ಕಾದಂಬರಿಗಾರ, ನಟ- ನಿರ್ದೇಶಕ, ಪತ್ರಕರ್ತರಾಗಿ ವಿವಿಧ ವಿಭಾಗಗಳಲ್ಲಿ ಹೆಸರು ಮಾಡಿದವರು. ಅವರ ಹಲವು ಕಾದಂಬರಿ ಹಾಗೂ ಇತರ ಕೃತಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅವುಗಳನ್ನು ಮರು ಮುದ್ರಿಸುವ ಕಾಲ ಬರಲಿ. ಯುವ ವಾಹಿನಿ ಈ ನಿಟ್ಟಿನಲ್ಲಿ ಆಸಕ್ತಿ ಹೆಚ್ಚಿನ ಆಸಕ್ತಿ ವಹಿಸುವ ಭರವಸೆ ಇರುವುದಾಗಿ ಅವರು ಆಶಿಸಿದರು.

ನಾನು ಬೆಳೆಯಲು ಬೀಡಿ ಕಂಪನಿಗಳು, ಗೇರು ಬೀಜ ಕಂಪೆನಿಗಳು, ಆಕಾಶವಾಣಿ, ಮಾಧ್ಯಮಗಳು ಹೆಚ್ಚಿನ ಸಹಕಾರ ನೀಡಿವೆ. ಇದರಿಂದಾಗಿ ನಾನು ಲೇಖಕಿಯಾಗಿ ಗುರುತಿಸಿಕೊಳ್ಳಲು ಮತ್ತು ವೇದಿಕೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ ಎಂದರು. ನನಗೆ ವಯಸ್ಸು 74 ರ ಆಗಿದ್ದರೂ 24 ರ ಮನಸ್ಸು ನನ್ನದು. ಸಾಧನೆ ಮಾಡಬೇಕೆಂಬ ಹುರುಪು ಇಂದಿಗೂ ಇದೆ. ಮಾಡಬೇಕಾದ ಕೆಲಸಗಳು ಹಲವು ಇವೆ ಎಂದವರು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಂಘಟಕಿ ಕೆ.ಎ.ರೋಹಿಣಿ ಮಾತನಾಡಿ, ಬಿ.ಎಂ. ರೋಹಿಣಿ ಅವರು ಛಲವಾದಿ. ನಿಜವಾಗಿಯೂ ಪ್ರಶಸ್ತಿ ಅವರ ಸಾಧನೆಗೆ ಸಂದ ಗೌರವ ಎಂದರು. 74 ರ ಈ ವಯಸ್ಸಿನಲ್ಲಿಯೂ ಬಿಲ್ಲವರ ಗುತ್ತಿನ ಮನೆಗಳ ಬಗ್ಗೆ ಕ್ಷೇತ್ರ ಕಾರ್ಯ ನಡೆಸಿ ಸಂಶೋಧನೆ ನಡೆಸುತ್ತಿರುವುದು ಸಾಹಿತ್ಯಿಕ ಕೆಲಸಗಳ ಬಗ್ಗೆ ಅವರಲ್ಲಿರುವ ತುಡಿತವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕರ್ಮಿ ವಿ.ಜಿ.ಪಾಲ್, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು.ಯುವ ಸಾಹಿತಿ, ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯುವ ವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಸಾಧು ಪೂಜಾರಿ ಪ್ರಸ್ತಾವನೆಗೈದರು. ಆಯ್ಕೆ ಸಮಿತಿ ಸದಸ್ಯರ ಪರವಾಗಿ ಪ್ರಭಾಕರ ನೀರುಮಾರ್ಗ ಮಾತನಾಡಿದರು. ರಾಜೇಶ್ ಸುವರ್ಣ ಮತ್ತು ಶುಭಾ ರಾಜೇಂದ್ರ ಪ್ರಶಸ್ತಿ ವಿಜೇತರ ಪರಿಚಯಿಸಿದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News